ಕಂಪ್ಲಿ:04: ತಾಲ್ಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳು ರೈತರು, ಸಾರ್ವಜನಿಕರೊಂದಿಗೆ ಸೌಜನ್ಯದೊಂದಿಗೆ ವರ್ತಿಸಬೇಕೆಂದು ಶಾಸಕರಾದ ಜೆ.ಎನ್.ಗಣೇಶ್ ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು. ಅವರು ಪಟ್ಟಣದ ತಹಸಿಲ್ದಾರ್ ಕಚೇರಿ ಸಭಾಂಗಣದಲ್ಲಿ ಏರಿ್ಡಸಿದ್ದ ಬಗರ್ ಹುಕುಂ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ತಾಲ್ಲೂಕಿನ ವಿವಿಧ ಅಧಿಕಾರಿಗಳ ಬಗ್ಗೆ ಸಾರ್ವಜನಿಕರು ದೂರುಗಳನ್ನು ನೀಡುತ್ತಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗದೇ, ಆಸೆ ಆಮೀಷಗಳಿಗೆ ಬಲಿಯಾಗದೇ ಕಾರ್ಯನಿರ್ವಹಿಸಬೇಕು.
ಮುಂದಿನ ದಿನಗಳಲ್ಲಿ ಯಾವುದೇ ಇಲಾಖೆಯ, ಯಾವುದೇ ಅಧಿಕಾರಿಗಳ ಬಗ್ಗೆ ದೂರುಗಳು ಕೇಳಿ ಬಂದಲ್ಲಿ ನಿರ್ಧ್ಯಾಕ್ಷಿಣ್ಯವಾಗಿ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೆಚ್ಚರಿಸಿದರು. ತಾಲ್ಲೂಕಿನಲ್ಲಿ ಬಹಳ ವರ್ಷಗಳಿಂದ ಅಂದರೆ ಸುಮಾರು40-50 ವರ್ಷಗಳಿಂದ ಉಳುಮೆ ಮಾಡುತ್ತಾ ಬಂದಿರುವ ರೈತರಿಗೆ ಜಮೀನಿನ ಪಟ್ಟಗಳನ್ನು ವಿತರಿಸಬೇಕು. ಆದರೆ ಸಮಗ್ರವಾಗಿ ತನಿಖೆ ಮಾಡಿ ಸೂಕ್ತ ದಾಖಲೆಗಳಿದ್ದರೆ, ಜಮೀನು ಪಟ್ಟ ನೀಡಬೇಕು. ಎಲ್ಲಾ ದಾಖಲೆಗಳಿದ್ದರೂ ಪಟ್ಟ ನೀಡಲು ಅಲೆದಾಡಿಸದರೆ ಕ್ರಮಗಳನು ಕೈಗೊಳ್ಳಲಾಗುವುದು. ಪಟ್ಟಣದಿಂದ ಸುತ್ತಮುತ್ತ ನಾಲ್ಕೈದು ಕಿ.ಮೀ.ಗಳಲ್ಲಿ ಸರ್ಕಾರಿ ಜಮೀನುಗಳಿಲ್ಲದೆ, ಸರ್ಕಾರಿ ಕಚೇರಿಗಳಿಗೆ, ಹಾಸ್ಟೆಲ್‌ಗಳಿಗೆ,ಶಾಲಾ ಮೈದಾನಗಳಿಗೆ ಜಮೀನು ಒದಗಿಸಲು ಅಸಾಧ್ಯವಾಗಿದ್ದು, ಬಗರ್ ಹುಕುಂ ಅಡಿಯಲ್ಲಿ ಜಮೀನು ನೀಡುವಾಗ ತಾಲ್ಲೂಕು ಆಡಳಿತ ಮುಖ್ಯ ರಸ್ತೆಯ ಜಮೀನುಗಳನ್ನು ನೀಡದೇ ಹಿಂದುಳಿದ ಪ್ರದೇಶಗಳಲ್ಲಿ ಗುರುತಿಸಿ ಜಮೀನಿನ ಪಟ್ಟಗಳನ್ನು ನೀಡಬೇಕೆಂದರು.
ತಾಲ್ಲೂಕಿನಲ್ಲಿ ಮುಖ್ಯ ರಸ್ತೆಯಲ್ಲಿರುವ ಸರ್ಕಾರಿ ಜಮೀನುಗಳನ್ನು ಸರ್ಕಾರದ ವಿವಿಧ ಸೌಲಭ್ಯಗಳಿಗಾಗಿ ಕಡ್ಡಾಯವಾಗಿ ಮೀಸಲಿಡಬೇಕೆಂದರು. ಈ ಸಂದರ್ಭದಲ್ಲಿ ದೇವಲಾಪುರದ ನಾಯಕರ ದೊಡ್ಡಬಸಪ್ಪನಿಗೆ 1.50.ಸೆಂಟ್ಸ್ ಹಾಗೂ ನಾಯಕರ ಪಾರ್ವತೆಮ್ಮನವರಿಗೆ 1.38.ಸೆಂಟ್ಸ್ ಜಮೀನಿನ ಪಟ್ಟಣ ನೀಡಲು ಶಾಸಕರು ಅನುಮೋದನೆ ನೀಡಿದರು. ತಹಸಿಲಾರ್ ಶಿವರಾಜ ಶಿವಪುರ ಮಾತನಾಡಿ ತಾಲ್ಲೂಕಿನಲ್ಲಿ ಇದುವರೆಗೂ 53 ಅಡಿಯಲ್ಲಿ 2221 ಅರ್ಜಿಗಳು ಸಲ್ಲಿಕೆಯಾಗಿದ್ದು, ಇದರಲ್ಲಿ ಸುಮಾರು 500ಕ್ಕೂ ಅಧಿಕ ಫಲಾನುಭವಿಗಳು ಅರ್ಹರಿದ್ದು, ಅವರಿಗೆ ಹಂತ ಹಂತವಾಗಿ ಪಟ್ಟಾ ಮಂಜೂರು ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಬಗರ್ ಹುಕುಂ ಸಮಿತಿ ಸದಸ್ಯರಾದ ಪಾರ್ವತಿ ಪಾಟೀಲ್, ಬಂಗಿ ಮಲ್ಲಯ್ಯ, ಎ.ಕೆ. ಮಲ್ಲಿಕಾರ್ಜುನ, ಗ್ರೇಡ್-2 ತಹಸಿಲ್ದಾರ್ ಎಂ.ಆರ್.ಷಣ್ಮುಖ, ಉಪ ತಹಸಿಲ್ದಾರ್ ಬಿ.ರವೀಂದ್ರಕುಮಾರ್, ಸಿಬ್ಬಂದಿಗಳಾದ ಪಂಪಾಪತಿ, ಮಾಲತೇಶ್ ದೇಶಪಾಂಡೆ, ಮೌನೇಶ್ ಹಾಗೂ ಇತರರು ಇದ್ದರು.