ಹಣ್ಣು, ತರಕಾರಿಗಳ ಮುಕ್ತ ಮಾರಾಟಕ್ಕೆ ಅವಕಾಶ: ಗೋವಿಂದ ಕಾರಜೋಳ

ಬೆಂಗಳೂರು, ಏ.1, ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಜಾರಿಯಲ್ಲಿರುವ ಲಾಕ್ ಡೌನ್ ನಿಂದ ಸಂಕಷ್ಟ  ದಲ್ಲಿರುವ ರೈತರ ನೆರವಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು  ಮುಂದಾಗಿದ್ದು, ರೈತರು ತಂದ ದ್ರಾಕ್ಷಿ, ದಾಳಿಂಬೆ, ಕಲ್ಲಂಗಡಿ ಸೇರಿದಂತೆ ಹಣ್ಣು ಮತ್ತು  ತರಕಾರಿಗಳನ್ನು ಖರೀದಿಸುವಂತೆ ಹಾಪ್ ಕಾಮ್ಸ್ ಗಳಿಗೆ ಸೂಚಿಸಿದ್ದಾರೆ ಎಂದು  ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ತಿಳಿಸಿದ್ದಾರೆ. ರೈತರು  ತಾವು ಬೆಳೆದ ಹಣ್ಣು , ತರಕಾರಿಗಳನ್ನು  ರಸ್ತೆ, ಹಳ್ಳ, ಕೊಳ್ಳ ಹಾಗೂ ನದಿಗಳಿಗೆ  ಚೆಲ್ಲದೇ ಹಾಪ್ ಕಾಮ್ಸ್ ಗಳಿಗೆ ಅಥವಾ ಮಾರುಕಟ್ಟೆಗಳಿಗೆ ಮುಕ್ತವಾಗಿ ಮಾರಾಟ ಮಾಡಬೇಕು. 

ಹಾಪ್ ಕಾಮ್ಸ್ ಗಳು ರೈತರು ತಂದ ಹಣ್ಣು ತರಕಾರಿಗಳನ್ನು ಖರೀದಿಸಿ, ಸಾರ್ವಜನಿಕರಿಗೆ  ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಾರಾಟಮಾಡಬೇಕು. ಸರಕು ಸಾಗಾಣಿಕೆ ವಾಹನಗಳನ್ನು  ತಡೆಯದಂತೆ ಈಗಾಗಲೇ  ಪೊಲೀಸರಿಗೆ ಸೂಚನೆ ನೀಡಲಾಗಿದೆ. ರೈತರು  ಆತಂಕಕ್ಕೊಳಗಾಗಬಾರದು. ತಾವು ಬೆಳೆದ ಬೆಳೆಗಳನ್ನು ಮುಕ್ತವಾಗಿ ಮಾರಾಟ ಮಾಡಬೇಕು. ಈ  ಕುರಿತು ಯಾವುದೇ ಸಮಸ್ಯೆಗಳಿದ್ದರೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೆ ,  ಜಿಲ್ಲಾಧಿಕಾರಿಗಳು ಇತ್ಯರ್ಥ ಪಡಿಸಲಿದ್ದಾರೆ. ಆದರೆ ಮುಂಜಾಗ್ರತಾ ಕ್ರಮಗಳನ್ನು  ಅನುಸರಿಸಬೇಕು. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಆರೋಗ್ಯ ಸಂರಕ್ಷಣೆಯ ಕಡೆ ನಿಗಾ  ವಹಿಸಬೇಕು ಎಂದು ಡಿಸಿಎಂ ಮನವಿ ಮಾಡಿದ್ದಾರೆ.