ಗ್ರಾಮದ ಹೆಸರು ಬದಲಾಯಿಸುವ ಪ್ರಸ್ತಾಪ ಇಲ್ಲ: ಯಡಿಯೂರಪ್ಪ ಸ್ಪಷ್ಟನೆ

ಬೆಂಗಳೂರು, ಆ 16    ಪ್ರವಾಹ ಪೀಡಿತ ಗ್ರಾಮಗಳ ಅಭಿವೃದ್ಧಿಗಾಗಿ 10 ಕೋಟಿ ರೂಪಾಯಿಗಳಿಗೂ ಹೆಚ್ಚು ನೆರವು ನೀಡುವ ಸಂಸ್ಥೆಗಳ ಹೆಸರನ್ನು ಅಲ್ಲಿ ನಿರ್ಮಿಸಲಾಗುವ ನೂತನ ಬಡಾವಣೆಗಳಿಗೆ ಇಡಲಾಗುವುದು. ಗ್ರಾಮದ ಹೆಸರನ್ನು ಬದಲಾಯಿಸುವ ಯಾವುದೇ ಪ್ರಸ್ತಾಪ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. 

ನೆರೆ ಪೀಡಿತ ಗ್ರಾಮಗಳ ಪುನಶ್ಚೇತನಕ್ಕೆ 10 ಕೋಟಿ ರೂಪಾಯಿಗೂ ಹೆಚ್ಚು ದೇಣಿಗೆ ನೀಡುವ ಸಂಸ್ಥೆಗಳ ಹೆಸರನ್ನು ಪುನಶ್ಚೇತನಗೊಳ್ಳುವ ಗ್ರಾಮಗಳಿಗೆ ನಾಮಕರಣ ಮಾಡಲಾಗುವುದು ಎಂದು ಇತ್ತೀಚೆಗೆ ಅವರು ಪ್ರಕಟಿಸಿದ್ದರು. ಆದರೆ ಇದೀಗ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. 

ಇತ್ತೀಚೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ  ಮುಖ್ಯಮಂತ್ರಿಗಳು ಎಲ್ಲಾ ಉದ್ದಿಮೆದಾರರನ್ನು ಆಹ್ವಾನಿಸಿ ನೆರೆ ಪೀಡಿತ ಪ್ರದೇಶಗಳಿಗೆ ದೇಣಿಗೆ ನೀಡುವಂತೆ ಮನವಿ ಮಾಡಿದ್ದರು. ಸರಕಾರದ ಕರೆಗೆ ಮನ್ನಣೆ ನೀಡಿ 60ಕ್ಕೂ ಹೆಚ್ಚು ಕಂಪನಿ ಮುಖ್ಯಸ್ಥರು ಆಗಮಿಸಿ ನೆರವು ನೀಡುವ ಭರವಸೆ ನೀಡಿದ್ದರು. 

10 ಕೋಟಿಗೂ ಹೆಚ್ಚು ನೆರವು ನೀಡಿದರೆ  ಗ್ರಾಮಕ್ಕೆ ನಿಮ್ಮ ಸಂಸ್ಥೆ ಹೆಸರನ್ನೇ ಇಡಲು  ತೀಮರ್ಾನಿಸಿದ್ದೇವೆ. ಆ ಗ್ರಾಮವನ್ನು ಹಣ ನೀಡುವ ಸಂಸ್ಥೆ ದತ್ತು ಪಡೆದುಕೊಂಡಂತೆ  ಬಿಂಬಿಸಲಾಗುವುದು ಎಂದು ಹೇಳಿದ್ದರು. 

ಮಹಾರಾಷ್ಟ್ರ, ಕೇರಳ, ಕರ್ನಾಟಕದಲ್ಲಿ ಮಳೆಯಿಂದ ಭೂ ಕುಸಿತ ಸಂಬಂವಿಸಿದೆ. ಹಳ್ಳಿ, ಪಟ್ಟಣ ಜಲಾವೃತವಾಗಿದೆ. ಸೇತುವೆ ಮುಳುಗಿ, ರಸ್ತೆ ಹಾಳಾಗಿದೆ. ರಕ್ಷಣಾ ಕಾರ್ಯಗಳು ನಡೆಯುತ್ತಿವೆ. ಈ ವರೆಗೂ 6.97 ಲಕ್ಷ ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. 1160 ಪರಿಹಾರ ಕೇಂದ್ರ ತೆರೆಯಲಾಗಿದೆ. 23 ಜಿಲ್ಲೆಗಳ ಪೈಕಿ 200 ಗ್ರಾಮವನ್ನು ಸ್ಥಳಾಂತರಿಸುವ ಪರಿಸ್ಥಿತಿ ಇದೆ. ಇಂಥ ಸ್ಥಿತಿಯಲ್ಲಿ ಉದ್ಯಮಿದಾರರು ಸಹಾಯ ಹಸ್ತ ಚಾಚಬೇಕು. ಉದಾರ ಮನಸ್ಸಿನಿಂದ ದೇಣಿಗೆ ನೀಡಿ.  ಬಟ್ಟೆ, ಆಹಾರ ಧಾನ್ಯ ಇತರೆ ಮೂಲಸೌಕರ್ಯ ಒದಗಿಸಿಕೊಡುವ ಬದಲು ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದರೆ ಸಂತ್ರಸ್ತರಿಗೆ ಹೆಚ್ಚು ನೆರವಾಗಲಿದೆ ಎಂದು ಯಡಿಯೂರಪ್ಪ ಹೇಳಿದ್ದರು. 

ಆದರೆ ಈ ರೀತಿ ಒಂದು ಗ್ರಾಮದ ಹೆಸರನ್ನು ಬದಲಾಯಿಸಿದರೆ ಜನರ ಆಕ್ರೋಶ ವ್ಯಕ್ತವಾಗಬಹುದು ಮತ್ತು ಇದು ಸಮಂಜಸವೂ ಅಲ್ಲ ಎಂಬ ಅಭಿಪ್ರಾಯ ಕೇಳಿ ಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ತಮ್ಮ ನಿಲುವನ್ನು ಬದಲಿಸಿದ್ದಾರೆ. ಹಳೆಯ ಹೆಸರನ್ನು ಬದಲಾಯಿಸುವುದಿಲ್ಲ, ಬದಲಾಗಿ ಹೊಸದಾಗಿ ನಿರ್ಮಾಣವಾಗುವ ಬಡಾವಣೆಗಳಿಗಷ್ಟೇ ನೆರವು ನೀಡಿದ ಸಂಸ್ಥೆಗಳ ಹೆಸರು ಇಡಲಾಗುವುದು ಎಂದು ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.