ಶಿವಮೊಗ್ಗ, ಫೆ.13, ಖಾತೆ ಹಂಚಿಕೆ ವಿಷಯದಲ್ಲಿ ಅಸಮಾಧಾನಗೊಂಡವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಖಾತೆ ಬದಲಾವಣೆ ಮಾಡಿ ಕೊಟ್ಟಿದ್ದಾರೆ. ಇಂತಹದ್ದೇ ಖಾತೆ ಬೇಕು ಅಂತ ಕೇಳುವಂತಹದ್ದು ಸಹಜ. ಎಲ್ಲರಿಗೂ ಸಂಪೂರ್ಣವಾಗಿ ತೃಪ್ತಿಕರವಾಗುವಂತೆ ಉತ್ತಮವಾಗಿ ಮುಖ್ಯಮಂತ್ರಿ ಕಾರ್ಯನಿರ್ವಹಿಸಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವಥ್ ನಾರಾಯಣ್ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರಿಗೂ ಸಚಿವರಾಗಬೇಕು ಎಂಬ ಆಸೆ ಇರುತ್ತದೆ. ಮುಖ್ಯಮಂತ್ರಿಗಳು ಸೂಕ್ತ ಸಂದರ್ಭದಲ್ಲಿ ಅವರವರ ಸಾಮರ್ಥ್ಯ ನೋಡಿ ಖಾತೆ ಹಂಚಿಕೆ ಮಾಡಿದ್ದಾರೆ. ಸೋತವರಿಗೂ ಸಚಿವ ಸ್ಥಾನ ನೀಡುವ ಬಗ್ಗೆ ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳುತ್ತಾರೆ. ಈ ಬಗ್ಗೆ ಸೋತವರಿಗೆ ಮುಂದೆ ತಿಳಿಯಲಿದೆ ಎಂದು ಹೇಳಿದರು.
ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ ಅವರಿಗೆ ಸಚಿವ ಸ್ಥಾನ ನೀಡಬೇಕೋ, ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕೋ ಎಂಬುದನ್ನು ಮುಖ್ಯಮಂತ್ರಿ ನಿರ್ಧರಿಸುತ್ತಾರೆ. ನಮಗೆ ನಮ್ಮದೇ ಆದ ಇತಿ ಮಿತಿ ಇರುತ್ತದೆ. ನಾವು ನಮ್ಮ ಪರಿದಿಯಲ್ಲಿ ನಡೆಯುತ್ತಿದ್ದೇವೆ. ಖಾತೆ ಹಂಚಿಕೆ ಬಗ್ಗೆ ಯಾವುದೇ ಅಸಮಾಧಾನ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಶಿವಮೊಗ್ಗದಲ್ಲಿ ತಾವು ಪ್ರೌಢಶಾಲೆ ಹಾಗೂ ಪಿಯುಸಿ ವ್ಯಾಸಂಗ ಮಾಡಿದ್ದೇನೆ. ಶಿವಮೊಗ್ಗ ಎಂದರೆ ತಮಗೆ ವಿಶೇಷ ಪ್ರೀತಿ, ಆತ್ಮೀಯತೆ ಇದೆ. ಮುಖ್ಯಮಂತ್ರಿ ಅವರಿಗೆ ಶಿವಮೊಗ್ಗದಲ್ಲಿ ಎಲ್ಲಾ ರೀತಿಯ ಅಭಿವೃದ್ಧಿ ಮಾಡಬೇಕು ಎಂಬ ಚಿಂತನೆ ಇದೆ. ಎಲ್ಲರೂ ಅವರೊಂದಿಗೆ ಕೈಜೋಡಿಸಿ ಶಿವಮೊಗ್ಗದ ಅಭಿವೃದ್ಧಿ ಮಾಡಲಾಗುವುದು ಎಂದು ಭರವಸೆ ನೀಡಿದರು.