ಬೆಂಗಳೂರು,ಫೆ. 12 : ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸಿದ ಬೆನ್ನಲ್ಲೇ ಆಮ್ ಆದ್ಮಿ ಪಕ್ಷದ ಬಿಬಿಎಂಪಿ ಚುನಾವಣಾ ತಯಾರಿ ಬಿರುಸು ಪಡೆದುಕೊಂಡಿದ್ದು, ಐದು ದಿನಗಳ ಕಾಲ ನಗರಾದ್ಯಂತ ಪಾದಯಾತ್ರೆ ಅಭಿಯಾನವನ್ನು ಆರಂಭಿಸಿದೆ.ಇಂದು ನಗರದ ಮೌರ್ಯ ಸರ್ಕಲ್‌ನಲ್ಲಿರುವ ಗಾಂಧಿ ಪ್ರತಿಮೆ ಬಳಿ ಪಾದಯಾತ್ರೆಗೆ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಚಾಲನೆ ನೀಡಿದರು.
ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ಮಾತನಾಡಿ, ನವೀನ ವಿಧಾನಗಳನ್ನು ಅಳವಡಿಸಿಕೊಂಡು, ಹೊಸ ಬೆಂಗಳೂರನ್ನು ನಿರ್ಮಿಸಲು ಸಂಕಲ್ಪತೊಟ್ಟಿರುವ ಆಮ್ ಆದ್ಮಿ ಪಕ್ಷವು ಮುಂಬರುವ ಬಿಬಿಎಂಪಿ ಚುನಾವಣೆಗೆ ವ್ಯಾಪಕ ಕಾರ್ಯಯೋಜನೆ ರೂಪಿಸಿಕೊಂಡಿದೆ. ಎಲ್ಲಾ ವಾರ್ಡ್‌ಗಳಲ್ಲಿಯೂ ನವ ಬೆಂಗಳೂರು ಜನಸಂವಾದ ಕಾರ್ಯಕ್ರಮಗಳ ಮೂಲಕ ನಗರದ ಸಮಸ್ಯೆಗಳ ಪರಿಹಾರಕ್ಕೆ ನಾವೀನ್ಯ ಯೋಜನೆಗಳನ್ನು ರೂಪಿಸುತ್ತಿದ್ದೇವೆ ಎಂದರು.
ಹಲವಾರು ಸಮಸ್ಯೆಗಳಿಂದ ರೋಸಿಹೋಗಿರುವ ಬೆಂಗಳೂರಿಗರ ಸಮಸ್ಯೆಗಳು ಹಾಗೂ ಕುಂದು ಕೊರತೆಗಳನ್ನು ಅರಿತು, ಜನರ ಕನಸಿನ ಹೊಸ ಬೆಂಗಳೂರನ್ನು ಕಟ್ಟುವುದರಲ್ಲಿ ಪಕ್ಷದೊಂದಿಗೆ ಜನಸಾಮಾನ್ಯರನ್ನು ಒಳಗೊಳ್ಳುವ, ಬೆಂಗಳೂರನ್ನು ವಿಶ್ವದರ್ಜೆಯ ಮಹಾನಗರವನ್ನಾಗಿಸಲು ಅವರ ಸಲಹೆಗಳನ್ನು ಪಡೆಯುವ ಉದ್ದೇಶದಿಂದ ನಗರದಾದ್ಯಂತ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ ಎಂದರು.
ಬಿಬಿಎಂಪಿ ಪ್ರಚಾರ ಉಸ್ತುವಾರಿ ಶಾಂತಲಾ ದಾಮ್ಲೆ ಮಾತನಾಡಿ, ಪಕ್ಷದ ಕೆಲಸಗಳು, ಸಿದ್ಧಾಂತಗಳು, ಕಾರ್ಯಶೈಲಿಯನ್ನು ನೋಡಿ ಪಕ್ಷದ ಜೊತೆ ಕೈಜೋಡಿಸುವ ಜನರಿಗೆ ಪಕ್ಷದ ಸದಸ್ಯತ್ವವನ್ನು ನೀಡುವುದು ಹಾಗೂ ಸಮರ್ಥ, ಸೇವಾ ಮನೋಭಾವವುಳ್ಳ ಹಾಗೂ ಪಕ್ಷದ ಸಿದ್ಧಾಂತಕ್ಕೆ ಅನುಗುಣವಾದ ಅಭ್ಯರ್ಥಿಗಳನ್ನು ಜನರ ಅಭಿಮತದೊಂದಿಗೆ ಆಯ್ಕೆ ಮಾಡಿ ಬಿಬಿಎಂಪಿ ಚುನಾವಣೆಯಲ್ಲಿ ಕಣಕ್ಕಿಳಿಸುವುದು ಪಾದಯಾತ್ರೆಯ ಉದ್ದೇಶವಾಗಿದೆ ಎಂದರು.ರಾಜ್ಯ ಕಾರ್ಯದರ್ಶಿ ಸಂಚಿತ್ ಸಹಾನೀ, ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್, ಪಕ್ಷದ ಬಿಬಿಎಂಪಿ ರಾಜಕೀಯ ಚಟುವಟಿಕೆಳ ಉಸ್ತುವಾರಿ ವಿ. ಲಕ್ಷ್ಮೀಕಾಂತ್ ರಾವ್ ಸೇರಿದಂತೆ ನೂರಾರು ಕಾರ್ಯಕರ್ತರು ಪಾದಯತ್ರೆಯಲ್ಲಿ ಪಾಲ್ಗೊಂಡಿದ್ದರು.