ಬೆಳಗಾವಿ, ಅ 26: ಜಮ್ಮು ಮತ್ತು ಕಾಶ್ಮೀರದ ವಿಶೇಷಾಧಿಕಾರ ರದ್ದುಪಡಿಸುವ ಕೇಂದ್ರ ಸರ್ಕಾರದ ಐತಿಹಾಸಿಕ ನಿರ್ಧಾರವನ್ನು ಜನರು ಕ್ಷಿಪ್ರ ಗತಿಯಲ್ಲಿ ಸ್ವೀಕರಿಸಿದ್ದು, ಸರ್ಕಾರದ ಕ್ರಮ ಯಶಸ್ವಿಯಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದ್ದಾರೆ. ಬೆಳಗಾವಿ ನಗರದಿಂದ 45 ಕಿಮೀ ದೂರದಲ್ಲಿರುವ ಐತಿಹಾಸಿಕ ಸ್ಥಳ ಕಿತ್ತೂರಿನಲ್ಲಿ ಶುಕ್ರವಾರ ರಾತ್ರಿ ಆಯೋಜಿಸಲಾಗಿದ್ದ ಮೂರು ದಿನಗಳ ಕಿತ್ತೂರು ಉತ್ಸವ- 2019 ಸಮಾರೋಪ ಸಮಾರಂಭ ಉದ್ದೇಶಿಸಿ ಸಚಿವರು ಮಾತನಾಡಿದರು. ಸಂವಿಧಾನದ 370 ವಿಧಿ ರದ್ದತಿಯ ನಂತರ ಕಾಶ್ಮೀರ ದೇಶದ ಇತರ ರಾಜ್ಯಗಳಂತಾಗಿದೆ. ಈಗ ನಮ್ಮ ಕಿತ್ತೂರಿನ ಹುಡುಗ ಕಾಶ್ಮೀರಿ ಹುಡುಗಿಯನ್ನು ವಿವಾಹವಾಗಬಹುದು....! ಕಾಶ್ಮೀರಿ ಹುಡುಗಿ ಕಿತ್ತೂರಿನ ಹುಡುಗನನ್ನು ಮದುವೆಯಾಗಬಹುದು ಎಂದರು. ಮುಂಬೈ ಕರ್ನಾಟಕ ಪ್ರದೇಶವನ್ನು "ಕಿತ್ತೂರು ಕರ್ನಾಟಕ" ಎಂದು ಹೆಸರಿಸುವ ವಿಷಯ ಪ್ರಸ್ತಾಪಿಸಿದ ಸಚಿವರು, ಪ್ರಸ್ತಾವನೆ ಹಲವು ದಶಕಗಳಿಂದ ಸರ್ಕಾರದ ಪರಿಶೀಲನೆಯಲ್ಲಿದೆ. ಇದು ಉತ್ತರ ಕರ್ನಾಟಕ ಭಾಗದ ಜನರ ಹಳೆಯ ಬೇಡಿಕೆಯಾಗಿದೆ. ಈಗಾಗಲೇ ಹೈದ್ರಾಬಾದ್ ಕರ್ನಾಟಕವನ್ನು "ಕಲ್ಯಾಣ ಕರ್ನಾಟಕ" ಎಂದು ಸರ್ಕಾರ ನಾಮಕರಣಗೊಳಿಸಿದೆ ಎಂದರು. ಕಿತ್ತೂರು ಶಾಸಕ ಮಹಂತೇಶ್ ದೊಡ್ಡ ಗೌಡರ್ ಮಾತನಾಡಿ, ಬೆಂಗಳೂರು ಹಾಗೂ ಕೊಲ್ಹಾಪುರ್ ನಡುವೆ ನಿತ್ಯ ಸಂಚರಿಸುವ ಕಿತ್ತೂರು ರಾಣಿ ಚೆನ್ನಮ್ಮ ಎಕ್ಸ್ ಪ್ರೆಸ್ ರೈಲು ಕಿತ್ತೂರು ಪಟ್ಟಣದ ಮೂಲಕ ಸಂಚರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರೈಲ್ವೆ ಸಚಿವ ಸುರೇಶ್ ಅಂಗಡಿ ಅವರಿಗೆ ಬೇಡಿಕೆ ಇರಿಸಿದರು. ಕಿತ್ತೂರಿಗೆ ಒಂದು ರೈಲ್ವೆ ನಿಲ್ದಾಣ ಮಂಜೂರು ಮಾಡಬೇಕು. ಕಿತ್ತೂರು ಮೂಲಕ ಬೆಳಗಾವಿ ಹಾಗೂ ಧಾರವಾಡ ನಡುವೆ ನೂತನ ರೈಲ್ವೆ ಮಾರ್ಗ ಸಮೀಕ್ಷೆ ಪೂರ್ಣಗೊಂಡಿದ್ದು, ಆದಷ್ಟು ಶೀಘ್ರ ರೈಲು ಮಾರ್ಗ ನಿರ್ಮಾಣ ಕಾರ್ಯಕ್ಕೆ ರೈಲ್ವೆ ಸಚಿವರು ಚಾಲನೆ ನೀಡಬೇಕು ಎಂದು ಒತ್ತಾಯಿಸಿದರು. ಈ ನಡುವೆ, ಅಂಚೆ ಇಲಾಖೆ ಕಿತ್ತೂರು ಉತ್ಸವ ಅಂಗವಾಗಿ "ರಾಣಿ ಚೆನ್ನಮ್ಮ ರೈಲು" ಕುರಿತ ವಿಶೇಷ ಲಕೋಟೆ ಹಾಗೂ ಅಂಚೆ ಚೀಟಿ ಬಿಡುಗಡೆಗೊಳಿಸಿದೆ. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ, ಜಿಲ್ಲಾ ಪೊಲೀಸ್ ವರಿಷ್ಠ ಲಕ್ಷ್ಮಣ್ ನಿಂಬರಗಿ, ಜಿಲ್ಲಾ ಪಂಚಾಯಿತಿ ಸಿಇಓ ಡಾ. ಕೆ.ವಿ. ರಾಜೇಂದ್ರ ಹಾಗೂ ವಿವಿಧ ಮಠಗಳ ಸ್ವಾಮಿಗಳು ಉಪಸ್ಥಿತರಿದ್ದರು.