ವಿಜಯಪುರ, ನ 4: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಸತ್ಯ ಬಯಲಾಗಿದೆ ಎಂದು ಮಾಜಿ ಗೃಹ ಸಚಿವ ಎಂ ಬಿ ಪಾಟೀಲ್ ತಿಳಿಸಿದ್ದಾರೆ.
ವಿಜಯಪುರದ ಅರಕೇರಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಡಿಯೋ ಲೀಕ್ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು, ಆಡಿಯೋದಲ್ಲಿ ಯಡಿಯೂರಪ್ಪ ಸತ್ಯ ಹೇಳಿದ್ದಾರೆ. ಈವರೆಗೆ ಯಡಿಯೂರಪ್ಪ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಬಿಜೆಪಿಯವರು ಸೇರಿ ಆಪರೇಶನ್ ಕಮಲ ಮಾಡಿದ್ದು, ರಹಸ್ಯವಾಗಿತ್ತು. ಈಗ ಆಡಿಯೋ ಲೀಕ್ ಆದ ಮೇಲೆ ಅಧಿಕೃತಗೊಂಡಿದೆ ಎಂದು ಆರೋಪಿಸಿದರು.
ಇಲ್ಲಿಯವರೆಗೆ ಬಿಜೆಪಿಯವರು ಆತ್ಮ ವಂಚನೆ ಮಾಡಿಕೊಳ್ಳುತ್ತಿದ್ದರು. ಸದ್ಯ ಬಣ್ಣ ಬಯಲಾಗಿದೆ. ಹೈಕಮಾಂಡ್ ನಿಂದ ಮುಖ್ಯಮಂತ್ರಿಗೆ ಬೆದರಿಕೆ ಬಂದ ಮೇಲೆ ಮತ್ತೆ ಉಲ್ಟಾ ಹೊಡೆದಿದ್ದಾರೆ. ಇಲ್ಲಿಯವರೆಗೆ ಜನರಿಗೆ ಅನಧಿಕೃವಾಗಿ ಗೊತ್ತಿದ್ದದ್ದನ್ನು ಈಗ ಯಡಿಯೂರಪ್ಪ ಅಧಿಕೃತಗೊಳಿಸಿದ್ದಾರೆ ಎಂದರು.
ಆಡಿಯೋ ಲೀಕ್ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈವಾಡವಿದೆ ಎಂದು ಬಿಜೆಪಿ ಆರೋಪಿಸುತ್ತಿರುವುದು ಚಿಲ್ಲರೆ ರಾಜಕಾರಣ ಎಂದು ಕಿಡಿಕಾರಿದರು.
ಬಿಜೆಪಿಯಿಂದ ಟಿಕೆಟ್ ಕೇಳಿದವರು ಈ ಕೆಲಸ ಮಾಡಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಿದ್ದರಾಮಯ್ಯ ಅವರು ಒಬ್ಬ ಬ್ಲಾಕ್ ಮೇಲರ್ ಎಂಬ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು,
ಸಂಸದೆ ಶೋಭಾ ಕರಂದ್ಲಾಜೆ ಅವರು ದೊಡ್ಡವರು. ಅವರ ಬಗ್ಗೆ ಏನೂ ಹೇಳುವುದಿಲ್ಲ ಎಂದು ವ್ಯಂಗ್ಯವಾಗಿ ನುಡಿದರು.