ಮಂಗಳೂರು, ಮೇ 13, ಮಸೀದಿಗಳಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಪೇಶ್ ಇಮಾಮ್, ಮೌಝನ್ ಹಾಗೂ ಮದರಸದ ಸಿಬ್ಬಂದಿಗಳನ್ನು ಕೊರೋನಾ ರೋಗ ಹಿನ್ನೆಲೆಯಲ್ಲಿ ಒಂದು ವರ್ಷದ ಮಟ್ಟಿಗೆ ಅಥವಾ ಲಾಕ್‍ಡೌನ್ ಮಗಿಯುವ ತನಕ ಹಾಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನೇ ಮುಂದುವರಿಸಲು ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಹಾಜಿ ಯು.ಕೆ. ಮೋನು ಕನಚೂರು ಸೂಚಿಸಿದ್ದಾರೆ.
ಸರಕಾರದ ಹಾಗೂ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಆದೇಶದಂತೆ ಕೊರೋನಾ ವೈರಸ್‍ಯನ್ನು ತಡೆಗಟ್ಟುವ ಸಲುವಾಗಿ ಈಗಾಗಲೇ ಮಸೀದಿ, ದರ್ಗಾ ಹಾಗೂ ಮದರಸಗಳನ್ನು ಬಂದ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಸೇವೆ ಸಲ್ಲಿಸುತ್ತಿರುವ ಪೇಶ್ ಇಮಾಮ್, ಮೌಝನ್ ಹಾಗೂ ಮದರಸದ ಸಿಬ್ಬಂದಿಗಳಿಗೆ ಮನೆಯಲ್ಲಿಯೇ ಇರಬೇಕಾದ ಪರಿಸ್ಥಿತಿ ಬಂದಿದೆ. ಮಾರ್ಚ್ ತಿಂಗಳಿನಿಂದ ಆರಂಭವಾದ ಲಾಕ್‍ಡೌನ್ ಇನ್ನೂ ಮುಂದುವರೆಯುತ್ತಿದೆ. ಈ ಸಂದರ್ಭದಲ್ಲಿ ಸರಕಾರದ ಹಾಗೂ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಆದೇಶವನ್ನು ಪಾಲನೆ ಮಾಡುವ ಅನಿವಾರ್ಯತೆಯಿಂದ ತಮ್ಮ ಕರ್ತವ್ಯಕ್ಕೆ ಹಾಜರಾಗಲಿಲ್ಲ, ಆದರೂ ಅವರ ವೇತನವನ್ನು ಸಂಬಂಧಪಟ್ಟ ಮಸೀದಿ, ಮದರಸ ಹಾಗೂ ದರ್ಗಾ ಆಡಳಿತ ಸಮಿತಿಗಳು ಪಾವತಿಸಿರುತ್ತಾರೆ. ವರ್ಷಂಪ್ರತಿ ರಂಜಾನ್ ತಿಂಗಳಿನಲ್ಲಿ ಸಿಬ್ಬಂದಿಗಳನ್ನು ಕೈಬಿಡುವುದು, ಹಾಗೂ ಹೊಸ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವುದು ವಾಡಿಕೆಯಾಗಿದೆ. ಕೊರೋನಾ ರೋಗ ಇರುವ ಕಾರಣ ಈ ವಾಡಿಕೆಯನ್ನು ಬದಿಗಿಟ್ಟು ಒಂದು ವರ್ಷದ ಮಟ್ಟಿಗೆ ಅಥವಾ ಲಾಕ್‍ಡೌನ್ ಮಗಿಯುವ ತನಕ ಹಾಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನೇ ಮುಂದುವರಿಸಲು ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಹಾಜಿ ಯು.ಕೆ. ಮೋನು ಕನಚೂರು ಅವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.