ನವದೆಹಲಿ, ಜೂನ್ 13: ಇದೇ ತಿಂಗಳ ಮೂರರಂದು ನಾಪತ್ತೆಯಾಗಿದ್ದ ಎಎನ್ - 32 ವಿಮಾನ ಪತನಗೊಂಡಿರುವ ಸ್ಥಳವನ್ನು ಗುರುವಾರ ಬೆಳಗ್ಗೆ ತಲುಪಿರುವ ಭಾರತೀಯ ವಾಯುಪಡೆಯ ತಂಡಗಳು, ನತದೃಷ್ಟ ವಿಮಾನದಲ್ಲಿದ್ದ ಯಾರೊಬ್ಬರು ಬದುಕುಳಿದಿರುವುದು ಕಂಡು ಬಂದಿಲ್ಲ ಎಂದು ಹೇಳಿದೆ. ಪತನಗೊಂಡಿರುವ ತನ್ನ ವಿಮಾನದಲ್ಲಿ ಯಾರೊಬ್ಬರೂ ಬದುಕುಳಿದಿಲ್ಲ ಎಂಬ ಅಂಶವನ್ನು ಅದರಲ್ಲಿ ಪ್ರಯಾಣಿಸಿದ್ದ ತಮ್ಮ ಎಲ್ಲ 13 ಸಿಬ್ಬಂದಿಯ ಕುಟುಂಬಗಳಿಗೆ ಭಾರತೀಯ ವಾಯುಪಡೆ ಈಗಾಗಲೇ ಮಾಹಿತಿ ರವಾನಿಸಿದೆ. 15 ಮಂದಿ ರಕ್ಷಣಾ ತಂಡವನ್ನು ಬುಧವಾರ ವಾಯುಪಡೆಯ ಎಎನ್ -32 ವಿಮಾನ ಪತನಗೊಂಡಿದ್ದ ಸ್ಥಳಕ್ಕೆ ರವಾನಿಸಲಾಗಿತ್ತು, ಆದರೆ, ಕಡಿದಾದ ಪ್ರದೇಶ, ಪ್ರತಿಕೂಲ ಹವಾಮಾನದಿಂದಾಗಿ ರಕ್ಷಣಾ ತಂಡ ನಿನ್ನೆ ಯಾವುದೇ ಕಾರ್ಯ ಆರಂಭಿಸಲು ಸಾಧ್ಯವಾಗಿರಲಿಲ್ಲ ಸಿಯಾನ್ ಜಿಲ್ಲೆಯ ಗಟ್ಟೆ ಗ್ರಾಮದ ಬಳಿಯ 12 ಸಾವಿರ ಅಡಿ ಎತ್ತರದಲ್ಲಿ ವಾಯುಪಡೆಯ ಎಂ ಐ - 17 ಹೆಲಿಕಾಪ್ಟರ್, ಎಎನ್ - 32 ವಿಮಾನ ಅವಶೇಷ ಪತ್ತೆ ಹಚ್ಚಿದ ನಂತರ, ಸ್ಥಳಕ್ಕೆ ಭಾರತೀಯ ವಾಯುಪಡೆಯ ಒಂಭತ್ತು ಮಂದಿ ಹಾಗೂ ಸೇನೆ ಹಾಗೂ ಇಬ್ಬರು ನಾಗರಿಕ ಪರ್ವತಾರೋಹಿಗಳನ್ನು ಸ್ಥಳಕ್ಕೆ ರವಾನಿಸಿತ್ತು ವಿಮಾನ ಪತನಗೊಂಡಿರುವ ಪ್ರದೇಶ ದಟ್ಟ ಅರಣ್ಯದಿಂದ ಆವೃತ್ತಗೊಂಡಿದ್ದು, ಕಳೆದ ಮೂರು ದಿನಗಳಿಂದ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿದೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ. ನಾಪತ್ತೆಯಾಗಿದ್ದ 13 ಜನರನ್ನು ಹೊತ್ತ ವಾಯುಪಡೆಯ ಎಎನ್ - 32 ವಿಮಾನ ಪತ್ತೆಗೆ. ವ್ಯಾಪಕ ಶೋಧನಾ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ರಷ್ಯ ನಿರ್ಮಿತ ಎಎನ್ - 32 ವಿಮಾನ ಜೂನ್ 3 ರಂದು ಅಸ್ಸಾಂ ಜೋಹಾತ್ ನಿಂದ ಅರುಣಾಚಲ ಪ್ರದೇಶದ ಮೆಂಚುಕಾಗೆ ತೆರಳುತ್ತಿದ್ದಾಗ ನಾಪತ್ತೆಯಾಗಿತ್ತು.