ಫೆಬ್ರವರಿ 4 ರಂದು ರಾಜ್ಯ ಸರ್ಕಾರದ ನಾಲ್ಕು ಹೊಸ ಸೇವೆಗಳಿಗೆ ಚಾಲನೆ

vidhansoudha

ಬೆಂಗಳೂರು, ಫೆ 1 - ರಾಜ್ಯ ಸರ್ಕಾರದ ನಾಲ್ಕು ಹೊಸ ಸೇವೆಗಳಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ   ಫೆಬ್ರವರಿ 4 ರಂದು ಚಾಲನೆ ನೀಡಲಿದ್ದಾರೆ. 

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜನಸ್ನೇಹಿ ಸಹಾಯ ವೇದಿಕೆ ಮತ್ತು ಜನಸ್ನೇಹಿ ಸಹಾಯವಾಣಿ ಹಾಗೂ ಕಾರ್ಮಿಕ ಇಲಾಖೆಯ ಆಶಾದೀಪ ಯೋಜನೆಯ ಅಂತರ್ಜಾಲ ಮತ್ತು ಕಾರ್ಮಿಕ ಸಹಾಯವಾಣಿ ಸೇವೆಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಂಜೆ ಹಮ್ಮಿಕೊಂಡಿರುವ ಈ ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಸಕಾಲ ಹಾಗೂ ಕಾರ್ಮಿಕ ಸಚಿವ ಎಸ್. ಸುರೇಶ್ ಕುಮಾರ್, ಮುಖ್ಯಮಂತ್ರಿಗಳ ಇ-ಆಡಳಿತ ಸಲಹೆಗಾರ ಬೇಳೂರು ಸುದರ್ಶನ ಹಾಗೂ ರಾಜ್ಯದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ್ ಭಾಸ್ಕರ್ ಪಾಲ್ಗೊಳ್ಳಲಿದ್ದಾರೆ.

ಏನಿದು ಸಹಾಯ ವೇದಿಕೆ ?

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ “ಜನಸ್ನೇಹಿ” ಸಹಾಯ ವೇದಿಕೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯ ಕುಂದು-ಕೊರತೆಗಳನ್ನು ಮೊಬೈಲ್ ದೂರವಾಣಿ ಸಂಖ್ಯೆ : 99802 99802 ಗೆ    ವಾಟ್ಸ್ ಆಪ್ ಕಳುಹಿಸುವ ಮೂಲಕ ಅಥವಾ ಇಲಾಖೆಯ ಟ್ವೀಟರ್ ಖಾತೆ   @Karnataka_dipr  ಮೂಲಕ ಟ್ವೀಟ್ ಮಾಡುವ ಮೂಲಕ ಅಹವಾಲುಗಳನ್ನು ಸರ್ಕಾರದ ಗಮನಕ್ಕೆ ತರಬಹುದಾಗಿದೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಇಂತಹ ಅಹವಾಲುಗಳನ್ನು ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತಂದು ಜನರ ಅಹವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಜನಸ್ನೇಹಿ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ. ಪ್ರಾಯೋಗಿಕವಾಗಿ ಈ ಸೇವೆಯನ್ನು ಕಳೆದ ಒಂದು ತಿಂಗಳಿನಿಂದ ಪ್ರಾರಂಭಿಸಲಾಗಿದ್ದು  ಪ್ರಮುಖ ವಿಷಯಗಳಿಗೆ ಸಂಬಂಧಿಸಿದ ಹಲವು ಅಹವಾಲುಗಳಿಗೆ ವಿವಿಧ ಇಲಾಖೆಗಳಿಂದ ಪರಿಹಾರ ದೊರಕಿಸಿಕೊಡುವಲ್ಲಿ ಇಲಾಖೆ ಯಶಸ್ವಿಯಾಗಿದೆ.

ಆಶಾದೀಪ ಯೋಜನೆ - ಕಾರ್ಮಿಕ ಸಹಾಯವಾಣಿ !

ರಾಜ್ಯದಲ್ಲಿ ಪ್ರಪ್ರಥಮವಾಗಿ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನವೇ ಆಶಾದೀಪ ಯೋಜನೆ - ಕಾರ್ಮಿಕ ಸಹಾಯವಾಣಿ. ವಿವಿಧ ಕ್ಷೇತ್ರಗಳಲ್ಲಿನ ಕಾರ್ಮಿಕರಿಗೆ ಸೂಕ್ತ ಮಾಹಿತಿ ನೀಡಲು ಮತ್ತು ಅವರ ಕುಂದು ಕೊರತೆಗಳ ಬಗ್ಗೆ ದೂರು ಸ್ವೀಕರಿಸಿ ಪರಿಹಾರ ಕಲ್ಪಿಸುವ ಸದುದ್ದೇಶದಿಂದ ಕಾರ್ಮಿಕ ಇಲಾಖೆಯು ಬನ್ನೇರುಘಟ್ಟ ರಸ್ತೆಯಲ್ಲಿರುವ ತನ್ನ ಪ್ರಧಾನ ಕಚೇರಿಯ ಆವರಣದಲ್ಲಿ ದಿನದ 24 ಗಂಟೆ ವಾರದ ಏಳು ದಿನಗಳು ಹಾಗೂ ವರ್ಷದ 365 ದಿನಗಳೂ  ಕಾರ್ಯನಿರ್ವಹಿಸುವ ನಿಯಂತ್ರಣಾ ಕೊಠಡಿ ಸ್ಥಾಪಿಸಿದೆ.

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಸ್ಥಾಪಿಸಿರುವ  ಈ ನಿಯಂತ್ರಣಾ ಕೊಠಡಿಯನ್ನು ಕಾರ್ಮಿಕರು ತಮ್ಮ ಕುಂದು-ಕೊರತೆಗಳನ್ನು ಹಾಗೂ ಸಮಸ್ಯೆಗಳನ್ನು ಶುಲ್ಕ-ರಹಿತ ಸಹಾಯವಾಣಿ ಸಂಖ್ಯೆ : 155214 ಕ್ಕೆ ಕರೆ ಮಾಡುವುದರ ಮೂಲಕ ಸಂಪರ್ಕಿಸಿ ಅಹವಾಲುಗಳನ್ನು ನೋಂದಾಯಿಸಬಹುದಾಗಿದೆ. ಅಲ್ಲದೆ, ವಾಟ್ಸಾಪ್ ಸಂಖ್ಯೆ : 93333 33684 ರ ಮೂಲಕವೂ ದಾಖಲಿಸಬಹುದಾಗಿದೆ.

ಅಲ್ಲದೆ, ಕಾರ್ಮಿಕ ಇಲಾಖೆಯ ಸಾಮಾಜಿಕ ಜಾಲ ತಾಣಗಳಾದ ಇ-ಮೇಲ್, ಟ್ವಿಟರ್, ವಾಟ್ಸ್ ಆಪ್, ಟೆಲಿಗ್ರಾಂ ಅಥವಾ ಎಸ್‍ಎಂಎಸ್ ಮೂಲಕವೂ ಮಾಹಿತಿ ಪಡೆಯಬಹುದು ಅಥವಾ ಸಲಹೆ ನೀಡಬಹುದಾಗಿದೆ. ಈ ಸಹಾಯವಾಣಿಯು ತೊಂದರೆಯಲ್ಲಿ ಇರುವ ಅಥವಾ ನೊಂದ ಕಾರ್ಮಿಕರಿಗೆ  ಭಾವನಾತ್ಮಕ ಬೆಂಬಲವನ್ನು ನೀಡಲಿದೆ.

ಈ ಸಹಾಯವಾಣಿಯು ಕೈಗಾರಿಕಾ ರಾಸಾಯನಿಕ ಅಪಘಾತಗಳು ಮತ್ತು ವಿಪತ್ತುಗಳ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯಕವಾಗುವ “ತುರ್ತು ನಿಯಂತ್ರಣಾ ಕೇಂದ್ರ” ವಾಗಿಯೂ ಕೂಡಾ ಕಾರ್ಯನಿರ್ವಹಿಸಲು ಸಜ್ಜಾಗಿದೆ.

ಇದು ಮಹಿಳಾ ಕಾರ್ಮಿಕರಿಗೂ ಸಕಾಲಿಕ ನೆರವು ಒದಗಿಸಿ ಸಹಕಾರಿಯಾಗಲಿದೆ.   ಯಾವುದೇ ಮಹಿಳೆ ಕೆಲಸದಿಂದ ಮನೆಗೆ ತಡವಾಗಿ ತೆರಳುವ ಸಂದರ್ಭದಲ್ಲಿ ಆಕೆ ಸುರಕ್ಷಿತವಾಗಿ ಮನೆಗೆ ತಲುಪುವವರೆಗೆ ಆಕೆಯ ಚಲನ-ವಲನಗಳತ್ತ ಸೋದರನಂತೆ ನಿಗಾ ವಹಿಸಲು ನಿಯಂತ್ರಣಾ ಕೊಠಡಿಯನ್ನು ಕೋರಬಹುದು.  ಈ ಸುರಕ್ಷತಾ ಸೇವೆಯನ್ನು 24*7 ಆಕೆ ಅಥವಾ ಆಕೆಯ ತಂದೆಎ-ತಾಯಿ ಬಳಸಬಹುದು. ಅಲ್ಲದೆ, ಈ ಸಹಾಯವಾಣಿಯು  ಕಾರ್ಮಿಕ ಇಲಾಖೆಯಲ್ಲಿ ಭ್ರಷ್ಟಾಚಾರ ವಿರೋಧಿ ಸಹಾಯವಾಣಿಯಾಗಿಯೂ ಕಾರ್ಯನಿರ್ವಹಿಸಲಿದೆ.

 ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಕಾರ್ಮಿಕ ಇಲಾಖೆಯ ವ್ಯಾಪ್ತಿಯಲ್ಲಿನ ದೂರುಗಳನ್ನು ಈ ಸಹಾಯವಾಣಿಯಲ್ಲಿ ದಾಖಲಿಸಬಹದು.

ಶುಲ್ಕ ರಹಿತ ಕಾರ್ಮಿಕ ಸಹಾಯವಾಣಿಯು ಸ್ಥಾಪನೆಯಾದ ದಿನದಿಂದ 24*7 ಕಾರ್ಯನಿರ್ವಹಿಸುತ್ತದೆ ಮತ್ತು ದೂರುಗಳನ್ನು ಸ್ವೀಕರಿಸಿ ಪರಿಹರಿಸಲು ಸನ್ನದ್ಧವಾಗಿದೆ.  ಕಾರ್ಮಿಕರು ಮತ್ತು ಕೈಗಾರಿಕೋದ್ಯಮಿಗಳ ಸಮಸ್ಯೆಗಳನ್ನು ಟ್ವಿಟರ್:   @karmika_sahaya,   ವಾಟ್ಸಾಪ್ ಮತ್ತು ಟೆಲಿಗ್ರಾಂ ಮೂಲಕ ಅದರ ಸಂಖ್ಯೆ 93333 33684 ಮತ್ತು ಇ-ಮೇಲ್  labourhelpline.karnataka.govt@gmail.com     ಮೂಲಕವೂ ದೂರುಗಳನ್ನು ಸಲ್ಲಿಸಿ ಪರಿಹಾರ ಪಡೆದುಕೊಳ್ಳಬಹುದಾಗಿದೆ.

ಕಳೆದ ಅಕ್ಟೋಬರ್ 21 ರಿಂದ ಈಗಾಗಲೇ ಪ್ರಾಯೋಗಿಕವಾಗಿ ಪ್ರಾರಂಭವಾಗಿರುವ  ಈ ಸಹಾಯವಾಣಿಯು ಒಟ್ಟು 9227 ವಿಷಯಸೂಚಿ ಡಾಕೆಟ್‍ಗಳನ್ನು ಸೃಜಿಸಿದೆ. ಅವುಗಳ ಪೈಕಿ 8642 ಡಾಕೆಟ್‍ಗಳಿಗೆ ಪರಿಹಾರವನ್ನು ಕಲ್ಪಿಸಿದೆ.  ಸಹಾಯವಾಣಿ ತಂಡವು ಕುಂದು ಕೊರತೆಗಳಿಗೆ ಪರಿಹಾರ ಕಲ್ಪಿಸಕೊಡುವ ತನ್ನ ಗುರಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಸಾಧಿಸಿ ದೂರು ನಿವಾರಣೆಯ ಬಗ್ಗೆ ಮಾಹಿತಿ ಪಡೆದು ದೂರುದಾರರಿಗೆ ನಿಗದಿತ ಅವಧಿಯೊಳಗೆ ಮಾಹಿತಿ ನೀಡುತ್ತಿದೆ.

ವಿವಿಧ ಕಾರ್ಮಿಕ ಕಾನೂನುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ಸಂಘಟಿತ ಮತ್ತು ಅಸಂಘಟಿತ ವಲಯದ ಕಾರ್ಮಿಕ ವರ್ಗದವರಿಗೆ ಸರ್ಕಾರದ ಸವಲತ್ತು ಮತ್ತು ಸೌಲಭ್ಯಗಳನ್ನು ಒದಗಿಸುವ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ವಿಸ್ತರಿಸಿ ಅವರ ಹಿತಾಸಕ್ತಿಯನ್ನು ಕಾಪಾಡುವ ಕಾರ್ಮಿಕ ಇಲಾಖೆಯ ಪ್ರಯತ್ನದ ಒಂದು ಭಾಗವಾಗಿ ಈ ಸಹಾಯವಾಣಿ ಕಾಂiÀರ್i ನಿರ್ವಹಿಸುತ್ತಿದೆ.

ಇದು ಕಾರ್ಮಿಕ ಇಲಾಖೆ ಮತ್ತು ಕಾರ್ಮಿಕರ ಅದರಲ್ಲೂ ವಿಶೇಷವಾಗಿ ಅಸಂಘಟಿತ ಕಾರ್ಮಿಕರು, ಬಾಲ ಕಾರ್ಮಿಕರು, ವಲಸೆ ಕಾರ್ಮಿಕರು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಇವರ ಮಧ್ಯೆ ಒಂದು ಸಂಪರ್ಕ ಸೇತುವೆಯೇ ಆಗಿದೆ.  

ಕಾರ್ಮಿಕ ಇಲಾಖೆಯ ವ್ಯಾಪ್ತಿಯಲ್ಲಿನ ಕಾರ್ಮಿಕ ಇಲಾಖೆ, ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ, ಕರ್ನಾಟಕ ರಾಜ್ಯ ವಿಮಾ ಯೋಜನೆಯ ವ್ಯದ್ಯಕೀಯ ಸೇವೆಗಳ ಇಲಾಖೆ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕರ್ನಾಟಕ ರಾಜ್ಯ ಅಸಂಘಟಿತೆ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಕರ್ನಾಟಕ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಬಾಲಕಾರ್ಮಿಕ ಪದ್ಧತಿ ನಿರ್ಮೂಲನಾ ಯೊಜನಾ ಸೊಸೈಟಿಯ ಕಾರ್ಯ ಚಟುವಟಿಕೆಗಳತ್ತಲೂ ಈ ಸಹಾಯವಾಣಿಯು ಕುಂದು-ಕೊರತೆ ನಿವಾರಣಾ ಕಾರ್ಯವಿಧಾನವಾಗಿ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ, ಕಟ್ಟಡ ಮತ್ತು ಇತರೆ ನಿರ್ಮಾನ ಕಾರ್ಮಿಕರ ಕಲ್ಯಾಣ ಮಂಡಳಿಯು ಕಟ್ಟಡ ಕಾರ್ಮಿಕರಿಗೆ ಹೆಚ್ಚಿನ ಯೋಜನೆಗಳನ್ನು ವಿಸ್ತರಿಸಲು ಯೋಜಿಸಲಾಗಿದೆ.