ಉನ್ನತ ಕನಸು ಕಂಡರೆ ಮಾತ್ರ ಸಾಧನೆ ಮಾಡಲು ಸಾಧ್ಯ: ಗೌರಿ ಮಾಂಜ್ರೇಕರ

Only by dreaming big can you achieve success: Gauri Manjrekar

ಉನ್ನತ ಕನಸು ಕಂಡರೆ ಮಾತ್ರ ಸಾಧನೆ ಮಾಡಲು ಸಾಧ್ಯ: ಗೌರಿ ಮಾಂಜ್ರೇಕರ 

ಸಂಕೇಶ್ವರ 18: ಬದುಕಿನಲ್ಲಿ ನಾವು ಮಾಡುವ ತಪ್ಪುಗಳಿಂದ ಸೋಲು ಅನುಭವಿಸುತ್ತೆವೆ. ಅದರಿಂದ ನಾವು ಪಾಠ ಕಲಿಯಬೇಕು. ಇಂಥ ಪಾಠಗಳಿಂದಲೇ ನಾವು ಭವಿಷ್ಯದಲ್ಲಿ ಗೆಲುವು ಸಾಧಿಸಲು ಸಾಧ್ಯ ಎಂದು ಪಂಕಜ ಸಂಸ್ಥೆಯ ಸಂಸ್ಥಾಪಕಿ ಗೌರಿ ಮಾಂಜ್ರೇಕರ ಕರೆ ನೀಡಿದರು.  

ಅವರು ಸಂಕೇಶ್ವರದ ಅನ್ನಪೂರ್ಣ ವ್ಯವಸ್ಥಾಪನಾ ಸಂಶೋಧನಾ ಸಂಸ್ಥೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.  

ಜಾಗತೀಕರಣ ಮತ್ತು ಖಾಸಗೀರಣಗಳಿಂದ ಇಂದು ಮನುಷ್ಯನ ಬದುಕು ವಿಸ್ತಾರವಾಗಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಲು ವಿಫುಲ ಅವಕಾಶಗಳಿವೆ. ಇದಕ್ಕೆ ತಕ್ಕಂತೆ ಶಿಕ್ಷಣ, ತರಬೇತಿ, ಅನುಭವಗಳನ್ನು ಪಡೆದರೆ ಇಡೀ ವಿಶ್ವದಲ್ಲಿ ಎಲ್ಲಿ ಬೇಕಾದಲ್ಲಿ ಕೆಲಸ ಮಾಡಬಹುದು. ಮನೆಯಲ್ಲಿ ಕುಳಿತುಕೊಂಡೆ ಆಧುನಿಕ ಸಂಪರ್ಕ ಸಾಧನೆಗಳಿಂದ ಇಡೀ ವಿಶ್ವವನ್ನು ಸಂಪರ್ಕಿಸಿ ಸಾಧನೆ ಮಾಡಬಹುದು ಎಂದು ಹೇಳಿದರು.  

ನಮ್ಮ ಕೆಲಸಗಳು ಮನೆಯಿಂದ ಪ್ರಾರಂಭವಾಗಿ ಓಣಿ, ಊರು, ತಾಲೂಕು, ಜಿಲ್ಲೆ, ರಾಜ್ಯ, ದೇಶಗಳತನಕವೂ ತಲುಪಬಹುದು. ಉನ್ನತ ಗುರಿಯ ಕನಸು ಕಂಡರೆ ಮಾತ್ರ ಸಾಧನೆ ಮಾಡಲು ಸಾಧ್ಯ. ಅಂಥ ಕನಸುಗಳನ್ನು ವಿದ್ಯಾರ್ಥಿಗಳು ಹೊಂದಬೇಕು ಎಂದು ಅವರು ಕರೆ ನೀಡಿದರು.  

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಶಾರವ್ವಾ ಧರೋಜಿ, ಶಾಶ್ವತಿ ಚಿಕ್ಕಾಡೆ, ಡಾ.ಸ್ಮೃತಿ ಹಾವಳ, ತನುಜಾ ದೇವಲಾಪೂರಕರ, ಲತಾ ಮಾನೆ, ಬೀನಾದೇವಿ ಕುರಾಡೆ, ಸವಿತಾ ತುಕ್ಕನ್ನವರ, ಡಾ.ಶಾರದಾ ಬೇವಿನಕಟ್ಟಿ ಅವರುಗಳನ್ನು ಸತ್ಕರಿಸಲಾಯಿತು.  

ಅಧ್ಯಕ್ಷತೆಯನ್ನು ಮೀನಾಕ್ಷಿ ಪಾಟೀಲ ವಹಿಸಿದ್ದರು. ಪ್ರಾಚಾರ್ಯೆ ಡಾ.ವಿದ್ಯಾ ಸ್ವಾಮಿ, ಎಸ್‌.ಡಿ.ವಿ.ಎಸ್ ಸಂಘದ ಕಾರ್ಯದರ್ಶಿ ಗಂಗಾಧರ ಕೊಟಗಿ, ಸಂಘದ ಆಡಳಿತ ಕಾರ್ಯನಿರ್ವಾಹಕ ಬಿ.ಎ.ಪೂಜಾರಿ, ಪ್ರೊ. ಸಂತೋಷ ತೇರಣಿಮಠ, ಪ್ರೊ.ಸರೋಜಾ ಸೂರ್ಯವಂಶಿ ಮುಂತಾದವರು ಉಪಸ್ಥಿತರಿದ್ದರು.