ಟೋಕಿಯೊ, ಮಾ 20 ಒಲಿಂಪಿಕ್ಸ್ ಕ್ರೀಡಾಕೂಟ ಆರಂಭಕ್ಕೆ ಕೇವಲ ಇನ್ನು ನಾಲ್ಕು ತಿಂಗಳು ಬಾಕಿಯಿದ್ದು, ಈ ಮಧ್ಯೆ, ಒಲಿಂಪಿಕ್ ಕ್ರೀಡಾ ಜ್ಯೋತಿ ಶುಕ್ರವಾರ ಬೆಳಗ್ಗೆ ಜಪಾನ್ ಗೆ ತರಲಾಗಿದೆ.
ದಿ ಟೋಕಿಯೊ 2020 ಗೋ, ಎಂಬ ಆಕರ್ಷಕ ಬರಹವುಳ್ಳ ವಿಶೇಷ ವಿಮಾನವು ಒಲಿಂಪಿಕ್ ಜ್ಯೋತಿಯನ್ನು ಜಪಾನಿನ ಮಾಟ್ಸುಶಿಮಾ ವಾಯುನೆಲೆಯಲ್ಲಿ ಇಳಿಸಲಾಯಿತು. ಸ್ವಾಗತ ಸಮಾರಂಭವನ್ನು ಶುಕ್ರವಾರ ಆಯೋಜಿಸಲಾಗಿದೆ. ಆದರೆ ಕೊರೊನಾ ವೈರಸ್ ಭೀತಿಯಿಂದಾಗಿ ಸ್ಥಳೀಯ ವಿದ್ಯಾರ್ಥಿಗಳಿಂದ ನಡೆಸಲುದ್ದೇಶಿಸಲಾಗಿದ್ದ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ.
ಒಲಿಂಪಿಕ್ ಜ್ಯೋತಿಯನ್ನು 2011ರಲ್ಲಿ ಸುನಾಮಿ ಮತ್ತು ಭೂಕಂಪಕ್ಕೆ ತುತ್ತಾಗಿದ್ದ ಫುಕುಶಿಮಾದಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತದೆ. ಮಾರ್ಚ್ 26ರಿಂದ ಫುಕುಶಿಮಾದಿಂದ ಆರಂಭವಾಗಲಿರುವ ಜ್ಯೋತಿಯಾತ್ರೆ 121 ದಿನಗಳ ಕಾಲ ನಡೆಯಲಿದೆ.ಇದಕ್ಕೂ ಮುನ್ನಗುರುವಾರ ಅಥೆನ್ಸ್ ಪಾನಥೆನಯಿಕ್ ಕ್ರೀಡಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಟೋಕಿಯೊ ಕ್ರೀಡೆಗಳ ಪ್ರತಿನಿಧಿ ನವೊಕೊ ಇಮೊಟೊ ಅವರು ಗ್ರೀಸ್ ಒಲಿಂಪಿಕ್ ಸಮಿತಿ ಮುಖ್ಯಸ್ಥ ಸ್ಪಿರೋಸ್ ಕ್ವಾಪ್ರಲೋಸ್ ಅವರಿಂದ ಒಲಿಂಪಿಕ್ ಜ್ಯೋತಿಯನ್ನು ಸ್ವೀಕರಿಸಿದರು.ಕೊರೊನಾ ಸೋಂಕು ಭೀತಿಯಿಂದಾಗಿ ಅಥೆನ್ಸ್ ನಲ್ಲಿ ಆರು ದಿನಗಳ ಕಾಲ ಜ್ಯೋತಿಯಾತ್ರೆಯನ್ನು ಕಳೆದ ವಾರ ರದ್ದುಗೊಳಿಸಲಾಗಿತ್ತು. ಕೊರೊನಾ ಆತಂಕದ ನಡುವೆಯೂ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಮತ್ತು ಜಪಾನ್ ಸರಕಾರ ನಿಗದಿತ ಅವಧಿಯಲ್ಲಿ ಕ್ರೀಡೆಗಳು ನಡೆಯಲಿವೆ ಎಂದು ಹೇಳುತ್ತಾ ಬರುತ್ತಿದೆ.