ಕ್ಷಯರೋಗ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಅಧಿಕಾರಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಿ: ಸುನೀಲಕುಮಾರ

ಕೊಪ್ಪಳ 27: ಕ್ಷಯರೋಗಿಗಳಿಗೆ ಮುಖ್ಯವಾಗಿ ಅಗತ್ಯವಿರುವ ಪೂರ್ಣ ಪ್ರಮಾಣದ ಚಿಕಿತ್ಸೆಯ ಕುರಿತು ಮಾಹಿತಿ ನೀಡಿ. ಕ್ಷಯ ರೋಗವು ಸಾಂಕ್ರಾಮಿಕ ರೋಗವಾಗಿದ್ದು ಬಾಧಿತರಿಂದ ಇತರರಿಗಾಗುವ ತೊಂದರೆಗಳನ್ನು ಮನವರಿಕೆ ಮಾಡಿ ಪೂರ್ಣ ಪ್ರಮಾಣದ ಚಿಕಿತ್ಸೆ ಕೊಡುವಂತೆ ಮನವೊಲಿಸಿ. ಜಿಲ್ಲೆಯನ್ನು ಕಷಯರೋಗ ಮುಕ್ತ ಜಿಲ್ಲೆಯನ್ನಾಗಿಸಲು ಅಧಿಕಾರಿಗಳ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಹೇಳಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿರುವ ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದ ಪಾಲುದಾರರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಜಿಲ್ಲೆಯಲ್ಲಿ ಕ್ಷಯರೋಗಿಗಳಲ್ಲಿ ಪೂರ್ಣ ಪ್ರಮಾಣದ ಚಿಕಿತ್ಸೆ ಪಡೆದು ಗುಣ ಹೊಂದಿದವರಿದ್ದಾರೆ. ಅವರಂತೆ ಕ್ಷಯ ಬಾಧಿತರು ತಮ್ಮ ಹಿಂಜರಿಕೆಯನ್ನು ತೊರೆದು ವೈದ್ಯಾಧಿಕಾರಿಗಳನ್ನು ಭೇಟಿ ಮಾಡಿ ಸೂಕ್ತ ತಪಾಸಣೆ ಮೂಲಕ ರೋಗದ ತೀವ್ರತೆಯನ್ನು ತಿಳಿಯಬೇಕು. ಅದರಂತೆ ವೈದ್ಯರು ಸೂಚಿಸಿದ ಚಿಕಿತ್ಸೆಯ ಗುರಿಯನ್ನು ಪೂರ್ಣಗೊಳಿಸಬೇಕು. ಚಿಕಿತ್ಸೆ ಆರಂಭವಾದ ನಂತರ ಸ್ವಲ್ಪ ಮಟ್ಟಿನ ಚಙೇತರಿಕೆ ಕಂಡುಬಂದ ಕೂಡಲೇ ಚಿಕಿತ್ಸೆ ಪಡೆಯುವುದನ್ನು ನಿಲ್ಲಿಸಬಾರದು. ಕ್ಷಯ ರೋಗವು ಸಂಪೂರ್ಣ ವಾಸಿಯಾಗಿದೆ ಎಂದು ವೈದ್ಯಾಧಿಕಾರಿಗಳು ದೃಢೀಕರಿಸುವವರೆಗೂ ಚಿಕಿತ್ಸೆಯನ್ನು ಮುಂದುವರೆಸಬೇಕು. ಒಂದು ವೇಳೆ ಅಪೂರ್ಣ ಚಿಕಿತ್ಸೆ ಪಡೆದರೆ ರೋಗದ ತೀವ್ರತೆ ಮತ್ತು ಇತರೆ ಪರಿಣಾಮಗಳು ಹೆಚ್ಚಾಗಬಹುದು. ಆದ್ದರಿಂದ ಬಾಧೀತರು ಸಂಕೋಚ ಪಡದೆ ಚಿಕಿತ್ಸೆ ಪಡೆಯಬೇಕು ಎಂದು ಅವರು ಹೇಳಿದರು.

ಕ್ಷಯರೋಗಿಗಳ ಕುಟುಂಬದವರಿಗೂ ಪೂರ್ಣ ಚಿಕಿತ್ಸೆಯ ಮಹತ್ವವನ್ನು ತಿಳಿಸಬೇಕು. ರೋಗಿಗಳಿಗೆ ಅವರ ಕುಟುಂಬದವರೇ ಬೆಂಬಲವಾಗಿ ನಿಲ್ಲಬೇಕು. ರೋಗಿಯನ್ನು ಚಿಕಿತ್ಸೆ ಪಡೆಯುವಂತೆ ಬೆಂಬಲಿಸಬೇಕು. ಗ್ರಾಮವಾರು ಕ್ಷಯರೋಗಿಗಳನ್ನು ಗುರುತಿಸಿ ಅವರಲ್ಲಿ ಸಂಪೂರ್ಣ ಗುಣ ಹೊಂದಿದವರಿಂದ ರೋಗಿಗಳಿಗೆ ಸ್ಪೂರ್ತಿ  ತುಂಬುವ ಕೆಲಸವಾಗಬೇಕು. ಗಣಿ ಬಾಧಿತ ಪ್ರದೇಶಗಳಲ್ಲಿ ಕ್ಷಯ ರೋಗದ ಸಾಧ್ಯತೆ ಹೆಚ್ಚಾಗಿರುತ್ತದೆ. ಇಂತಹ ಪ್ರದೇಶಗಳಲ್ಲಿ ರೋಗಿಗಳನ್ನು ಗುರುತಿಸಿ ಅವರಿಗೆ ಚಿಕಿತ್ಸೆ ಹಾಗೂ ರೋಗದ ಪರಿಣಾಮಗಳ ಬಗ್ಗೆ ತಿಳುವಳಿಕೆ ನೀಡಿ ಚಿಕಿತ್ಸೆಗೆ ಮನವೊಲಿಸಬೇಕು. ಚಿಕಿತ್ಸೆಗೆ ಅಗತ್ಯವಿರುವ ಪರೀಕ್ಷಾ ಸಲಕರಣೆಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ , ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಲಿಂಗರಾಜ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ದಾನರೆಡ್ಡಿ, ಡಾ. ಜಂಬಯ್ಯ, ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಮಹೇಶ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.