ಬೆಂಗಳೂರು, ಮೇ 28, ರಾಜ್ಯದ ಬೊಕ್ಕಸಕ್ಕೆ ಸಂಪನ್ಮೂಲ ಕ್ರೋಡೀಕರಣ ಮಾಡಬೇಕಿದೆ. ಇದರ ನಡುವೆಯೂ ಕೊರೋನಾ ತಡೆಗೂ ಹೆಚ್ಚಿನ ಒತ್ತು ನೀಡುತ್ತೇವೆ. ಜೂನ್ 1ರ ನಂತರ ಕೇಂದ್ರದ ನಿರ್ದೇಶನ ನೋಡಿಕೊಂಡು ನಂತರ ಹೊಟೇಲ್ ಪ್ರಾರಂಭಕ್ಕೆ ಅವಕಾಶ ಕಲ್ಪಿಸಲಾಗುವುದು. ಈ ವಿಷಯದಲ್ಲಿ ನಮ್ಮ ಸರ್ಕಾರ ಮುಕ್ತ ಮನಸ್ಸು ಹೊಂದಿದೆ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾರ್ ರೆಸ್ಟೋರೆಂಟ್ ತೆರೆಯಲು ಈಗ ಅವಕಾಶವಿಲ್ಲ. ಎಲ್ಲ ಅಂಗಡಿ ಮುಗ್ಗಟ್ಟು ತೆರೆದರೂ ಈಗ ಬಾರ್ ರೆಸ್ಟೋರೆಂಟ್ ತೆರೆಯಲು ಅನುಮತಿ ಇರುವುದಿಲ್ಲ ಎಂದರು.ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರು ನಾಮಕರಣ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಾವರ್ಕರ್ ಹೆಸರು ಇಡುವುದಕ್ಕೆ ನಮಗೆ ಸಂತಸವಿದೆ. ಎಲ್ಲಾ ಯೋಜನೆಗಳಿಗೆ ನೆಹರು, ಗಾಂಧಿ ಹೆಸರುಗಳನ್ನೇ ಇಟ್ಟಿದ್ದಾರೆ. ಬೇರೆಯವರ ಹೆಸರು ಇಟ್ಟರೆ ಕಾಂಗ್ರೆಸ್‌ನವರಿಗೆ ಆಗುವುದಿಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.
ಸಾವರ್ಕರ್ ಅವರು ಸ್ವಾತಂತ್ರ್ಯ ಹೋರಾಟಗಾರರು. 25 ವರ್ಷ ಸೆರೆವಾಸ ಅನುಭವಿಸಿದ್ದ ಸಾವರ್ಕರ್ ಅಂತಹ ಹೋರಾಟಗಾರನ ಹೆಸರು ಇಡುವುದಕ್ಕೆ ವಿರೋಧ ಸರಿಯಲ್ಲ. ಎಲ್ಲದಕ್ಕೂ ಇಂದಿರಾ ಸಂತತಿ ಹೆಸರು ಇಟ್ಟಿದ್ದಾರೆ. ಅವರನ್ನು ಬಿಟ್ಟು ಬೇರೆಯವರ ಹೆಸರು ಇಟ್ಟರೆ ಅವರ ಹೊಟ್ಟೆಯಲ್ಲಿ ಮೆಣಸಿನಕಾಯಿ ಇಟ್ಟಂತಾಗುತ್ತದೆ ಎಂದರು.ಹಿಂದೆಲ್ಲಾ ಯಾವ ಯೋಜನೆಗೂ ಯಾಕೆ ಕೆಂಪೇಗೌಡರ ಹೆಸರು ಇಡಲಿಲ್ಲ. ರಾಯಣ್ಣ ಹೆಸರು ಯಾಕೆ ಇಡಲಿಲ್ಲ ಎಂದು ಪ್ರಶ್ನಿಸಿದ ಅವರು, ಸಾವರ್ಕರ್ ಹೆಸರಿಡುವ ವಿಷಯದಲ್ಲಿ ಸರ್ಕಾರಕ್ಕೆ ಪೂರ್ಣ ಬೆಂಬಲ ನೀಡಿದ್ದೇವೆ. ಹಿಂದೂ ಪ್ರತಿಪಾದಕರೆಂಬ ಕಾರಣಕ್ಕೆ ವಿರೋಧ ಸರಿಯಲ್ಲ. ಹಿಂದೂ ಆಗಿ ಹುಟ್ಟುವುದೇ ತಪ್ಪಾ?. ಅವರನ್ನು ವಿರೋಧ ಮಾಡುವುದು ಸರಿಯಲ್ಲ. ಕಾಂಗ್ರೆಸ್‌ನ ಗೊಡ್ಡು ಬೆದರಿಕೆಗೆ ನಾವು ಹೆದರುವುದಿಲ್ಲ. ಸಾವರ್ಕರ್ ಹೆಸರು ಇಟ್ಟೇ ಇಡುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದರು.ಜಮೀನುಗಳ ಮೌಲ್ಯಮಾಪನದಲ್ಲಿ ನೋಂದಣಿ ಶುಲ್ಕ ಜಾಸ್ತಿ ಇದೆ ಎಂಬ ಆರೋಪವಿದೆ. ಅದನ್ನು ಕಡಿಮೆ ಮಾಡುವ ಚಿಂತನೆ ನಡೆಸಿದ್ದೇವೆ. ಸೈಟ್, ಮನೆ ಖರೀದಿಗೆ ಉತ್ತೇಜನ ನೀಡಲು ಯೋಜನೆ ರೂಪಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.