ಮುಂಬೈ, ಅ 26: ಮಹಾರಾಷ್ಟ್ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿದ ಇಬ್ಬರು ಸ್ವತಂತ್ರ ಶಾಸಕರು ಶನಿವಾರ ಸರ್ಕಾರ ರಚಿಸಲು ಶಿವಸೇನೆಗೆ ಬೆಂಬಲ ನೀಡಿದ್ದಾರೆ
ಶಿವಸೇನೆಯ ಅಧ್ಯಕ್ಷ ಉದ್ಧವ್ ಠಾಕ್ರೆ ಅವರ ಬಾಂದ್ರಾ ನಿವಾಸ ಮಾತೃಶ್ರೀಯಲ್ಲಿ ಶನಿವಾರ ನೂತನ ಚುನಾಯಿತ ಶಾಸಕರ ತುರ್ತು ಸಭೆ ನಡೆದಿದ್ದು, ಇದೇ ಸಂದರ್ಭದಲ್ಲಿ ಪಕ್ಷೇತರ ಶಾಸಕರಿಬ್ಬರು ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಿದ್ದಾರೆ.
ಉದ್ಧವ್ ಠಾಕ್ರೆ ಅವರನ್ನು ಭೇಟಿಯಾದ ನಂತರ, ಇಬ್ಬರೂ ಶಿವಸೇನೆಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ ಎಂದು ಸೇನೆಯ ಮೂಲಗಳು ತಿಳಿಸಿವೆ.
ಪಕ್ಷೇತರ ಶಾಸಕರಿಬ್ಬರೂ ವಿದರ್ಭ ಪ್ರದೇಶದವರಾಗಿದ್ದು, ನಾಗ್ಪುರದ ರಾಮ್ಟೆಕ್ ಕ್ಷೇತ್ರದ ಆಶಿಶ್ ಜೈಸ್ವಾಲ್ ಮತ್ತು ಭಂಡಾರ ಕ್ಷೇತ್ರದ ನರೇಂದ್ರ ಭೊಂಡೇಕರ್ ಎಂದು ತಿಳಿದುಬಂದಿದೆ.
ವಿಶೇಷವೆಂದರೆ, ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು 15 ಸ್ವತಂತ್ರರು ಬಿಜೆಪಿಯೊಂದಿಗಿದ್ದಾರೆ ಎಂದು ಹೇಳಿಕೊಂಡಿದ್ದರು.