ಬೆಂಗಳೂರು, ಫೆ 12; ರಾಜ್ಯದ ಖಾಸಗಿ ಹಾಗೂ ಸರ್ಕಾರಿ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಒದಗಿಸುವ ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ನಾಳೆ ಕೆಲವು ಸಂಘಟನೆಗಳು ಕರ್ನಾಟಕ ಬಂದ್ಗೆ ಕರೆ ನೀಡಿವೆ. ಪ್ರತಿಭಟನಕಾರರು ಒತ್ತಾಯಪೂರ್ವಕವಾಗಿ ಬಂದ್ ಮಾಡಿಸುವಂತಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದಾರೆ.
ಕನ್ನಡಪರ ಸಂಘಟನೆಗಳು, ವಾಹನ ಚಾಲಕರ ಸಂಘ, ರೈತರ ಸಂಘಟನೆಗಳು, ನೇಕಾರರ ಸಂಘ, ಆಟೋಚಾಲಕರ ಸಂಘ ಸೇರಿದಂತೆ 600ಕ್ಕೂ ಹೆಚ್ಚು ಸಂಘಟನೆಗಳು ನಾಳೆ ಬಂದ್ಗೆ ಬೆಂಬಲ ನೀಡಿವೆ. ಈ ಹಿನ್ನೆಲೆಯಲ್ಲಿ ನಗರದ ಟೌನ್ ಹಾಲ್ ಬಳಿ ಹಾಗೂ ರೈಲ್ವೆ ನಿಲ್ದಾಣ ಬಳಿ ಯಾವುದೇ ಪ್ರತಿಭಟನೆಗೆ ಅವಕಾಶವಿಲ್ಲ ಆಯುಕ್ತರು ರಾವ್ ಸೂಚನೆ ನೀಡಿದ್ದಾರೆ.
ಅಲ್ಲದೇ, ಯಾವುದೇ ಅಹಿತಕರ ಘಟನೆ ನಡೆದರೆ ಅದರ ಸಂಪೂರ್ಣ ಹೊಣೆಯನ್ನು ಬಂದ್ ಮಾಡುವವರೇ ಹೊರಬೇಕು. ಅಲ್ಲದೇ, ಸಾರ್ವಜನಿಕರಿಗೆ ತೊಂದರೆ ಕೊಡುವಂತಿಲ್ಲ ಹಾಗೂ ಯಾರಿಂದಲೂ ಒತ್ತಾಯಪೂರ್ವಕವಾಗಿ ಬಂದ್ ಮಾಡಿಸುವಂತಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಒಂದು ವೇಳೆ ನಿಯಮ ಮೀರಿ ಬಂದ್ ಮಾಡಿಸಿದರೇ, ಶಿಸ್ತು ಕ್ರಮ ಜರುಗಿಸುವುದಾಗಿ ಆಯುಕ್ತರು ತಿಳಿಸಿದ್ದಾರೆ.