ಬೆಂಗಳೂರು, ಏ.1,ಕರ್ನಾಟಕದಿಂದ ದೆಹಲಿಯ ನಿಜಾಮುದ್ದೀನ್ ಜಮಾತ್ ಧಾರ್ಮಿಕ ಸಭೆಗೆ ಹೋಗಿದ್ದವರ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದ್ದು, ಇಂದು ರಾತ್ರಿಯೊಳಗೆ ಎಲ್ಲರನ್ನು ಪತ್ತೆಹಚ್ಚಲು ಸೂಚಿಸಲಾಗಿದೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಿಂದ 342 ಮಂದಿ ದೆಹಲಿಗೆ ಹೋಗಿದ್ದಾರೆ ಎನ್ನುವುದು ತಿಳಿದುಬಂದಿದೆ. ಈಗಾಗಲೇ 200 ಮಂದಿ ಆಸ್ಪತ್ರೆ ಕ್ವಾರಂಟೈನ್ ಮಾಡಲಾಗಿದೆ, ಉಳಿದ 142 ಮಂದಿಯನ್ನು ಹೋಮ್ ಕ್ವಾರಂಟೈನ್ ಮಾಡಲಾಗುತ್ತಿದೆ. ಎಲ್ಲರೂ ಪತ್ತೆಯಾಗಿದ್ದಾರೆ.ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಬಂದಿದ್ದ 62 ಮಂದಿ ವಿದೇಶಿಗರು 12 ಮಂದಿ ವಾಪಸ್ ಹೋಗಿದ್ದಾರೆ, ಉಳಿದ 50 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿಸಿದರು.ಕೇರಳದಿಂದ, ನಮ್ಮ ರಾಜ್ಯ ಸಂಪರ್ಕಿಸುವ 23 ರಸ್ತೆಗಳನ್ನು ಬಂದ್ ಮಾಡಲಾಗಿದೆ. ಕೇಂದ್ರ ಸರ್ಕಾರದ ಆದೇಶದ ಪ್ರಕಾರ ಕಾನೂನಿನ ಅಡಿಯಲ್ಲೇ ಗಡಿ ಬಂದ್ ಮಾಡಿದ್ದೇವೆ. ಯಾವುದೇ ಕಾರಣಕ್ಕೂ ಕೇರಳ ಗಡಿಭಾಗವನ್ನು ತೆರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಯಾವುದೇ ಒತ್ತಡ ಬಂದರೂ ಮದ್ಯ ಮಾರಾಟಕ್ಕೆ ರಾಜ್ಯದಲ್ಲಿ ಅವಕಾಶ ನೀಡುವ ಚಿಂತನೆ ಸರಕಾರದ ಮುಂದೆ ಇಲ್ಲ. ಈಗಲೇ ಪರಿಸ್ಥಿತಿ ಸಾಕಷ್ಟು ಬಿಗಡಾಯಿಸಿದೆ. ಈಗ ಮದ್ಯ ಮಾರಾಟಕ್ಕೆ ಅವಕಾಶ ನೀಡಿದರೆ ಅವರ ಮೇಲೆ ಅವರಿಗೇ ನಿಯಂತ್ರಣ ಇರುವುದಿಲ್ಲ. ಅದ್ದರಿಂದ ಇನ್ನು ಒಂದು ವಾರ ಸುಮ್ಮನಿರಬೇಕು. ಮದ್ಯ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಹೆಚ್ಚುತ್ತಿದೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.ಮುಖ್ಯಮಂತ್ರಿಗಳು ತಮ್ಮ ಒಂದು ವರ್ಷದ ಸಂಬಳವನ್ನು ಕೊರೊನಾ ಪರಿಹಾರ ನಿಧಿಗೆ ನೀಡಿದ್ದಾರೆ. ಅಲ್ಲದೇ ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ. ಹೀಗಾಗಿ ತಾವು ಸಹ ತಮ್ಮ ಒಂದು ವರ್ಷದ ಸಂಬಳವನ್ನು ಪರಿಹಾರ ನಿಧಿಗೆ ನೀಡುವುದಾಗಿ ಹೇಳಿದರು.