ಹಂಪಿ ದೇವಾಲಯಗಳಿಗೆ ಭಕ್ತರಿಗೆ ಅವಕಾಶ: ಶಿಲ್ಪ ಕಲಾ ದರ್ಶನ ಭಾಗ್ಯ ಇನ್ನೂ ಇಲ್ಲ

ಬಳ್ಳಾರಿ, ಜೂ 8,ಕೊರೋನಾ ವೈರಸ್ ನಿಯಂತ್ರಣ ಉದ್ದೇಶದಿಂದ ಜಾರಿಗೊಳಿಸಲಾಗಿದ್ದ ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ 75 ದಿನಗಳಿಂದ ಪ್ರವಾಸಿಗರಿಲ್ಲದೇ ಬಣಗುಡುತ್ತಿದ್ದ ಸುಪ್ರಸಿದ್ಧ ಹಂಪಿಯಲ್ಲಿ ಇಂದಿನಿಂದ ದೇವಸ್ಥಾನಗಳಿಗೆ ಭಕ್ತರಿಗೆ ಪ್ರವೇಶ ನೀಡಲಾಗಿದೆ. ಆದರೆ ಹಂಪಿಯ ಐತಿಹಾಸಿಕ ಶಿಲ್ಪ ಕಲಾ ತಾಣಗಳಿಗೆ ನಿರ್ಬಂಧ ಮುಂದುವರೆದಿದ್ದು, ದೇವಾಲಗಳ ನೆಪದಲ್ಲಿ ಹಂಪಿಯ ಐತಿಹಾಸಿಕ ತಾಣಗಳನ್ನು ದೇವಸ್ಥಾನಗಳ ಆಸುಪಾಸಿನಲ್ಲಿ ವೀಕ್ಷಿಸಬಹುದಾಗಿದೆ. ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿರುವುದರಿಂದ ಭಕ್ತಾದಿಗಳು ಹಂಪಿಯತ್ತ ಸಾಗಿ‌ದ್ದು, ಹಂಪಿಗೆ ಜೀವಕಳೆ ಬಂದಿದೆ. ಇಂದಿನಿಂದ ಹಂಪಿಯ ವಿರೂಪಾಕ್ಷ, ಪಂಪಾಂಬಿಕೆ, ಉದ್ದಾನ ವೀರಭದ್ರ ಮೊದಲಾದ ದೇವಸ್ಥಾನಗಳಿಗೆ ಭಕ್ತರ ದಂಡು ಹರಿದುಬರತ್ತದೆ.

ಕೇವಲ ದೇವರ ದರ್ಶನ‌ ಮಾತ್ರ ಇರುವ ಕಾರಣ ಮಂಗಳಾರತಿ ಪಡೆದು ಭಕ್ತರು ಹೊರಗೆ ಬರುತ್ತಿದ್ದಾರೆ. ತೀರ್ಥ ಪ್ರಸಾದ ವಿತರಣೆ ಇಲ್ಲ. ಅಲ್ಲದೆ ವಿಶೇಷ ಪೂಜೆ ಹೋಮಗಳಿಗೂ ಅವಕಾಶ ಕಲ್ಪಿಸಿಲ್ಲ.ಲಾಕ್ ಡೌನ್ ನಿಂದ ವಿಶ್ವ ಪರಂಪರೆಯ ತಾಣ ಹಂಪಿಯಲ್ಲಿನ  ವಿರೂಪಾಕ್ಷ ಸೇರಿದಂತೆ ಎಲ್ಲಾ ದೇವಸ್ಥಾನಗಳು ಮತ್ತು ಶಿಲ್ಪ‌ಕಲಾ ಸ್ಮಾರಕಗಳ ದರ್ಶನ, ವೀಕ್ಷಣೆಗೆ ನಿರ್ಬಂಧ ಹೇರಲಾಗಿತ್ತು.ಇದರಿಂದ ಕಳೆದ ಮಾರ್ಚ್ 23 ರಿಂದ  ದೇವಸ್ಥಾನಗಳ ಮತ್ತು  ಶಿಲ್ಪ ಕಲಾ ಸ್ಮಾರಕಗಳ ವೀಕ್ಷಣೆ ಬಂದ್ ಆಗಿತ್ತು. ಅಷ್ಟೇ ಅಲ್ಲದೆ ಹಂಪಿಗೆ ವಾಹನಗಳ ಪ್ರವೇಶವನ್ನು ಸಹ ನಿಷೇಧಿಸಲಾಗಿತ್ತು. ಇದರಿಂದಾಗಿ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿ ಜನರಿಲ್ಲದೆ ಬಣಗುಡುತ್ತಿತ್ತು.ಆದರೆ ದೇವಸ್ಥಾನಗಳಲ್ಲಿ‌ ಪೂಜಾರಿಗಳು ಪೂಜಾ ಕೈಂಕರ್ಯ ನಿಲ್ಲಿಸಿರಲಿಲ್ಲ. ಪ್ರತಿದಿನ ದೈನಂದಿನ ಪೂಜಾ ಕೈಂಕರ್ಯ ನಡೆಯುತ್ತಿತ್ತು. ಬಸ್ ಸೌಲಭ್ಯ ಇಲ್ಲದ ಕಾರಣ ಬಹುತೇಕ ಜನ ಸ್ವಂತ ವಾಹನಗಳಲ್ಲಿ ಬರುತ್ತಿದ್ದಾರೆ.ಭಕ್ತಾದಿಗಳು ದೇವಸ್ಥಾನದ  ಬಾಗಿಲಲ್ಲಿ ಫೀವರ್ ಚೆಕಪ್‌ಮಾಡಿಸಿಕೊಂಡು ಸ್ಯಾನಿಟೈಸರ್ ನಿಂದ ಕೈ ಒರೆಸಿಕೊಂಡು ಒಳಗಡೆ ಪ್ರವೇಶಿಸಬೇಕು. ವ್ಯಕ್ತಿಗತ ಅಂತರ ಕಾಯ್ದುಕೊಂಡು ದರ್ಶನಕ್ಕೆ ಮಾಡಬೇಕು ಎಂದು ಸೂಚಿಸಲಾಗಿದೆ.