ಸರ್ಕಾರಕ್ಕೆ ಮುಜುಗರ ಉಂಟುಮಾಡಲು ಧರಣಿ ನಡೆಸಿಲ್ಲ: ಸಿದ್ದರಾಮಯ್ಯ

ಬೆಂಗಳೂರು, ಆ 29      ಸರ್ಕಾರಕ್ಕೆ ಮುಜುಗರ ಉಂಟುಮಾಡುವ ಉದ್ದೇಶಕ್ಕಾಗಿ ಧರಣಿ ಸತ್ಯಾಗ್ರಹ ನಡೆಸುತ್ತಿಲ್ಲ, ಇದು ನೆರೆಹಾನಿ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಗಮನವನ್ನು ಹರಿಸುವುದಕ್ಕಾಗಿ ಎಂದು ಮಾಜಿ ಮುಖ್ಯಮಂತ್ರಿ , ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ 

ಬೆಂಗಳೂರಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವೈಫಲ್ಯ ವಿರೋಧಿಸಿ ನಡೆದ ಧರಣಿಯನ್ನುದ್ದೇಶಿಸಿ ಮಾತನಾಡಿದ ಅವರು, 1914 ರಲ್ಲಿ ಒಂದು ಬಾರಿ ಭೀಕರ ಪ್ರವಾಹವಾಗಿತ್ತು. ಇದೀಗ ನೂರು ವರ್ಷಗಳ ಬಳಿಕ ಮತ್ತೆ ರಾಜ್ಯದಲ್ಲಿ ಇಷ್ಟೊಂದು ಮಟ್ಟದ ನೆರೆ ಪ್ರವಾಹ ಬಂದಿದೆ. ರಾಜ್ಯದ 22 ಜಿಲ್ಲೆಗಳಲ್ಲಿ ಪ್ರವಾಹದಿಂದ ಜನರ ಬದುಕು ದುಸ್ತರವಾಗಿದೆ .ಲಕ್ಷಾಂತರ ಜನ ಬೀದಿ ಪಾಲಾಗಿದ್ದಾರೆ.1 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಪ್ರವಾಹ ಹಾನಿಯೊಳಗಾಗಿವೆ.ಇಷ್ಟೊಂದು ದೊಡ್ಡಮಟ್ಟದಲ್ಲಿ ಹಾನಿಯಾಗಿದ್ದರೂ ಪ್ರಧಾನಿ ಮೋದಿ ರಾಜ್ಯದತ್ತ ಗಮನ ಹರಿಸಿಲ್ಲ. ಕೇಂದ್ರದಿಂದ ಒಂದೇಒಂದು ಪೈಸೆ ಪರಿಹಾರ ಬಿಡುಗಡೆಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 

2009 ರಲ್ಲಿ ಪ್ರವಾಹ ಬಂದಾಗಲೂ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. ಈಗ ಕಾಕತಾಳೀಯವೆಂಬಂತೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಲೇ ನೆರೆ ಬಂದಿದೆ ಎಂದು ಲೇವಡಿ ಮಾಡಿದರು. 

ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರವಾದಾಗಲೂ ಸರ್ಕಾರದಲ್ಲಿ ಮುಖ್ಯಮಂತ್ರಿ ಒಬ್ಬರೇ ಇದ್ದರು. ನರೇಂದ್ರ ಮೋದಿ  ಜನಪರ ಪ್ರಧಾನಿ ಅಲ್ಲ. ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ಅವರನ್ನು ನೋಡಿಯಾದರೂ ಅವರು ನೆರೆಪರಿಸ್ಥಿತಿಯಲ್ಲಿ  ಪ್ರಧಾನಿಯಾದವರು ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಕಲಿಯಬೇಕಿತ್ತು ಎಂದರು. 

ಕೇಂದ್ರ ಸಚಿವರಾದ ಅಮಿತ್ ಷಾ, ನಿರ್ಮಲಾ ಸೀತಾರಾಮನ್ ಕಾಟಾಚಾರಕ್ಕೆ ವೈಮಾನಿಕ ಸಮೀಕ್ಷೆ ನಡೆಸಿ ಹೋಗಿದ್ದಾರೆ.  ನಿಜವಾಗಿಯೂ ಮೋದಿಗಾಗಲೀ ಬಿಜೆಪಿಯ ಪವರ್ ಫುಲ್ ಮ್ಯಾನ್ ಷಾ ಗಾಗಲೀ ಜನರ ಪರ ಕಳಕಳಿಯೇ ಇಲ್ಲ. ರಾಜ್ಯದಿಂದ ಕೇಂದ್ರಕ್ಕೆ ಆಯ್ಕೆಯಾಗಿರುವ 28 ಬಿಜೆಪಿಯ ಸಂಸದರು ಏಕೆ ಕೇಂದ್ರವನ್ನು ಈ ಸಂಬಂಧ ಪ್ರಶ್ನಿಸುತ್ತಿಲ್ಲ ಎಂದರು. 

ಯಡಿಯೂರಪ್ಪ ಜನರ ರಕ್ಷಣೆ ಮಾಡುವಲ್ಲಿ ಅಸಾಹಯಕರಾಗಿದ್ದಾರೆ. ತಮ್ಮ ಅಸಹಾಯಕತೆ ಬಗ್ಗೆ ರಾಜ್ಯದ ಜನರಲ್ಲಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. 

ಕೆ.ಎಸ್.ಈಶ್ವರಪ್ಪ, ಮೈತ್ರಿ ಸರ್ಕಾರದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರದಿಂದ ಸಲ್ಲಿಸಿದ್ದ ಮನವಿಗೆ ಬಂದಿರುವ ಅನುದಾನವನ್ನು ತಮ್ಮ ಸರ್ಕಾರದ್ದು ಎಂದು ಬಾಗಲಕೋಟೆಯಲ್ಲಿ ಸುಳ್ಳು ಹೇಳಿದ್ದಾರೆ. ವಿರೋಧ ಪಕ್ಷದಲ್ಲಿದ್ದಾಗ ಬಾಯಿಗೆ ಬಂದಂತೆ ಮಾತನಾಡುತ್ತಿದ್ದ ಈಶ್ವರಪ್ಪ ಈಗ ಮಂತ್ರಿ. ಇನ್ಮೇಲಾದರೂ ಬಾಯಿಬಂದಂತೆ ಮಾತನಾಡುವುದನ್ನು ಬಿಡಬೇಕು ಎಂದು ಸಿದ್ದರಾಮಯ್ಯ ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಕಾಟಾಚಾರಕ್ಕೆ ನೆಪಮಾತ್ರಕ್ಕೆ ಪರಿಹಾರ ಘೋಷಿಸಬಾರದು.ಸಂಪೂರ್ಣ ಮುಳುಗಡೆಯಾಗಿರುವ ಗ್ರಾಮಗಳನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕು. ಸರ್ಕಾರ ತಾತ್ಕಾಲಿಕ ಪತಿಹಾರ ಘೋಷುಸದೇ ಶಾಶ್ವತ ಪರಿಹಾರ ಒದಗಿಸಬೇಕು.ಈ ಸಂಬಂಧ ಸರ್ಕಾರಕ್ಕೆ ನೆರೆ ಪರಿಹಾರ ಸಂಬಂಧ ಕೆಪಿಸಿಸಿ ವತಿಯಿಂದ ಮನವಿ ಸಲ್ಲಿಸಲಾಗುವುದು ಎಂದರು. 

ನೆರೆ ಸಂತ್ರಸ್ತರಿಗೆ ಬದುಕು ಕಟ್ಟಿಕೊಡಲು ಮುಖ್ಯಮಂತ್ರಿ ಯಡಿಯೂರಪ್ಪ ಕೇಂದ್ರದ  ಮೇಲೆ ಹೆಚ್ಚು ಒತ್ತಡ ಹೇರುವ ಮೂಲಕ  ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಸರಿಯಾಗಿ ಕೆಲಸ ಮಾಡಬೇಕು. ನರೇಂದ್ರ ಮೋದಿ ಹತ್ತಿರ ಹೋಗುವ ಬಿಜೆಪಿ ನಾಯಕರು ಬಾಯಿ ಬಿಡುವುದಿಲ್ಲ. ಮೋದಿ ಹತ್ತಿರ ಮಾತನಾಡಲು ಯಡಿಯೂರಪ್ಪಗೆ ಧೈರ್ಯ ಇಲ್ಲ ಎನ್ನುವುದಾದರೆ ಪ್ರಧಾನಿ ಬಳಿ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಲಿ ಎಂದು ಸಲಹೆ ನೀಡಿದರು. 

ಜನರ ಸಮಸ್ಯೆ ಬಗ್ಗೆ ಚರ್ಚಿಸಲು ವಿಧಾನಮಂಡಲ ಅಧಿವೇಶನ ಕರೆಯಬೇಕು. ಜನರ ಸಮಸ್ಯೆ ಕುರಿತು ಚರ್ಚಿಸಲು ವಿಧಾನಸಭೆ ಮತ್ತು ವಿಧಾನ ಪರಿಷತ್ತು ಒಳ್ಳೆಯ ವೇದಿಕೆ. ನೆರೆಬರ ಪ್ತವಾಹ ಸಂತ್ರಸ್ತರ ಬಗ್ಗೆ ಮಾತ್ರವೇ ಚರ್ಚಿಸಲು ಯಡಿಯೂರಪ್ಪ ವಿಶೇಷ ಅಧಿವೇಶನ ಕರೆಯಬೇಕು. ಈ ಸಂಬಂಧದ ಚರ್ಚೆಗೆ ಹಾಗೂ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆಯಾಗುವಂತೆ ಮಾಡಲು ರಾಜ್ಯ ಸರ್ಕಾರಕ್ಕೆ ಸಹಕರಿಸುವುದಾಗಿ ಹೇಳಿದರು. ಜನರ ಸಮಸ್ಯೆಗಳನ್ನು ಪರಿಹರಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ವಿರುದ್ಧ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು. 

ಮೀನುಗಾರರಿಗೆ, ನೇಕಾರರಿಗೆ ಪರಿಹಾರ ನೀಡಬೇಕು.  ಎಲ್ಲಾ ಬ್ಯಾಂಕುಗಳ ಸಾಲ ಮನ್ನಾ ಆದಷ್ಟು ಬೇಗ ಮಾಡಿದರೆ ರೈತರಿಗೆ ಅನುಕೂಲವಾಗುವುದು ಎಂದು ಸಿದ್ದರಾಮಯ್ಯ  ಒತ್ತಾಯಿಸಿದರು.