ಹೈದರಾಬಾದ್, ಆಗಸ್ಟ್ 31: ಭಾರತ ಯಾವುದೇ ದೇಶದ ಮೇಲೆ ದಾಳಿ ಮಾಡಿಲ್ಲ ಮತ್ತು ಭವಿಷ್ಯದಲ್ಲಿಯೂ ಮಾಡುವುದಿಲ್ಲ, ನೆರೆ ಹೊರೆ ರಾಷ್ಟ್ರಗಳ ಜೊತೆ ಸದಾ ಉತ್ತಮ ಸ್ನೇಹ ಸಂಬಂಧ ಬಯಸುತ್ತದೆ ಎಂದು ಉಪರಾಷ್ಟ್ರಪತಿ ಎಂ .ವೆಂಕಯ್ಯ ನಾಯ್ಡು ಪ್ರತಿಪಾದಿಸಿದ್ದಾರೆ.
ಅದರೆ ದೇಶದ ಆಂತರಿಕ ವ್ಯವಹಾರಗಳಲ್ಲಿ ಯಾವುದೇ ದೇಶ ಹಸ್ತಕ್ಷೇಪ ಮಾಡಿದರೆ ಸೂಕ್ತ ಉತ್ತರ ನೀಡಲಿದೆ ಜೊತೆಗೆ ಭಾರತ ಅದನ್ನು ಎಂದಿಗೂ ಸಹಿಸುವುದಿಲ್ಲ ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.
ವಿದೇಶಾಂಗ ಸಚಿವಾಲಯ ಮತ್ತು ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ ಜಂಟಿಯಾಗಿ ಆಯೋಜಿಸಿದ್ದ ಅಡೆತಡೆಗಳ ಯುಗದಲ್ಲಿ ಆರ್ಥಿಕ ರಾಜತಾಂತ್ರಿಕತೆ ಎಂಬ ಸಮಾವೇಶದಲ್ಲಿ ಅವರು ಮಾತನಾಡಿದರು.
ಭಾರತ ಶಾಂತಿ ಪ್ರಿಯ ದೇಶ ಮತ್ತು ವಸುದೈವ ಕುಟುಂಬಕಂ (ಜಗತ್ತು ಒಂದು ಕುಟುಂಬ) ಮತ್ತು ಪ್ರತಿಯೊಬ್ಬರೂ ಸಂತೋಷವಾಗಿರಬೇಕು ಎಂಬ ತತ್ವದಲ್ಲಿ ನಂಬಿಕೆ ಇಟ್ಟಿದೆ ಎಂದು ಹೇಳಿದರು.
ಭಯೋತ್ಪಾದನೆಗೆ ಸಹಾಯ ಮಾಡಿ ತರಬೇತಿ ನೀಡುವ ನಮ್ಮ ನೆರೆಹೊರೆಯ ದೇಶ (ಪಾಕಿಸ್ತಾನವನ್ನು ಹೆಸರಿಸದೆ) ಇದು ಅವರಿಗೆ ಮಾತ್ರವಲ್ಲ ವಿಶ್ವ ಸಮುದಾಯಕ್ಕೂ ಕೆಟ್ಟದ್ದಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಭಾರತ ನೆರೆಯ ರಾಷ್ಟ್ರಗಳೊಂದಿಗೆ ಸದಾಕಾಲ ಉತ್ತಮ ಸ್ನೇಹ ಸಂಬಂಧ ಬಯಸುತ್ತದೆ ಎಂದು ಉಪರಾಷ್ಟ್ರಪತಿ ಒತ್ತಿ ಹೇಳಿದರು.