ಆರೋಗ್ಯಕ್ಕೆ ಪೌಷ್ಠಿಕಾಂಶ ಆಹಾರ ಅವಶ್ಯಕ

ಲೋಕದರ್ಶನ ವರದಿ

ಬೆಳಗಾವಿ 02: ಆರೋಗ್ಯಕರ ಜೀವನ ಶೈಲಿಯ ಅರ್ಥಪೂರ್ಣ ಜೀವನಕ್ಕಾಗಿ ಪೌಷ್ಟಿಕಾಂಶಯುಕ್ತ ಆಹಾರವು ಪ್ರಮುಖ ಆದ್ಯತೆಯಾಗಿದೆ. ಮಕ್ಕಳ ಉತ್ತಮ ಆರೋಗ್ಯದಲ್ಲಿ ಪೌಷ್ಠಿಕಾಂಶಯುಕ್ತ ಆಹಾರದ ಅವಶ್ಯಕತೆ ಇಂದಿನ ದಿನಮಾನಗಳಲ್ಲಿ ಹೆಚ್ಚಾಗಿದೆ. ಮಕ್ಕಳ ಬೆಳವಣಿಗೆ ಮತ್ತು ವಿಕಸನದಲ್ಲಿ ಪೌಷ್ಟಿಕಾಂಶಯುಕ್ತ ಆಹಾರ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. 

ಆಹಾರ ಸೇವನೆ ಅವಶ್ಯಕ ಆದರೆ ಬುದ್ಧಿವಂತಿಕೆಯಿಂದ ಆಹಾರ ಸೇವಿಸುವುದು ಒಂದು ಕಲೆ. ಈ ನಿಟ್ಟಿನಲ್ಲಿ ಕೆ.ಎಲ್.ಇ ಶಾಲೆ ಮತ್ತು ಕೆ.ಎಲ್.ಇ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಶಾಲಾಪೂರ್ವ ಮಕ್ಕಳ ಪಾಲಕರಿಗೆ "ಆಹಾರ ಮತ್ತು ಪೋಷಕಾಂಶಗಳ ಬೇಡಿಕೆ" ಕುರಿತು ಒಂದು ತಿಳುವಳಿಕಾ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 2 ರಿಂದ 6 ವರ್ಷದ ಶಾಲಾ ಪೂರ್ವ ಮಕ್ಕಳ ಪಾಲಕರಿಗೆ ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತು. 

ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಕೆ.ಎಲ್.ಇ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಗೃಹ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ವೀಣಾ ತಿರ್ಲಾಪುರ ಇವರು ಮಕ್ಕಳ ಸರ್ವಾ೦ಗೀಣ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವ ಆಹಾರ, ಪೋಷಕಾಂಶಗಳ ಮಹತ್ವತೆ, ಆಹಾರಕ್ಕೆ ಸಂಬಂಧಿಸಿದ ಕಾನೂನುಗಳ ತಿಳುವಳಿಕೆ, ಆಹಾರ ಕಲಬೇರಿಕೆ ಮತ್ತು ಮಕ್ಕಳ ಆಹಾರಗಳಲ್ಲಿ ಸಿರಿಧಾನ್ಯಗಳ ಪ್ರಾಮುಖ್ಯತೆಯ ಕುರಿತು ಅನೇಕ ಮಾಹಿತಿಯನ್ನು ಪ್ರಾತ್ಯಕ್ಷಿಕೆಯ ಮೂಲಕ ಪಾಲಕರಿಗೆ ಪರಿಣಾಮ ಬೀರುವಂತೆ ಮಾಹಿತಿ ನೀಡಿದರು.

ಶಾಲಾಪೂರ್ವ ಅವಧಿಯ ಮಕ್ಕಳು ಚಿಕ್ಕವರಾಗಿದ್ದರೂ ಕೂಡ ಅವರ ಆಹಾರ ಮತ್ತು ಪೌಷ್ಟಿಕತೆಯ ಬೇಡಿಕೆ ಹೆಚ್ಚಾಗಿರುತ್ತದೆ. ಪೋಷಕಾಂಶಯುಕ್ತ ಆಹಾರವನ್ನು ಹೆಚ್ಚಿಸುವ ಮೂಲಕ ಮಕ್ಕಳ ಆರೋಗ್ಯದಲ್ಲಿ ಹೆಚ್ಚು ಸುಧಾರಣೆ ತರಲು ಸಾಧ್ಯ. ಮಕ್ಕಳ ಆಹಾರವು ಸಮತೋಲನವಾಗಿದ್ದು, ಪೋಷಕಾಂಶಗಳಾದ ಶರ್ಕರಪಿಷ್ಟ, ಸಸಾರಜನಕ, ಕೊಬ್ಬು, ಜೀವಸತ್ವಗಳು, ಖನಿಜಗಳು, ನಾರು ಮತ್ತು ನೀರನ್ನು ಒಳಗೊಂಡಿರಬೇಕೆಂದರು.

ಮಕ್ಕಳ ಬೆಳವಣಿಗೆಯಲ್ಲಿ ಹಾಲಿನ ಪಾತ್ರ ಬಹಳ ಮಹತ್ವವಾಗಿದ್ದು, ಅದು ಸಸಾರಜನಕ ಮತ್ತು ಕೊಬ್ಬನ್ನು ಒಳಗೊಂಡಿದ್ದ ಕಾರಣ ಮಕ್ಕಳ ಬೆಳವಣಿಗೆಯಲ್ಲಿ ಪ್ರತಿದಿನ ಹಾಲಿನ ಸೇವನೆ ಅವಶ್ಯಕವಾಗಿದೆ ಎಂದು ತಿಳಿಸಿದರು. ಹಾಗೆ ಋತುಮಾನಕ್ಕನುಗುಣವಾಗಿ ದೊರಕುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವನೆ ಮಾಡಬೇಕೆಂದು ಹೇಳಿದರು. ಅದೇ ಪ್ರಕಾರ ದೇಸಿ ಆಹಾರಗಳ ಪ್ರಾಮುಖ್ಯತೆಯ ಅರಿವು ಅವಶ್ಯಕವಾಗಿ ತಿಳಿಯಬೇಕೆಂದು ಹೇಳಿದರು.

ಇಂದಿನ ದಿನಮಾನಗಳಲ್ಲಿ ಮಕ್ಕಳು ಇಷ್ಟಪಡುವ ಹಾಗೂ ಹೆಚ್ಚಾಗಿ ಸೇವಿಸುವ ಜಂಕ್ಫುಡ್, ಬೇಕರಿ ಪದಾರ್ಥಗಳು, ಅನುಕೂಲಕರ ಆಹಾರಗಳಿಂದ ಹಾಗೂ ಆಹಾರ ಕಲಬೆರಕೆಯಿಂದ ಉಂಟಾಗುವ ಪರಿಣಾಮಗಳ ಕುರಿತು ಮಹತ್ವದ ಮಾಹಿತಿಯನ್ನು ಒದಗಿಸಿದರು.

ಕಾರ್ಯಕ್ರಮದಲ್ಲಿ ಕೆ.ಎಲ್.ಇ ಶಾಲೆಯ ಪ್ರಾಚಾರ್ಯರಾದ ಕಲ್ಪನಾ ಚಚಡಿ ಅಧ್ಯಕ್ಷತೆಯನ್ನುವಹಿಸಿ ಮಕ್ಕಳ ಆರೋಗ್ಯದಲ್ಲಿ ಪೌಷ್ಟಿಕ ಆಹಾರವನ್ನು ಒದಗಿಸುವಲ್ಲಿ ಪಾಲಕರ ಪಾತ್ರ ಬಹಳ ಮಹತ್ವದ್ದು ಅದೇ ಪ್ರಕಾರ ಮಕ್ಕಳಿಗೆ ಆಹಾರ ಸೇವಿಸುವ ಒಳ್ಳೆಯ ಹವ್ಯಾಸಗಳನ್ನು ಬೆಳೆಸಬೇಕೆಂದು ಪಾಲಕರಿಗೆ ಮಾರ್ಗದರ್ಶನ ನೀಡಿದರು. 

ಸದೃಢ ಪ್ರಜೆಗಳಿಂದ ಸದೃಢ ರಾಷ್ಟ್ರ ನಿರ್ಮಾಣವಾಗಲಿದೆ ಎಚಿದರು. ಕಾರ್ಯಕ್ರಮದಲ್ಲಿ ಕೆ.ಎಲ್.ಇ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಎಂ.ಬಿ.ಕೊಳವಿ, ದೈಹಿಕ ನಿರ್ದೇಶಕರಾದ ಕಮಲಾ ಜಂಬಗಿ ಹಾಗೂ ಕೆ.ಎಲ್.ಇ ಶಾಲೆಯ ಪೂರ್ವಪ್ರಾಥಮಿಕ ಶಿಕ್ಷಕಿಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಪ್ಷಕಿಯರಾದ ಜೆಸಿಕಾ ಕ್ರೂಸ್ ನಿರೂಪಿಸಿದರು ಮತ್ತು ಎಲ್.ಮೇರಿದಾಸ್ ವಂದಿಸಿದರು.