ನವದೆಹಲಿ, ಡಿ.17 : ಮುಂದಿನ ವರ್ಷ ಜಪಾನ್ನಲ್ಲಿ ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್ 2020 ರಲ್ಲಿ ಭಾರತೀಯ ಪುರುಷರ ಹಾಕಿ ತಂಡ ನ್ಯೂಜಿಲೆಂಡ್ ಮತ್ತು ಮಹಿಳಾ ತಂಡ ಹಾಲೆಂಡ್ ವಿರುದ್ಧ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದೆ.
ಅಂತರರಾಷ್ಟ್ರೀಯ ಹಾಕಿ ಒಕ್ಕೂಟದ (ಎಫ್ಐಹೆಚ್), ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಒಲಿಂಪಿಕ್ ಸದ್ಭಾವನಾ ಆಯೋಗದ ಸದಸ್ಯ ತೆಯೆಬ್ ಇಕಾರಮ್, ಟೋಕಿಯೊ 2020 ಕ್ರೀಡಾ ನಿರ್ದೇಶಕ ಕೋಜಿ ಮುರೊಫುಶಿ, ಮಂಗಳವಾರ ಸ್ವಿಟ್ಜರ್ಲ್ಯಾಂಡ್ನ ಲೌಸೇನ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಮತ್ತು ಪುರುಷರ ಹಾಕಿ ತಂಡದ ಹಾಕಿ ಪಂದ್ಯಗಳ ವೇಳಾಪಟ್ಟಿ ಬಿಡುಗಡೆ ಮಾಡಿದರು.
ಟೋಕಿಯೊ ಒಲಿಂಪಿಕ್ಸ್ನಲ್ಲಿ ಮೊದಲ ಪಂದ್ಯದಲ್ಲಿ ಆತಿಥೇಯ ಜಪಾನ್ ಮತ್ತು ಎಫ್ಐಹೆಚ್ ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಉದ್ಘಾಟನಾ ಪಂದ್ಯದಲ್ಲಿ ಆಡಲಿವೆ. ಮಹಿಳಾ ಪಂದ್ಯದಲ್ಲಿ ನಂಬರ್ ಒನ್ ತಂಡ ಹಾಲೆಂಡ್ ಮತ್ತು ಭಾರತ ನಡುವೆ ನಡೆಯಲಿದೆ. ಮಹಿಳಾ ಮತ್ತು ಪುರುಷರ ತಂಡಗಳ ಫೈನಲ್ ಪಂದ್ಯ ಆಗಸ್ಟ್ 6 ಮತ್ತು 7 ರಂದು ನಡೆಯಲಿದೆ.
ಎಲ್ಲ ಪಂದ್ಯಗಳು ಜಪಾನ್ನ ರಾಜಧಾನಿಯಾದ ಟೋಕಿಯೊದಲ್ಲಿ ಹೊಸದಾಗಿ ನಿರ್ಮಿಸಲಾದ ಓಯಿ ಹಾಕಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯಾವಳಿಯಲ್ಲಿ, ಭಾರತೀಯ ಪುರುಷರ ಹಾಕಿ ತಂಡವು ಜುಲೈ 25 ರಂದು ನ್ಯೂಜಿಲೆಂಡ್, ಜುಲೈ 26 ರಂದು ಆಸ್ಟ್ರೇಲಿಯಾ, ಜುಲೈ 28 ರಂದು ಸ್ಪೇನ್, ಜುಲೈ 30 ರಂದು ಅರ್ಜೆಂಟೀನಾ, ಜುಲೈ 31 ರಂದು ಜಪಾನ್ ವಿರುದ್ಧ ಆಡಲಿದೆ. ಪುರುಷರ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯಗಳು ಆಗಸ್ಟ್ 2 ರಂದು ಮತ್ತು ಸೆಮಿಫೈನಲ್ ಪಂದ್ಯಗಳು ಆಗಸ್ಟ್ 4 ರಂದು ನಡೆಯಲಿದೆ. ಕಂಚು ಮತ್ತು ಚಿನ್ನದ ಪದಕ ಪಂದ್ಯಗಳು ಆಗಸ್ಟ್ 6 ರಂದು ನಡೆಯಲಿದೆ.
ಮಹಿಳಾ ವಿಭಾಗದಲ್ಲಿ, ಭಾರತ ತಂಡವು ಜುಲೈ 25 ರಂದು ಹಾಲೆಂಡ್ನಿಂದ ಅಭಿಯಾನವನ್ನು ಪ್ರಾರಂಭಿಸಲಿದ್ದು, ಇದು ಅವರ ವಿಭಾಗದ ಆರಂಭಿಕ ಪಂದ್ಯವೂ ಆಗಲಿದೆ. ಇದರ ನಂತರ ಜರ್ಮನಿ ವಿರುದ್ಧ ಜುಲೈ 27 ರಂದು, ಜುಲೈ 29 ರಂದು ಬ್ರಿಟನ್, ಜುಲೈ 30 ರಂದು ಐಲರ್ೆಂಡ್, ಆಗಸ್ಟ್ 1 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ. ಮಹಿಳಾ ಕ್ವಾರ್ಟರ್ ಫೈನಲ್ ಪಂದ್ಯಗಳು ಆಗಸ್ಟ್ 3 ರಂದು ಮತ್ತು ಸೆಮಿಫೈನಲ್ ಪಂದ್ಯಗಳು ಆಗಸ್ಟ್ 5 ರಂದು ನಡೆಯಲಿದೆ. ಅವರ ಕಂಚು ಮತ್ತು ಚಿನ್ನದ ಪದಕ ಪಂದ್ಯ ಆಗಸ್ಟ್ 7 ರಂದು ನಡೆಯಲಿದೆ.