ನವದೆಹಲಿ, ನ 7: ಬಹುನಿರೀಕ್ಷಿತ ಕರ್ತಾರ್ ಪುರ ಕಾರಿಡಾರ್ ನವೆಂಬರ್ 9ರಂದು ಉದ್ಘಾಟನೆಗೊಳ್ಳಲಿದ್ದು, ಮೊದಲ ತಂಡದ ಯಾತ್ರಿಕರು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಕರ್ತಾರ್ ಪುರ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.
ಮೊದಲ ಯಾತ್ರಿಕರ ತಂಡ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್, ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಕೇಂದ್ರ ಸಚಿವರಾದ ಹರ್ ಸಿಮ್ರತ್ ಕೌರ್ ಬಾದಲ್ ಮತ್ತು ಹರ್ ದೀಪ್ ಸಿಂಗ್ ಪುರಿ ಅವರನ್ನು ಒಳಗೊಂಡಿದೆ.
ಆದರೆ, ಈ ನಡುವೆ, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಕರ್ತಾರ್ ಪುರಕ್ಕೆ ಭೇಟಿ ನೀಡುವವರಿಗೆ ಪಾಸ್ ಪೋರ್ಟ್ ಕಡ್ಡಾಯ ಎಂಬ ಹೇಳಿಕೆ ನೀಡಿರುವುದಾಗಿ ಅಲ್ಲಿನ ಮಾಧ್ಯಮಗಳು ಸುದ್ದಿಮಾಡಿವೆ.
ಮೇಜರ್ ಜನರಲ್ ಗಫೂರ್ ಪ್ರಕಾರ, ಇದರಲ್ಲಿ ಭದ್ರತಾ ಅಂಶಗಳು ಒಳಗೊಂಡಿರುವುದರಿಂದ, ಕರ್ತಾರ್ ಪುರ ಕಾರಿಡಾರ್ ಗೆ ಪಾಸ್ ಪೋರ್ಟ್ ಆಧಾರಿತ ಗುರುತಿನ ಮೇಲೆ ಮಾತ್ರ ಅನುಮತಿ ನೀಡಲಾಗುತ್ತದೆ. ಭದ್ರತೆ ಇಲ್ಲವೇ ಸಾರ್ವಭೌಮತೆಯಲ್ಲಿ ಯಾವುದೇ ರಾಜಿ ಇಲ್ಲ ಎಂದಿದ್ದಾರೆ.
ನವೆಂಬರ್ 1ರಂದು ಇಮ್ರಾನ್ ಖಾನ್ ಮಾಡಿದ್ದ ಟ್ವೀಟ್ ನಲ್ಲಿ ಕರ್ತಾರ್ ಪುರ ಭೇಟಿಗೆ ಭಾರತೀಯರು ಎರಡು ನಿಬಂಧನೆಗಳನ್ನು ಪಾಲಿಸಬೇಕು. ಅವೆಂದರೆ,ಪಾಸ್ ಪೋರ್ಟ್ ಮತ್ತು ಹತ್ತು ದಿನ ಮುಂಚಿತವಾಗಿ ನೋಂದಣಿ ಎಂದು ಸ್ಪಷ್ಟಪಡಿಸಿದ್ದರು.
ಕರ್ತಾರ್ ಪುರ ಕಾರಿಡಾರ್ , ಗುರುನಾನಕ್ ದೇವ್ ಅವರ ಅಂತಿಮ ಪ್ರಸ್ಥಾನದ ಸ್ಥಳವಾದ ಪಾಕಿಸ್ತಾನದ ಗುರುದ್ವಾರ ದರ್ಬಾರ್ ಸಾಹಿಬ್ ಹಾಗೂ ಪಂಜಾಬ್ ರಾಜ್ಯದ ದೇರಾ ಬಾಬಾ ನಾಯಕ್ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುತ್ತದೆ.
ಈ ಕಾರಿಡಾರ್ ಅನ್ನು ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನದಲ್ಲಿ ಪ್ರಧಾನಿ ಇಮ್ರಾನ್ ಖಾನ್ ಉದ್ಘಾಟಿಸುವ ಸಾಧ್ಯತೆಗಳಿವೆ.
ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ನವೆಂಬರ್ 9ರಂದು ಪ್ರಧಾನಿ ಕರ್ತಾರ್ ಪುರ ಕಾರಿಡಾರ್ ಅನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. ಇದರಿಂದ ಯಾತ್ರಿಕರು ಗುರುನಾನಕ್ ದೇವ್ ಅವರ 550ನೇ ಜನ್ಮ ಶತಮಾನೋತ್ಸವ ಪರ್ಕಾಶ್ ಪೂರಬ್ ನಲ್ಲಿ ಪಾಲ್ಗೊಳ್ಳಬಹುದು. ಇದರಿಂದ ಲಕ್ಷಾಂತರ ಜನರ ದೀರ್ಘಕಾಲದ ಕನಸು ನನಸಾಗಲಿದೆ ಎಂದಿದ್ದಾರೆ.