ಲಾಕ್‌ಡೌನ್ ಪ್ಯಾಕೇಜ್‌ನಿಂದ ಯಾರಿಗೂ ಲಾಭವಾಗಿಲ್ಲ: ಡಿ.ಕೆ.ಶಿವಕುಮಾರ್ ಟೀಕೆ

ಬೆಂಗಳೂರು, ಮೇ 26,ರಾಜ್ಯ ಸರ್ಕಾರ ಲಾಕ್‌ ಡೌನ್ ಸಂಕಷ್ಟ ಪರಿಹಾರಕ್ಕಾಗಿ ವಿವಿಧ ವರ್ಗಗಳಿಗೆ ಘೋಷಿಸಿರುವ ಪ್ಯಾಕೇಜ್ ಇದುವರೆಗೂ ಯಾರನ್ನೂ ತಲುಪಿಲ್ಲ. ಅಸಂಘಟಿತ ಕಾರ್ಮಿಕರು ಸೇರಿದಂತೆ ಯಾರೊಬ್ಬರಿಗೂ ನಯಾ ಪೈಸೆ ಸಿಕ್ಕಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ಲಾಕ್‌ ಡೌನ್ ನಿಂದ ಆಟೋ, ಟ್ಯಾಕ್ಸಿ ಚಾಲಕರು ಸೇರಿದಂತೆ ಅನೇಕ ವರ್ಗದ ಜನರು ಬಹಳ ಸಂಕಷ್ಟದಲ್ಲಿದ್ದಾರೆ. ಪರಿಹಾರ ಧನ ಪಡೆಯಲು ಆಟೋ ಚಾಲಕರು ಪರದಾಡುತ್ತಿದ್ದಾರೆ. ಕೆಲವು ಕಡೆ ಪರಿಹಾರ ಧನ ವಿತರಿಸಲು ಅಧಿಕಾರಿಗಳು ಲಂಚದ ಬೇಡಿಕೆ ಇಡುತ್ತಿದ್ದಾರೆ. ಪರಿಹಾರಕ್ಕೆ ಅಧಿಕಾರಿಗಳು ಅನೇಕ ದಾಖಲೆಗಳು ಕೇಳುತ್ತಿದ್ದು, ಚಾಲಕರು ಗೊಂದಲದಲ್ಲಿದ್ದು, ಅವರ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ ಎಂದು ಆರೋಪಿಸಿದರು.ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ದೆಹಲಿಯಿಂದ ವಿಮಾನದ ಮೂಲಕ ನಗರಕ್ಕೆ ಆಗಮಿಸಿದ್ದು, ಅವರು ಯಾವುದೇ ಪರೀಕ್ಷೆಗೆ ಒಳಗಾಗಿಲ್ಲ. ಜನಪ್ರತಿನಿಧಿಗಳು ಈ ರೀತಿ ಮಾಡಬಾರದು ಎಂದು ಹೇಳಿದರು.