ರಾಜ್ಯದ ಜನಹಿತವೇ ಪರಮೋಚ್ಚ: ಕರ್ನಾಟಕ-ಕೇರಳ ಗಡಿ ಮುಚ್ಚಿರುವ ಹಿಂದೆ ಪೂರ್ವಗ್ರಹಗಳಿಲ್ಲ: ಎಚ್‌ಡಿಡಿಗೆ ಪತ್ರ ಬರೆದ ಮುಖ್ಯಮಂತ್ರಿ

ಬೆಂಗಳೂರು, ಏ.5,ಕರ್ನಾಟಕ - ಕೇರಳ ಗಡಿಯನ್ನು ತೆರೆಯುವಂತೆ ಒತ್ತಾಯಿಸಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಬರೆದ ಪತ್ರಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉತ್ತರ ಬರೆದು ಮತ್ತೊಂದು ಪತ್ರ ಬರೆದಿದ್ದಾರೆ
ಪತ್ರದ ಪೂರ್ಣ ಸಾರಾಂಶ ಈ ರೀತಿಯಿದೆ:
 ಮಾನ್ಯ ಎಚ್‌.ಡಿ.ದೇವೇಗೌಡರವರೇ,ಕರ್ನಾಟಕ ಮತ್ತು ಕೇರಳ ನಡುವಿನ ಗಡಿಯನ್ನು ಮುಚ್ಚಿರುವ ಸಂಬಂಧ ತಾವು ಬರೆದಿರುವ ದಿನಾಂಕ 31-03-2020 ಪತ್ರವು ತಲುಪಿದೆ. ಈ ಕುರಿತು ನಮ್ಮ ಸರ್ಕಾರದ ನಿಲುವನ್ನು ಈ ಪತ್ರದ ಮೂಲಕ ತಮ್ಮ ಗಮನಕ್ಕೆ ತರಬಯುತ್ತೇನೆ.
ಕರ್ನಾಟಕದ ಪ್ರತಿಯೊಬ್ಬ ವ್ಯಕ್ತಿಯ ಪ್ರಾಣ ರಕ್ಷಣೆ ನನ್ನ ಸರ್ಕಾರದ ಗುರುತರ ಹೊಣೆಯಾಗಿದೆ. ಈ ಹೊಣೆಗಾರಿಕೆಯಿಂದ ಕಿಂಚಿತ್ತೂ ಹಿಂದೆ ಸರಿಯಲು ಸಾಧ್ಯವಿಲ್ಲ. ಕರ್ನಾಟಕ ಮತ್ತು ಕೇರಳ ನಡುವಿನ ಗಡಿಯನ್ನು ಮುಚ್ಚುವ ನಿರ್ಧಾರ ಏಕಾಏಕಿ ತೆಗೆದುಕೊಂಡ ನಿರ್ಧಾರವಲ್ಲ. ಗಡಿಭಾಗದ ಆರೋಗ್ಯ ಸಮಸ್ಯೆಯ ಗಂಭೀರ ಅಧ್ಯಯನ ನಡೆಸಿ ಅದಕ್ಕೆ ಸಂಬಂಧಿಸಿದ ಪೂರಕ ದಾಖಲೆಗಳ ಆಧಾರದ ಮೇಲೆ ಗಡಿ ಭಾಗವನ್ನು ಮುಚ್ಚುವ ಪ್ರಜ್ಞಾಪೂರಕ ನಿರ್ಧಾರವನ್ನು ನನ್ನ ಸರ್ಕಾರ ಕೈಗೊಂಡಿದೆ. ಕೇರಳದ ಕಾಸರಗೋಡು ಮತ್ತಿತರ ಭಾಗಗಳಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡಿರುವ ಅಧಿಕೃತ ಮಾಹಿತಿಗಳು ನಮ್ಮ ಸರ್ಕಾರದ ಬಳಿ ಇದೆ. ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮಂಗಳೂರು ಶಾಖೆ ಒದಗಿಸಿರುವ ಅಂಕಿ ಅಂಶಗಳು ಭಯಾನಕವಾಗಿವೆ. ಅದೇ ರೀತಿ ಕೇರಳ ಸರ್ಕಾರಕ್ಕೂ ಕಾಸರಗೋಡು ಮತ್ತಿತರ ಭಾಗಗಳಲ್ಲಿ ಕೊರೋನಾ ವೈರಸ್‌ ತೀವ್ರವಾಗಿ ಹರಡಿರುವ ಸಮಗ್ರ ಅಂಕಿ ಅಂಶಗಳಿವೆ. ನಿಜ ಹೇಳಬೇಕೆಂದರೆ ಮಂಗಳೂರಿಗೆ ಹೊಂದಿಕೊಂಡಿರುವ ಕೇರಳದ ಕಾಸರಗೋಡಿನಲ್ಲಿ 106 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಇದೂ ದೇಶದಲ್ಲಿಯೇ ಅತ್ಯಧಿಕ ಕೊರೋನಾ ವೈರಸ್ ಪೀಡಿತರ ಪ್ರದೇಶವಾಗಿದೆ. ಈ ಹಿನ್ನೆಲೆಯಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮತ್ತಿತರ ಆರೋಗ್ಯ ಸಂಬಂಧದ ಸಂಸ್ಥೆಗಳು ಸದರಿ ಗಡಿಭಾಗವನ್ನು ಕಟ್ಟುನಿಟ್ಟಾಗಿ ದಿಗ್ಬಂಧನಕ್ಕೆ ಒಳಪಡಿಸಬೇಕು ಎಂದು ಅಭಿಪ್ರಾಯಿಸಿದೆ. ಈ ಅಭಿಪ್ರಾಯಗಳನ್ನು ಗಂಭೀರವಾಗಿ ಪರಿಗಣಿಸಿರುವ ನನ್ನ ಸರ್ಕಾರ ಕರ್ನಾಟಕ -ಕೇರಳ ಗಡಿಭಾಗದಲ್ಲಿ ಮುಕ್ತ ಸಂಚಾರಕ್ಕೆ ದಿಗ್ಬಂಧನ ಹೇರುವ ನಿರ್ಧಾರ ಕೈಗೊಂಡಿದೆ. ಒಂದು ವೇಳೆ ಈ ದಿಗ್ಬಂಧನ ತೆರವುಗೊಳಿಸಿದರೆ ನನ್ನ ರಾಜ್ಯದ ಜನತೆಯ ನೆಮ್ಮದಿ ಶಾಂತಿ ನಾಶವಾಗುತ್ತದೆ. ಮೃತ್ಯುವನ್ನು ನಾವೇ ಆಲಂಗಿಸಿಕೊಂಡ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ದಿಶೆಯಲ್ಲಿ ಕರ್ನಾಟಕದ ಸಾವಿರಾರು ಮುಗ್ಧ ಹಾಗೂ ಅಸಹಾಯಕ ಜನರ ಹಿತದೃಷ್ಟಿಯಿಂದ ಗಡಿ ದಿಗ್ಬಂಧನ ತೆರವುಗೊಳಿಸಲು ಸಾಧ್ಯವಾಗುವುದಿಲ್ಲ ಎಂಬುದು ನಮ್ಮ ಸರ್ಕಾರದ ನಿಲುವಾಗಿದೆ.
ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸಲುವಾಗಿ ಗಡಿ ದಿಗ್ಬಂಧನ ತೆರವುಗೊಳಿಸಬೇಕು ಎನ್ನುವುದು ತಮ್ಮ ಅಭಿಪ್ರಾಯವಾಗಿದೆ. ಮಾನವೀಯತೆ ಎನ್ನುವ ದೃಷ್ಟಿಯಿಂದ ನಿರ್ಧಾರವೆನ್ನೇನಾದರೂ ಕೈಗೊಂಡರೆ ಕೊರೋನಾ ಪೀಡಿತರು ಯಾರು ? ಕೊರೋನಾ ಪೀಡಿತರಲ್ಲದವರು ಯಾರು ? ಎಂದು ಪ್ರತ್ಯೇಕ ಪ್ರತ್ಯೇಕವಾಗಿ ಗುರುತಿಸಲು ಸಾಧ್ಯವೆ ಆಗುವುದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು 21 ದಿನಗಳ ಲಾಕ್‌ಡೌನ್‌ ಘೋಷಣೆ ಮಾಡಿದ ದಿನದಿಂದ ಕರ್ನಾಟಕ ಸರ್ಕಾರ ಕೊರೋನಾ ವೈರಸ್ ವಿರಾಟ್ ರೂಪ ಪ್ರದರ್ಶನ ಆಗದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಕಟ್ಟು ನಿಟ್ಟಾದ ಕ್ರಮಗಳ ಮೂಲಕ ಕೊರೋನಾ ಹರಡುವಿಕೆಯನ್ನು ನಿಯಂತ್ರಿಸಿದೆ. ಒಂದು ವೇಳೆ ಕರ್ನಾಟಕ ಮತ್ತು ಕೇರಳ ಗಡಿಭಾಗದ ಮೇಲೆ ಹೇರಿರುವ ದಿಗ್ಬಂಧನ ತೆರವುಗೊಳಿಸಿದರೆ, ಪಂಡೋರಾ ಬಾಕ್ಸ್ ತೆರೆಯುವ ಮೂಲಕ ಮನುಕುಲ ಆಹ್ವಾನಿಸಿದ ವಿಪತ್ತಿನಂತೆ ಕರ್ನಾಟಕವೂ ಭಾರೀ ಪ್ರಮಾಣದ ವಿಪತ್ತನ್ನು ಆಹ್ವಾನಿಸಿದಂತಾಗುತ್ತದೆ. ಕೇರಳದಲ್ಲಿ ವಾಸಿಸುವ ಸೋದರ-ಸೋದರಿಯರ ಹಿತ ಕಾಪಾಡುವ ಬಗ್ಗೆ ನನಗೂ ಅಂತಃಕರಣವಿದೆ. ಆದರೆ ಅಂತಃಕರಣದ ನೆಲೆಯಲ್ಲಿ ನಿರ್ಧಾರ ಕೈಗೊಂಡರೆ ಎರಡು ರಾಜ್ಯಗಳ ಜನತೆಯ ನೆಮ್ಮದಿ ಶಾಂತಿ ಹದಗೆಡುತ್ತದೆ. ಕೊರೋನಾ ಮಹಾಮಾರಿ ಕ್ಷಣಾರ್ಧದಲ್ಲಿ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಹರಡುವ ಅಪಾಯವಿರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯ. ಜೊತೆಗೆ ಕೊರೋನಾ ಪೀಡಿತರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚರಿಸದಂತೆ ಗೃಹ ಬಂಧನದಲ್ಲಿರುವುದು ಕೂಡ ಅನಿವಾರ್ಯ ಹಾಗೂ ಅಗತ್ಯ. ಇಂತಹ ಪರಿಸ್ಥಿತಿಯಲ್ಲಿ ದಿನದಿಂದ ದಿನಕ್ಕೆ ಕಾಸರಗೋಡು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಕೊರೋನಾ ವೈರಸ್ ದೊಡ್ಡ ಪ್ರಮಾಣದಲ್ಲಿ ಹರಡುತ್ತಿದೆ. ಇದು ಕರ್ನಾಟಕವನ್ನು ಭಾರೀ ಪ್ರಮಾಣದಲ್ಲಿ ಪ್ರವೇಶಿಸಬಾರದು ಎನ್ನುವ ಆಶಯ ನಮ್ಮ ಸರ್ಕಾರದ್ದಾಗಿದೆ. ಈ ನಿರ್ಧಾರದ ಹಿಂದೆ ಕರ್ನಾಟಕದ ಜನಹಿತವೇ ಪರಮೋಚ್ಚವಾಗಿದೆ. ನನ್ನ ಸರ್ಕಾರ ಜನತೆಯ ಹಿತ ಕಾಪಾಡುವ ದೃಷ್ಟಿಯಿಂದ ಕೈಗೊಂಡಿರುವ ಈ ನಿರ್ಧಾರಕ್ಕೆ ಯಾವುದೇ ರೀತಿಯ ಪೂರ್ವಗ್ರಹಗಳಿಲ್ಲ. ಅಷ್ಟು ಮಾತ್ರವಲ್ಲ ಯಾವುದೇ ರೀತಿಯ ರಾಜಕೀಯ ದುರುದ್ದೇಶಗಳಿಲ್ಲ. ಈ ನಡುವೆಯು ಕರ್ನಾಟಕ ನೆರೆ ರಾಜ್ಯಗಳ ಜೊತೆ ಸೋದರ ಸಂಬಂಧ ಉಳಿಸಿಕೊಂಡಿದೆ. ಉಳಿದಂತೆ ಈ ಸಂಬಂಧವನ್ನು ಉಳಿಸಿ ಬೆಳೆಸುವ ನೀತಿಗೆ ನನ್ನ ಸರ್ಕಾರ ಸದಾ ಬದ್ಧವಾಗಿದೆ.ಮಾನವೀಯತೆ ದೃಷ್ಟಿಯಿಂದ ಗಡಿ ದಿಗ್ಬಂಧನವನ್ನು ತೆರವುಗೊಳಿಸಬೇಕು ಎನ್ನುವ ತಮ್ಮ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಅಭಿಪ್ರಾಯವನ್ನು ನಾನು ಗೌರವಿಸುತ್ತೇನೆ. ಅದರೆ ಕರ್ನಾಟಕದ ಜನತೆಯ ಹಿತವೇ ಪರಮೋಚ್ಛ. ಒಂದು ವೇಳೆ ಗಡಿ ದಿಗ್ಬಂಧನ ತೆರವುಗೊಳಿಸಿದರೆ ಕರ್ನಾಟಕದ ಸಾವಿರಾರು ಮುಗ್ದ ಜನರ ಆರೋಗ್ಯಕ್ಕೆ ಧಕ್ಕೆಯಾಗುತ್ತದೆ ಎನ್ನುವ ನನ್ನ ಸರ್ಕಾರದ ಕಳಕಳಿಯನ್ನು ತಾವು ಮತ್ತು ಸಿದ್ದರಾಮಯ್ಯ ಅವರು ಅರ್ಥ ಮಾಡಿಕೊಳ್ಳುತ್ತೀರಿ ಎನ್ನುವ ಭರವಸೆ ನನಗಿದೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ