ಧಾರವಾಡ, ಮೇ 12,ಕೋವಿಡ್ 19 ತಪಾಸಣೆ ಹೆಚ್ಚಿಸುವ ದೃಷ್ಟಿಯಿಂದ ಜಿಲ್ಲೆಯ ಕುಂದಗೋಳ,ನವಲಗುಂದ ಹಾಗೂ ಕಲಘಟಗಿಯ ತಾಲ್ಲೂಕು ಆಸ್ಪತ್ರೆಗಳಲ್ಲಿ ಮೂಗು ಮತ್ತು ಗಂಟಲು ದ್ರವದ ಪ್ರಯೋಗಾಲಯ ಮಾದರಿಗಳ ಸಂಗ್ರಹ ಘಟಕಗಳು ಕಾರ್ಯಾರಂಭ ಮಾಡಿವೆ. ಜಿಲ್ಲೆಯಲ್ಲಿ ಬರುವ ದಿನಗಳಲ್ಲಿ ಪರೀಕ್ಷೆಗಳ ಪ್ರಮಾಣ ಗಣನೀಯವಾಗಿ ಹೆಚ್ಚಳ ಮಾಡುವ ದೃಷ್ಟಿಯಿಂದ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಈ ನಿರ್ದೇಶನ ನೀಡಿದ್ದರು. ನವಲಗುಂದ ಮತ್ತು ಕುಂದಗೋಳ ತಾಲೂಕು ಆಸ್ಪತ್ರೆಗಳಲ್ಲಿ ಈಗಾಗಲೇ ಎರಡು ದಿನಗಳ ಹಿಂದೆ ಸ್ವ್ಯಾಬ್ ಸಂಗ್ರಹಣೆ ಕಾರ್ಯ ಪ್ರಾರಂಭವಾಗಿತ್ತು.
ಬುಧವಾರ ಕಲಘಟಗಿಯ ತಾಲೂಕು ಆಸ್ಪತ್ರೆಯಲ್ಲಿ ಈ ಘಟಕ ಕಾರ್ಯಾರಂಭ ಮಾಡಿತು. ಜಿಲ್ಲೆಯ ಹುಬ್ಬಳ್ಳಿಯ ಕಿಮ್ಸ್ ಮತ್ತು ರೈಲ್ವೆ ಆಸ್ಪತ್ರೆ, ಧಾರವಾಡದ ಜಿಲ್ಲಾಸ್ಪತ್ರೆ ಮತ್ತು ಎಸ್‍ಡಿಎಂ ಆಸ್ಪತ್ರೆ, ಮೂರು ತಾಲೂಕು ಆಸ್ಪತ್ರೆಗಳು ಹಾಗೂ ಸಂಚಾರಿ ಸ್ವ್ಯಾಬ್ ಸಂಗ್ರಹಣಾ ಕೇಂದ್ರಗಳು ಜೊತೆಗೆ ಅಂತಾರಾಜ್ಯಗಳಿಂದ ಬರುವ ಪ್ರಯಾಣಿಕರ ಪರೀಕ್ಷೆಗಾಗಿ ಧಾರವಾಡ ಕೃಷಿ ಆವರಣ, ಹುಬ್ಬಳ್ಳಿಯ ಗಬ್ಬೂರ ಚೆಕ್‍ಪೋಸ್ಟ್ ಬಳಿ ಸ್ವ್ಯಾಬ್ ಸಂಗ್ರಹಣಾ ಬೂತ್‍ಗಳನ್ನು ತೆರೆಯಲಾಗಿದೆ. ಇದರಿಂದ ಜಿಲ್ಲೆಯಲ್ಲಿ ಒಟ್ಟು ಹತ್ತು ಸ್ವ್ಯಾಬ್ ಸಂಗ್ರಹಣಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಇದು ರಾಜ್ಯದಲ್ಲಿ ಹೆಚ್ಚು ಸ್ವ್ಯಾಬ್ ಸಂಗ್ರಹಣಾ ಘಟಕಗಳನ್ನು ಹೊಂದಿರುವ ಜಿಲ್ಲೆಗಳಲ್ಲಿ ಪ್ರಮುಖ ಸ್ಥಾನದಲ್ಲಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಯಶವಂತ ಮದೀನಕರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ: ಶಿವಕುಮಾರ್ ಮಾನಕರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಸುಜಾತಾ ಹಸವಿಮಠ, ಡಾ: ಎಸ್.ಎಂ. ಹೊನಕೇರಿ ಸೇರಿದಂತೆ ಆರೋಗ್ಯ ಇಲಾಖೆಯ ಅನೇಕ ವೈದ್ಯಾಧಿಕಾರಿಗಳು ಮತ್ತು ಅರೆವೈದ್ಯಕೀಯ ಸಿಬ್ಬಂದಿ ಈ ಘಟಕಗಳ ನಿರ್ವಹಣೆಗಾಗಿ ಶ್ರಮಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.