ಯಾರೇ ಹೋದರು ಪ್ರವಾಹ ನಿಲ್ಲಿಸಲು ಸಾಧ್ಯವಿಲ್ಲ : ಎಚ್ ಡಿ ದೇವೇಗೌಡ

ಬೆಂಗಳೂರು,ಆ 08     ಉತ್ತರ ಕರ್ನಾಟಕದ ಭಾಗದಲ್ಲಿ ತಲೆದೋರಿರುವ ಪ್ರವಾಹವನ್ನು ಯಾರಿಂದಲೂ ನಿಲ್ಲಿಸಲು ಸಾಧ್ಯವಿಲ್ಲ, ಎಲ್ಲೆಡೆ ವರುಣನ ಆರ್ಭಟ ಹೆಚ್ಚಾಗಿದೆ ಪ್ರವಾಹವನ್ನು ಒಂದೇ ದಿನಕ್ಕೆ  ನಿಲ್ಲಿಸಲು ಆಗುವುದಿಲ್ಲ, ಆದರೆ ಅಗತ್ಯ ರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ತಿಳಿಸಿದ್ದಾರೆ. ನಗರದ ಜೆ ಪಿ ಭವನದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಉತ್ತರ ಕರ್ನಾಟಕ ಪ್ರವಾಸಕ್ಕೆ ನಿನ್ನೆಯೇ ಹೋಗಿದ್ದಾರೆ. ಯಾರೇ ಹೋದರೂ ಪ್ರವಾಹ  ನಿಲ್ಲಿಸಲು ಸಾಧ್ಯವಿಲ್ಲ. ವರುಣನ ಆರ್ಭಟ ಹೆಚ್ಚಾಗಿದೆ. ಪ್ರವಾಹವನ್ನು ಒಂದೇ ದಿನಕ್ಕೆ  ನಿಲ್ಲಿಸಲು ಆಗುವುದಿಲ್ಲ ಆದರೆ ಅಗತ್ಯ ರಕ್ಷಣಾ ಕ್ರಮಗಳಿಗೆ ಆದ್ಯತೆ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.    ಬೆಳಗಾವಿಗೆ ಮುಖ್ಯಮಂತ್ರಿ ಹಾಗೂ ರೈಲ್ವೇ ಸಚಿವರು ಭೇಟಿ ನೀಡಿರುವುದನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಬಿಜೆಪಿ ಸರ್ಕಾರದಲ್ಲಿ ಇನ್ನೂ ಮಂತ್ರಿ ಮಂಡಲ ರಚಿಸಿಲ್ಲ, ಅವರ ವರಿಷ್ಠರು ಆದೇಶ ನೀಡಿದ ನಂತರ  ಮಾಡುತ್ತಾರೆ. ಅಲ್ಲಿಯವರೆಗೆ ಅವರೇ ಎಲ್ಲಾ ಜವಾಬ್ದಾರಿ ನಿರ್ವಹಿಸಲಿ ಎಂದು ಪರೋಕ್ಷವಾಗಿ ಲೇವಡಿ ಮಾಡಿದರು.   ಬಿಜೆಪಿ ಸರ್ಕಾರದ ಬಗ್ಗೆ ಪ್ರಮಾಣಪತ್ರ ನೀಡಲು ನಾನು ಯಾರೂ ಎಂದು ಪ್ರಶ್ನಿಸಿದ ಅವರು, ಪ್ರವಾಹ ಪರಿಸ್ಥಿತಿಯ ಸ್ಥಳಕ್ಕೆ ಭೇಟಿಕೊಟ್ಟರೆ ಸರ್ಕಾರ ಹೇಗೆ ಕೆಲಸ ಮಾಡುತ್ತಿದೆ ಎಂದು ಅಲ್ಲಿನ ಜನರೇ ಹೇಳುತ್ತಾರೆ ಎಂದರು ಆಗಸ್ಟ್ 18ಕ್ಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಹಿಳಾ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ನಮ್ಮ ಸರ್ಕಾರದ ಅವಧಿಯಲ್ಲಿ, ಹಾಗೂ ಎರಡು ಭಾರಿ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ನೀಡಿದ ಕೊಡುಗೆಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಆಗಬೇಕಿದೆ. ಜನರು ಬೇಗ ಎಲ್ಲವನ್ನು ಮರೆತುಬಿಡುತ್ತಾರೆ. ಹೀಗಾಗಿ ಸಮಾವೇಶ ಮಾಡುವ ಮೂಲಕ ಅವರಿಗೆ ಮಾಹಿತಿ, ಜಾಗೃತಿ ಮೂಡಿಸಬೇಕಿದೆ ಎಂದರು.