ಉತ್ತರ ಕರ್ನಾಟಕ ಸಂತ್ರಸ್ಥರಿಗೆ ಜೆಡಿಎಸ್ ಶಾಸಕರ ಒಂದು ತಿಂಗಳ ಸಂಬಳ: ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು, ಆ 9     ಅತಿವೃಷ್ಟಿಯಿಂದ ತತ್ತರಿಸಿರುವ ಉತ್ತರ ಕರ್ನಾಟಕ ಭಾಗಕ್ಕೆ  ನೆರವಾಗಲು ಜೆಡಿಎಸ್ ಮುಂದಾಗಿದೆ 

ಪಕ್ಷದ ಎಲ್ಲಾ ಶಾಸಕರು ತಮ್ಮ ಒಂದು ತಿಂಗಳ ಸಂಬಳವನ್ನು ಉತ್ತರ ಕರ್ನಾಟಕ ಭಾಗದ ಸಂತ್ರಸ್ಥರಿಗೆ ನೀಡುತ್ತಿರುವುದಾಗಿ ಜೆಡಿಎಸ್ ಶಾಸಕಾಂಗ ನಾಯಕ ಹೆಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ. 

ರಾಜ್ಯದಲ್ಲಿ ಸುರಿಯುತ್ತಿರುವ ಸತತ ಮಳೆಯಿಂದಾಗಿ ಉತ್ತರ ಕರ್ನಾಟಕ ಭಾಗದ ಜನರು ನಲುಗಿ ಹೋಗಿದ್ದು ಸಂಕಷ್ಟಕ್ಕೆ ಈಡಾಗಿದ್ದಾರೆ. ಇಂತಹ ಕಷ್ಟ ಸಂದರ್ಭದಲ್ಲಿ ಈ ಭಾಗದ ಸಹೋದರ, ಸಹೋದರಿಯರ ಜೊತೆಗೆ ನಿಲ್ಲುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಹೀಗಾಗಿ ಉತ್ತರ ಕರ್ನಾಟಕ ಭಾಗದ ಜನರ ಸಂಕಷ್ಟಕ್ಕೆ ಸ್ಪಂದಿಸಿರುವ ಪಕ್ಷದ ಶಾಸಕರು ತಮ್ಮ ಒಂದು ತಿಂಗಳ ಸಂಬಳ ನೀಡುತ್ತಿರುವುದಾಗಿ ಅವರು ಟ್ವಿಟರ್ ನಲ್ಲಿ ತಿಳಿಸಿದ್ದಾರೆ. 

ಜ್ವರದ ಹಿನ್ನೆಲೆಯಲ್ಲಿ ಅನಾರೋಗ್ಯಕ್ಕೆ ಈಡಾಗಿರುವುದರಿಂದ ಸದ್ಯಕ್ಕೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ. ಒಂದೆರಡು ದಿನಗಳಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ತೆರಳಿ ಸಂತ್ರಸ್ಥರ ಸಂಕಷ್ಟಗಳಲ್ಲಿ ಭಾಗಿಯಾಗುವುದಾಗಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.