ನಿಜಾಮುದ್ದೀನ್ ಸಭೆಯಲ್ಲಿ ಹಾವೇರಿಯಿಂದ ಯಾರೂ ಭಾಗವಹಿಸಿಲ್ಲ: ಆರೋಗ್ಯಾಧಿಕಾರಿ ಸ್ಪಷ್ಟನೆ

ಬೆಂಗಳೂರು, ಏ.2 ,ದೆಹಲಿಯ ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ ಕಳೆದ ಮಾರ್ಚ್ 10 ರಂದು ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಹಾವೇರಿ ಜಿಲ್ಲೆಯಿಂದ ಯಾರು ಭಾಗವಹಿಸಿಲ್ಲ. ಅದೇ ವೇಳೆ ದೆಹಲಿ ಪ್ರವಾಸ ಕೈಗೊಂಡ 13 ಜನರ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಕೊರೋನಾ ಲಕ್ಷಣಗಳು ಕಂಡುಬಂದಿಲ್ಲ. ಮುಂಜಾಗ್ರತಾ ಕ್ರಮವಾಗಿ ಎಲ್ಲರನ್ನೂ   ಕ್ವಾರಟೇನ್ ನಲ್ಲಿ ಇರಿಸಲಾಗಿದೆ ಎಂದು  ಹಾವೇರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರಾಜೇಂದ್ರ ದೊಡ್ಡಮನಿ ತಿಳಿಸಿದ್ದಾರೆ.
ಮಡಿಕೇರಿಯಿಂದ ಹಾವೇರಿ ಜಿಲ್ಲೆ ಸವಣೂರು ತಾಲೂಕಿಗೆ ಬಂದಿದ್ದ ವ್ಯಕ್ತಿಯ ಗಂಟಲು ದ್ರವವನ್ನು ಶಿವಮೊಗ್ಗ ವೈರಾಲಜಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬರಬೇಕಿದೆ ಎಂದು ಅವರು ತಿಳಿಸಿದ್ದಾರೆ. ಈ ಮಧ್ಯೆ, ಹಾವೇರಿ ಕೊರೊನಾ ವೈರಸ್‌ ಸೋಂಕು ತಡೆಗಟ್ಟಲು ಬೆಳಿಗ್ಗೆಯಿಂದ ರಾತ್ರಿಯ ವರೆಗೆ ಬಿಸಿಲಿನಲ್ಲೇ ನಿಂತು ಕೆಲಸ ಮಾಡುವ ಪೊಲೀಸ್‌ ಮತ್ತು ಹೋಂ ಗಾರ್ಡ್ಸ್‌ ಸಿಬ್ಬಂದಿಗೆ  ಸ್ನೇಹಿತರಿಬ್ಬರು ಉಚಿತವಾಗಿ ತಂಪು ಪಾನೀಯ ನೀಡುವ ಮೂಲಕ ಮಾನವೀಯತೆ ಮೆರೆದರು.
ಚಂದ್ರಪ್ಪ ಕಮ್ಮಾರ ಮತ್ತು ದಾದಾ ಕಲಂದರ್‌ ಹಬ್ಬುಸಾಬನವರ್ ಅವರೇ ಈ ಮಾನವೀಯ ಕೆಲಸದಲ್ಲಿ ತೊಡಗಿರುವ ಗೆಳೆಯರು.  ಇಬ್ಬರೂ ಶ್ರೀಮಂತರೇನೂ ಅಲ್ಲ, ಶ್ರಮಜೀವಿಗಳು. ಚಂದ್ರಪ್ಪ ಅವರು ಭಾರತ್‌ ವೆಲ್ಡಿಂಗ್‌ ವರ್ಕ್ಸ್‌ ಎಂಬ ಪುಟ್ಟ ಮಳಿಗೆ ಮಾಲೀಕ. ದಾದಾ ಅವರು ಬಾಬುಸಾಬ್‌ ಟೀ ಅಂಗಡಿ ನಡೆಸುತ್ತಿದ್ದಾರೆ. ಅನೇಕ ಕಷ್ಟ ಕಾರ್ಪಣ್ಯಗಳ ನಡುವೆಯೇ ಜೀವನ ನಡೆಸುತ್ತಿದ್ದರೂ, ಮತ್ತೊಬ್ಬರ ಕಷ್ಟಕ್ಕೆ ಮಿಡಿಯುತ್ತಿದ್ದಾರೆ. ಅವರ ಸೇವಾಗುಣ ಇದೀಗ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.
ನಿತ್ಯ ಮಜ್ಜಿಗೆ, ನಿಂಬೆ ಶರಬತ್ತು, ಮಾವಿನ ಶರಬತ್ತು ಸೇರಿದಂತೆ ಇತರೆ ತಂಪು ಪಾನೀಯಗಳನ್ನು ಕಳೆದ 8 ದಿನಗಳಿಂದ ಕೊಡುತ್ತಿದ್ದೇವೆ. ನಿತ್ಯ 150 ಸಿಬ್ಬಂದಿಗೆ 30 ಲೀಟರ್‌ ತಂಪು ಪಾನೀಯವನ್ನು ಕೊಡುತ್ತಿದ್ದೇವೆ’ ಎಂದು ಚಂದ್ರಪ್ಪ ಕಮ್ಮಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.ಕೊರೊನಾ ಸೋಂಕು ತಡೆಗಟ್ಟಲು ನಿತ್ಯ ಬಿಸಿಲು ಮತ್ತು ದೂಳಿನಲ್ಲಿ ನಿಂತು ಪೊಲೀಸ್‌ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ತಮ್ಮ ಕುಟುಂಬದ ರಕ್ಷಣೆಗಿಂತ ಸಮಾಜದ ರಕ್ಷಣೆಗಾಗಿ ಮಿಡಿಯುವ ಪೊಲೀಸ್ ಸಿಬ್ಬಂದಿಯ ಆರೋಗ್ಯದ ದೃಷ್ಟಿಯಿಂದ ಹಾವೇರಿ ರೋಟರಿ ಕ್ಲಬ್‌ ವತಿಯಿಂದ ಒಂದು ಸಾವಿರ ಮಾಸ್ಕ್‌ಗಳನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು ಅವರಿಗೆ ನೀಡಿದ್ದೇವೆ ಎಂದು ರೋಟರಿ ಕ್ಲಬ್‌ ಸದಸ್ಯ ಡಾ.ರವಿ ಹಿಂಚಿಗೇರಿ ಮಾಹಿತಿ ನೀಡಿದ್ದಾರೆ.