ಹಿಂದಿನ ಯಾವ ಸರ್ಕಾರವೂ ರಾಜ್ಯವನ್ನು ಇಷ್ಟು ನಿರ್ಲಕ್ಷ್ಯಿಸಿಲ್ಲ: ಸಿದ್ದರಾಮಯ್ಯ

ಬೆಂಗಳೂರು, ಆ 17           ರಾಜ್ಯ ನೆರೆ ಇಲ್ಲವೆ ಬರ ಪರಿಸ್ಥಿತಿ ಎದುರಿಸಿದ ಸಂದರ್ಭಗಳಲ್ಲಿ , ವಾಜಪೇಯಿ ಸರ್ಕಾರವೂ ಸೇರಿದಂತೆ ಹಿಂದಿನ ಯಾವ ಕೇಂದ್ರ ಸರ್ಕಾರವೂ, ಯಾವ ಪ್ರಧಾನಿಯೂ ಕರ್ನಾಟಕ ರಾಜ್ಯವನ್ನು ಈ ರೀತಿ ನಿರ್ಲಕ್ಷಿಸಿಲ್ಲ, ಮುಖ್ಯಮಂತ್ರಿಗಳನ್ನು ಈ ರೀತಿ ಅವಮಾನಿಸಿಲ್ಲ. ಸ್ವಾಭಿಮಾನಿ, ಸ್ವಾವಲಂಬಿ ಕರ್ನಾಟಕ ಇದನ್ನು ಸಹಿಸದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಾಪ್ರಹಾರ ನಡೆಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಪ್ರವಾಹ ಪರಿಹಾರ ಕಾರ್ಯ ಕೈಗೊಳ್ಳಲು ತಕ್ಷಣ ಮಧ್ಯಂತರ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು. ಆದರೆ ಪ್ರಧಾನಿ ಅವರಿಂದ ಸ್ಪಷ್ಟ ಭರವಸೆ ಇನ್ನೂ ಸಿಕ್ಕಿಲ್ಲ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ, ಕೇಂದ್ರ ಸರ್ಕಾರದ ವಿರುದ್ಧ ಟ್ವೀಟ್ನಲ್ಲಿ ಕಟುವಾಗಿ ಟೀಕಿಸಿದ್ದಾರೆ. ನಮ್ಮ ಸರ್ಕಾರ ಜಾರಿಗೆ ತಂದಿದ್ದ ಜನಪರ ಯೋಜನೆಗಳನ್ನು ಈಗಿನ ಸರ್ಕಾರ ರದ್ದುಪಡಿಸುವ, ನಿರ್ಲಕ್ಷಿಸುವ ದುರಾಲೋಚನೆ ಮಾಡಿದರೆ ರಾಜ್ಯದ ಬಡಜನತೆ ದಂಗೆ ಏಳಬಹುದು, ಎಚ್ಚರ ಇರಲಿ. ಇಂತಹ ಜನವಿರೋಧಿ ನಿಲುವುಗಳನ್ನು ನಾವು ಸಹಿಸಿಕೊಳ್ಳುವವರಲ್ಲ, ಹೋರಾಟದ ಮೂಲಕ ಉತ್ತರ ನೀಡಬೇಕಾಗುತ್ತದೆ ಎಂದು ಮತ್ತೊಂದು ಟ್ವೀಟ್ನಲ್ಲಿ ರಾಜ್ಯ ಸರ್ಕಾರದ ವಿರುದ್ಧವೂ ಹರಿಹಾಯ್ದಿದ್ದಾರೆ. ಕೇಂದ್ರ ಸರ್ಕಾರದ ಕೃಷಿಕ ಸಮ್ಮಾನ್ ಕಾರ್ಯಕ್ರಮಕ್ಕೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರದ ಪಾಲನ್ನು ಸೇರಿಸಿ ಬಿಡುಗಡೆ ಮಾಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಹಿಂದಿನ ಕಾಂಗ್ರೆಸ್ -ಜೆಡಿಎಸ್ ಸರ್ಕಾರ ಜಾರಿಗೆ ತಂದಿದ್ದ ಅನ್ನಭಾಗ್ಯ ಮತ್ತಿತರ ಯೋಜನೆಗಳನ್ನು ಸ್ಥಗಿತಗೊಳಿಸಲು ಮುಂದಾಗಿತ್ತು. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಟ್ವೀಟ್ನಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.