ನಿಮ್ಮ ಹಕ್ಕುಗಳನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ; ಪ್ರಧಾನಿ ಭರವಸೆ

ಧನ್ಬಾದ್, 12 ಅಸ್ಸಾಂನ ಮತ್ತು ಇಡೀ ಈಶಾನ್ಯ ಜನರು ಪೌರತ್ವ ತಿದ್ದುಪಡಿ ಮಸೂದೆ (ಸಿಎಬಿ) ಸಂಸತ್ತಿನಲ್ಲಿ ಅಂಗೀಕರಿಸಿರುವ ಬಗ್ಗೆ ಚಿಂತಿಸಬೇಕಾಗಿಲ್ಲ. ಮಸೂದೆಯ ಬಗ್ಗೆ ಕಾಂಗ್ರೆಸ್ ಸುಳ್ಳು ಹರಡುತ್ತಿದ್ದು ಅದರ ಬಲೆಗೆ ಬೀಳದಂತೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.  “ಪೌರತ್ವ ತಿದ್ದುಪಡಿ ಮಸೂದೆ (ಸಿಎಬಿ), ಜಾರಿ ನಂತರ ಅಸ್ಸಾಂನ ನನ್ನ ಸಹೋದರ ಸಹೋದರಿಯರು ಚಿಂತೆ ಪಡುವ ಅಗತ್ಯವಿಲ್ಲ” ಎಂದು ಹೇಳಿರುವ ಪ್ರಧಾನಿ, “ ನಿಮ್ಮ ಹಕ್ಕುಗಳು, ಅನನ್ಯ ಗುರುತು ಮತ್ತು ಸುಂದರವಾದ ಸಂಸ್ಕೃತಿಯನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ” ಎಂದು ಭರವಸೆ ನೀಡುವುದಾಗಿ ಸಹ ಹೇಳಿದರು.  ನಿಮ್ಮ ಸಂಸ್ಕೃತಿ ಇನ್ನೂ ಮುಂದುವರಿಯುತ್ತದೆ ಮತ್ತು ಬೆಳೆಯುತ್ತದೆ ಎಂದು ಬಾರ್ವಾಡ್ಡದಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಅಭಿಪ್ರಾಯಪಟ್ಟರು.  6 ನೇ ನಿಯಮದ ಅನ್ವಯ, ಅಸ್ಸಾಂ ಜನರ ರಾಜಕೀಯ, ಭಾಷಿಕ, ಸಾಂಸ್ಕೃತಿಕ ಮತ್ತು ಭೂ ಹಕ್ಕುಗಳನ್ನು ಸಂವಿಧಾನಾತ್ಮಕವಾಗಿ ಕಾಪಾಡಲು ಕೇಂದ್ರ ಸರ್ಕಾರ ಮತ್ತು ಬಿಜೆಪಿ ಸಂಪೂರ್ಣವಾಗಿ ಬದ್ಧವಾಗಿವೆ. ಪೌರತ್ವ ತಿದ್ದುಪಡಿ ಮಸೂದೆಯ ವ್ಯಾಪ್ತಿಯಿಂದ ಇಡೀ ಈಶಾನ್ಯ ಭಾಗ ಬಹುತೇಕ ಹೊರಗಿದೆ ಎಂದು ಮೋದಿ ಹೇಳಿದರು.  ಕಾಂಗ್ರೆಸ್ ಪಕ್ಷ ಅಕ್ರಮ, ದಂಗೆಕೋರರ ರಾಜಕೀಯದಲ್ಲಿ ತೊಡಗಿದೆ ಮತ್ತು ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಅವರು, ಈಶಾನ್ಯ ಪ್ರದೇಶದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಪ್ರಾದೇಶಿಕ ರಾಜಕೀಯ ಪಕ್ಷಗಳು, ಪ್ರಾದೇಶಿಕ ಮಂಡಳಿಗಳು ಮತ್ತು ಈಶಾನ್ಯ ರಾಜ್ಯಗಳಲ್ಲಿರುವ ಇತರ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದೆ ಎಂದು ಹೇಳಿದರು.  ದೇಶದ ಹಿಂದಿನ ಪ್ರಧಾನಮಂತ್ರಿಗಳಿಗಿಂತ ತಾವು ಹೆಚ್ಚಾಗಿ ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳಿಗೆ ಪ್ರಯಾಣ ಬೆಳೆಸಿರುವುದಾಗಿ ಮೋದಿ ಹೇಳಿದರು. ತಮ್ಮ ನೀತಿ ನಿರೂಪಣೆಗಳ ಮೂಲಕ ಈ ಪ್ರದೇಶವನ್ನು ದೇಶದ ಪ್ರಗತಿಯ ವರ್ಧಕವಾಗಿಸುವತ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪ್ರಧಾನಮಂತ್ರಿ ಮೋದಿ ತಿಳಿಸಿದರು.