ಬೆಂಗಳೂರು, ಏ.9, ಕೊರೋನಾ ಸೋಂಕಿನ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಶಾಸಕರು, ಕಾರ್ಯಕರ್ತರು ಸೇರಿದಂತೆ ಎಲ್ಲರೂ ಜನಸೇವೆಯಲ್ಲಿ ತೊಡಗಿರುವುದಕ್ಕೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಭಿನಂದನೆ ಸಲ್ಲಿಸಿದ್ದಾರೆ.ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೊರೋನಾ ಮಹಾಮಾರಿ ನಮ್ಮ ದೇಶಕ್ಕೆ ಅಪ್ಪಳಿಸಿರುವ ಈ ಹೊತ್ತಿನಲ್ಲಿ ದೇಶಕ್ಕೆ ದೇಶವೇ ಲಾಕ್‌ಡೌನ್ ಆಗಿದೆ. ಸರ್ಕಾರಗಳು ಅನಿವಾರ್ಯವಾಗಿ ಉಪಕ್ರಮವಾಗಿರುವ ಈ ಲಾಕ್‌ಡೌನ್ ಅನ್ನು ಜಾರಿಗೊಳಿಸಿದ ಮೇಲೆ ಪಿಡುಗು ನಿಯಂತ್ರಣಕ್ಕೆ ಬರುತ್ತಿದೆ. ಇದಕ್ಕಾಗಿ ಸರ್ಕಾರವನ್ನು ಜನತೆಯನ್ನು ಇದಕ್ಕಾಗಿ ಹಗಲಿರುಳು ದುಡಿಯುತ್ತಿರುವ ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಮೊದಲಾದ ಇಲಾಖೆಗಳ ಸಮಸ್ತ ಸಿಬ್ಬಂದಿ ವರ್ಗದವರನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದ್ದಾರೆ.
ಲಾಕ್‌ಡೌನ್ ಘೋಷಣೆಯಾದ ಬಳಿಕ ಗುಳೆ ಹೋಗುತ್ತಿರುವರು, ವಲಸೆ ಹೋಗುತ್ತಿರುವ ಅಸಂಘಟಿತ ಕಾರ್ಮಿಕರು ದಿನನಿತ್ಯ ದುಡಿದು ಅಂದಿನಂದಿನ ಬದುಕು ಸಾಗಿಸುತ್ತಿದ್ದ ಬಡ ಕೂಲಿಕಾರರು ಇವರ ಜೀವನ ತುಂಬಾ ದುಸ್ತರವಾಗಿದೆ. ಉಪವಾಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸರಕಾರವೂ ಈ ಬಗ್ಗೆ ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ ಎಲ್ಲವನ್ನೂ ಸರ್ಕಾರ ಮಾಡಬೇಕೆಂದು ಕೂರುವ ಸಮಯ ಇದಲ್ಲ. ನಮಗೆಲ್ಲರಿಗೂ ನಾಗರಿಕ ಪ್ರಜ್ಞೆ ಮತ್ತು ಸಾಮಾಜಿಕ ಜವಾಬ್ದಾರಿ ಇರುವುದರಿಂದ ನಾವು ಸರ್ಕಾರದೊಂದಿಗೆ ಕೈ ಜೋಡಿಸಿ ಸಂತ್ರಸ್ತರ ಬಡವರ ನೆರವಿಗೆ ಬರಬೇಕಾಗಿದೆ ಎಂದು ಕರೆ ನೀಡಿದ್ದಾರೆ.
ಇಡೀ ರಾಜ್ಯಾದ್ಯಂತ ನಮ್ಮ ಪಕ್ಷದ ನಾಯಕರು, ಕಾರ್ಯಕರ್ತರು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿರುವುದು ಸಂತಸ ತಂದಿದೆ. ನಮ್ಮ ಪಕ್ಷದ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಈಗಾಗಲೇ ಆಹಾರ ಮತ್ತು ಆರೋಗ್ಯದ ಕಿಟ್‌ಗಳನ್ನು ಬಡವರಿಗೆ ಹಂಚುತ್ತಿದ್ದಾರೆ. ಕೇವಲ ಶಾಸಕರಷ್ಟೇ ಅಲ್ಲದೆ ಪರಾಜಿತರಾದ ನಮ್ಮ ಪಕ್ಷದ ಅಭ್ಯರ್ಥಿಗಳು, ಭಾವೀ ಅಭ್ಯರ್ಥಿಗಳೂ ಸಮಯದ ಪ್ರಾಮುಖ್ಯತೆ ಮತ್ತು ಅಗತ್ಯತೆಯನ್ನು ಅರ್ಥಮಾಡಿಕೊಂಡು ಕ್ರಿಯಾಶೀಲರಾಗಿ ತಮ್ಮ ಕ್ಷೇತ್ರಗಳಲ್ಲಿ ಈ ಕಾರ್ಯದಲ್ಲಿ ನಿರತರಾಗಿದ್ದಾರೆ. ಇವರೆಲ್ಲರ ಸೇವೆಯನ್ನು ನಾನು ಹೃತ್ಪೂರ್ವಕವಾಗಿ ಶ್ಲಾಘಿಸುತ್ತೇನೆ ಮತ್ತು ಹೃದಯತುಂಬಿ ಅಭಿನಂದಿಸುತ್ತೇನೆ ಎಂದು ದೇವೇಗೌಡ ತಿಳಿಸಿದ್ದಾರೆ.
ಈ ನಿಮ್ಮೆ ಕೈಂಕರ್ಯ ಹೀಗೆಯೇ ಮುಂದುವರಿಯಲಿ. ಈ ಲಾಕ್‌ಡೌನ್ ಕೊನೆಯಾಗುವವರೆಗೆ ಈ ಪಿಡುಗು ತೊಲಗುವವರೆಗೆ ನೀವು ಹೀಗೆ ಜನರ ಸಮಸ್ಯೆಗೆ ಸ್ಪಂದಿಸುತ್ತಿರಿ. ನಾನೂ ಈ ನಿಟ್ಟಿನಲ್ಲಿ ಬಡವರಿಗೆ ನನ್ನ ಕೈಲಾದ ನೆರವು ನೀಡುವವನಿದ್ದೇನೆ. ಒಟ್ಟಿನಲ್ಲಿ ನಮ್ಮ ಪಕ್ಷವೂ ಕೂಡ ಈಹೊತ್ತಿನಲ್ಲಿ ಜನಸ್ಪಂದನಶೀಲವಾಗಿರುವುದು ನನಗೆ ಸಮಾಧಾನ ತಂದಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.