ನವದೆಹಲಿ, ಫೆ.1- ಶಿಕ್ಷಣ, ಆರೋಗ್ಯ, ಕೃಷಿ, ಗ್ರಾಮೀಣಾಭಿವೃದ್ಧಿ ಕೈಗಾರಿಕೆ ಸೇರಿದಂತೆ ಆದ್ಯತಾ ವಲಯಕ್ಕೆ ಹೆಚ್ಚಿನ ಒತ್ತು ನೀಡಿ, ಮಧ್ಯಮ ಮತ್ತು ಮೇಲ್ಮದ್ಯಮ ವರ್ಗಕ್ಕೆ ಆದಾಯ ತೆರಿಗೆ ಹೆಚ್ಚಾಗದಂತೆ ನೋಡಿಕೊಂಡು, ವಸತಿ, ರಕ್ಷಣೆ, ಸಾರಿಗೆ ಸೇರಿದಂತೆ ವಿವಿಧ ವಲಯಗಳಿಗೆ ಅಲ್ಪಸ್ವಲ್ಪ ಅನುದಾನವನ್ನು ನೀಡುವ, ಯಾರಿಗೂ ಹೆಚ್ಚು ಅನುದಾನ ನೀಡದೆ, ಯಾರಿಂದಲೂ ಹೆಚ್ಚು ಕಿತ್ತುಕೊಳ್ಳದ ಸಮತೋಲನ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ್ದಾರೆ.
ನಿರ್ಮಲಾ ಸೀತಾರಾಮನ್ 2020-21ನೇ ಸಾಲಿನ ಬಜೆಟ್ ಅನ್ನು ಲೋಕಸಭೆಯಲ್ಲಿ ಒಟ್ಟು160 ನಿಮಿಷಗಳ ಕಾಲ ನಿರಂತರವಾಗಿ ಓದಿ ಮುಗಿಸಿ ಇತಿಹಾಸದಲ್ಲಿ ಹೊಸ ದಾಖಲೆ ಬರೆದರು. ಸೀತಾರಾಮನ್ ಬೆಳಿಗ್ಗೆ 11 ಗಂಟೆಗೆ ಬಜೆಟ್ ಭಾಷಣ ಆರಂಭಿಸಿ. ಮಧ್ಯಾಹ್ನ 1:40ಕ್ಕೆ ಮುಗಿಸಿದರು. ಈ ಮೂಲಕ 2 ಗಂಟೆ, 40 ನಿಮಿಷ ಬಜೆಟ್ ಭಾಷಣ ಓದಿದರು. ಇನ್ನೂ ಕೇವಲ ಎರಡು ಪುಟಗಳು ಬಾಕಿ ಇರುವಾಗ ಆಯಾಸಕ್ಕೆ ಒಳಗಾದವರಂತೆ ಕಂಡರು.
ಕೃಷಿಗೆ ಒತ್ತು ನೀಡಿರುವ ಅವರು, ಕೃಷಿಯಲ್ಲಿ 16 ಅಂಶಗಳನ್ನು ಜಾರಿಗೊಳಿಸುವುದಾಗಿ ಘೋಷಿಸಿದ್ದಾರೆ. ಕೃಷಿ, ಕೃಷಿ ಅವಲಂಬಿತ ಕ್ಷೇತ್ರದ ಅಭ್ಯುದಯಕ್ಕಾಗಿ 1.60 ಲಕ್ಷ ಕೋಟಿ, ಗ್ರಾಮೀಣಾಭಿವೃದ್ಧಿಗೆ 1.23 ಲಕ್ಷ ಕೋಟಿ ರೂ ನಿಗದಿ ಮಾಡಲಾಗಿದೆ. 2020 - 21ನೇ ಸಾಲಿನಲ್ಲಿ ಕೃಷಿ ಕ್ಷೇತ್ರಕ್ಕೆ ನಬಾರ್ಡ್ ಮೂಲಕ 15 ಲಕ್ಷ ಕೋಟಿ ರೂ ಸಾಲ ಸೌಲಭ್ಯ ಒದಗಿಸಿ ಜತೆಗೆ ಜನರ ಖರೀದಿ ಸಾಮರ್ಥ್ಯ ವೃದ್ಧಿಸಲಾಗುವುದು ಎಂದು ಪ್ರಕಟಿಸಿದ್ದಾರೆ.
ನೀರಾವರಿ ಯೋಜನೆಯನ್ನು100 ಜಿಲ್ಲೆಗಳಿಗೆ ವಿಸ್ತರಣೆ ಮಾಡುವ ಜತೆಗೆ ರೈತರು ತಮ್ಮ ಭೂಮಿಯಲ್ಲಿ ಸೌರ ವಿದ್ಯುತ್ ಉತ್ಪಾದನೆ ಮಾಡಲು ಪ್ರೋತ್ಸಾಹ, ಅನ್ನದಾತ ವಿದ್ಯುತ್ ದಾತನೂ ಸಹ ಆಗುವಂತೆ ಮಾಡುತ್ತೇವೆ. ಬರಡು ಭೂಮಿ ಹೊಂದಿರುವ 20 ಲಕ್ಷ ರೈತರಿಗೆ ಸೌರ ವಿದ್ಯುತ್ ಪಂಪ್ ವಿತರಣೆಗೆ ಕ್ರಮ, ಜತೆಗೆ 15 ಲಕ್ಷ ರೈತರ ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಜಾಲದ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.
ಸಮತೋಲಿತ ಗೊಬ್ಬರ ವ್ಯವಸ್ಥೆ ಇಂದಿನ ಅಗತ್ಯವಾಗಿದ್ದು, ಎಲ್ಲ ರಸಗೊಬ್ಬರಗಳ ಸಮತೋಲಿತ ಬಳಕೆಯನ್ನು ಸರ್ಕಾರ ಪ್ರೋತ್ಸಾಹಿಸಲಿದೆ. ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯನ್ನು ಉತ್ತೇಜಿಸುವ ಪ್ರೋತ್ಸಾಹಧನದ ಹಿಂದಿನ ಕ್ರಮಗಳಲ್ಲಿ ಬದಲಾವಣೆ ತರಲಾಗುವುದು ಎಂದರು.
ರೈತರ ಉತ್ಪನ್ನಗಳನ್ನು ಸಂಗ್ರಹಿಸಲು ಉಗ್ರಾಣ ನಿರ್ಮಾಣಕ್ಕೆ ಒತ್ತು ನೀಡಿ ಆಹಾರಧಾನ್ಯ ಸಂಗ್ರಹ ಪ್ರಮಾಣವನ್ನು 162 ದಶಲಕ್ಷ ಟನ್ ಗಳಿಗೆ ಸಾಮರ್ಥ್ಯ ಹೆಚ್ಚಿಸಲಾಗುವುದು. ಗೋದಾಮುಗಳನ್ನು ಅಭಿವೃದ್ಧಿಪಡಿಸಲು ನಬಾರ್ಡ್ ನಿಂದ ಕಾರ್ಯಕ್ರಮ ರೂಪಿಸಲಾಗುವುದು. ತಾಲ್ಲೂಕು ಮತ್ತು ಬ್ಲಾಕ್ ಮಟ್ಟಗಳಲ್ಲಿ ಗೋದಾಮುಗಳ ನಿರ್ಮಾಣಕ್ಕೆ ಸರ್ಕಾರ ನೆರವು ನೀಡಲಿದೆ.
ಜತೆಗೆ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ 6.1 ಲಕ್ಷ ರೈತರು ನೋಂದಣಿಯಾಗಿದ್ದು, ಇದರಿಂದ ವಿಮಾ ಯೋಜನೆಗೆ ಹೊಸ ಸ್ವರೂಪ ದೊರೆತಿದೆ. ರೈತ ಮಹಿಳೆಯರಿಗಾಗಿ ಧನ ಲಕ್ಷ್ಮಿ ಯೋಜನೆ ಜಾರಿಗೆ ತರಲಾಗುವುದು. ಧಾನ್ಯ ಲಕ್ಷ್ಮಿ ಯೋಜನೆಯಡಿ ಮುದ್ರಾ ಮತ್ತು ನಬಾರ್ಡ್ ಮೂಲಕ ರೈತ ಮಹಿಳೆಯರಿಗೆ ಕೃಷಿ ಸಾಲಸಾಲಭ್ಯ ಒದಗಿಸಲಾಗುವುದು. ಕೃಷಿ ಕ್ಷೇತ್ರದಲ್ಲಿ ಸ್ಪರ್ಧಾತ್ಮಕತೆಗೆ ಒತ್ತು ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಪ್ರಕಟಿಸಿದರು.
ಕೃಷಿ ಉಡಾನ್, ರೈಲ್ವೆ ಉಡಾನ್ ಯೋಜನೆ ಜಾರಿಗೆ ತರಲಾಗುವುದು. ನಾಗರಿಕ ವಿಮಾನ ಯಾನ ವಲಯದಲ್ಲಿ ಉಡಾನ್ ಯೋಜನೆ ಯಶಸ್ವಿಯಾಗಿದ್ದು, ಇದೇ ಮಾದರಿಯಲ್ಲಿ ರೈಲು ಮತ್ತು ವಿಮಾನಗಳ ಮೂಲಕ ರೈತರ ಉತ್ಪನ್ನಗಳನ್ನು ಸಾಗಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಕೃಷಿ ಜತೆಗೆ ಕೃಷಿ ಅವಲಂಬಿತ ಕ್ಷೇತ್ರಗಳತ್ತಲೂ ಗಮನಹರಿಸಲಾಗಿದ್ದು. ಬರುವ 2025ರ ವೇಳೆಗೆ ಹಾಲು ಉತ್ಪಾದನೆಯನ್ನು ದ್ವಿಗುಣಗೊಳಿಸಲಾಗುವುದು. ಸಾಗರ ಮಿತ್ರ ಯೋಜನೆಯಡಿ ಕರಾವಳಿ ಭಾಗಗಳಲ್ಲಿ ಯುವ ಸಮೂಹಕ್ಕೆ ಮೀನುಗಾರಿಕೆ ಕ್ಷೇತ್ರದಲ್ಲಿ ತೊಡಗಿಕೊಳ್ಳಲು ನೆರವು ನೀಡಲಾಗುವುದು. 500 ಮೀನುಗಾರ ಉತ್ಪಾದನಾ ಸಂಘಟನೆಗಳನ್ನು ಸ್ಥಾಪಿಸಲಾಗುವುದು ಎಂದು ಪ್ರಕಟಿಸಿದರು.
ತೋಟಗಾರಿಕೆ ವಲಯದಲ್ಲಿ 311 ದಶಲಕ್ಷ ಟನ್ ತೋಟಗಾರಿಕಾ ಉತ್ಪನ್ನಗಳು ಉತ್ಪಾದನೆಯಾಗುತ್ತಿದ್ದು, ಈ ಕ್ಷೇತ್ರದಲ್ಲಿ ಉತ್ಪಾದನೆ ಪ್ರೋತ್ಸಾಹಿಸಲು ಶೂನ್ಯ ಬಂಡವಾಳ ಕೃಷಿಗೆ ಒತ್ತು ನೀಡಲಾಗುವುದು. ರಾಷ್ಟ್ರೀಯ ಕೃಷಿ ಮಾರುಕಟ್ಟೆ ಯೋಜನೆ ಜಾರಿ. ನಬಾರ್ಡ್ ಮರು ಸಾಲ ಯೋಜನೆ ಜಾರಿಗೆ ತರಲಾಗುವುದು ಎಂದು ಹೇಳಿದರು.
ರಾಜ್ಯ ಸರ್ಕಾರಗಳ ಜತೆಗೂಡಿ ಪರಿಣಾಮಕಾರಿಯಾಗಿ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸಲಿದ್ದು, ರಾಜ್ಯ ಸರ್ಕಾರಗಳು ಸಹ ಕೃಷಿಗೆ ಸಂಬಂಧಿಸಿದ ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು ಎಂದು ನಿರ್ಮಲಾ ಸೀತಾರಾಮನ್ ಮನವಿಮಾಡಿದರು.
ನರೇಗಾ ಯೋಜನೆಯಡಿ ಜೇನು ಕೃಷಿಗೆ ಉತ್ತೇಜನ. ಜಾನುವಾರುಗಳ ಕಾಲು ಬಾಯಿ ರೋಗ ತಡೆಗೆ ಕ್ರಮ, ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಗೆ ಪ್ರಸ್ತಾವನೆ. ರೈತರ ಅನುಕೂಲಕ್ಕಾಗಿ ಕೃಷಿ ರೈಲ್, ಕೃಷಿ ಉಡಾನ್ ಯೋಜನೆ, ಮುದ್ರಾ, ನಬಾರ್ಡ್ ಯೋಜನೆಯಡಿ ರೈತರಿಗೆ ಸಾಲ, ಸೌಲಭ್ಯ ನೀಡಲಾಗುವುದು.
ಮಹಿಳೆಯ ಸಬಲೀಕರಣಕ್ಕೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಮಹಿಳೆಯರಿಗೆ ಸಂಬಂಧಿಸಿದ ಯೋಜನೆಗಳಿಗಾಗಿ 28,600 ಕೋಟಿ ರೂ. ಘೋಷಿಸಿದ್ದಾರೆ. ಕೇಂದ್ರ ಸರ್ಕಾರದ ಬೇಟಿ ಬಚಾವ್ ಬೇಟಿ ಪಡಾವೋ ಯೋಜನೆಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಿಕ್ಷಣದ ಎಲ್ಲಾ ಹಂತಗಳಲ್ಲಿ ಬಾಲಕಿಯರ ನೋಂದಣಿ ಬಾಲಕರಿಗಿಂತ ಹೆಚ್ಚಾಗಿದೆ ' ಎಂದರು.
ಪ್ರಾಥಮಿಕ ಹಂತದಲ್ಲಿ ಬಾಲಕಿಯರ ನೋಂದಣಿ ಶೇ. 94.32 ಹಾಗೂ ಬಾಲಕರ ನೋಂದಣಿ ಶೇ. 89.28ರಷ್ಟಿದೆ. ಪ್ರೌಢಶಾಲಾ ವರ್ಗದಲ್ಲಿ ಕೂಡ ಇದೇ ಪ್ರಮಾಣ ಕಂಡುಬಂದಿದೆ ಎಂದರು.
2020-21ನೇಸಾಲಿನ ಪೌಷ್ಟಿಕಾಂಶ ಸಂಬಂಧಿತ ಕಾರ್ಯಕ್ರಮಗಳಿಗೆ 35,600 ಕೋಟಿ ರೂ. ವಿನಿಯೋಗಿಸಲಾಗುತ್ತಿದೆ. 2017-18ರಲ್ಲಿ ಅನುಷ್ಠಾನಗೊಂಡ 'ಪೋಷಣ್ ಅಭಿಯಾನ'ದ ಮೂಲಕ 6 ವರ್ಷದವರೆಗಿನ ಮಕ್ಕಳು, ಅಪ್ರಾಪ್ತೆಯರು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರ ಪೌಷ್ಟಿಕಾಂಶವನ್ನು ಹೆಚ್ಚಿಸುವ ಗುರಿ ಹೊಂದಿದೆ ಎಂದರು.
ದೇಶದ 6 ಲಕ್ಷಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತರಿಗೆ ಸ್ಮಾರ್ಟ್ ಫೋನ್ ವಿತರಿಸಲಾಗುವುದು. ಈ ಮೂಲಕ ಅವರು 10 ಕೋಟಿಗೂ ಹೆಚ್ಚು ಕುಟುಂಬಗಳ ಪೌಷ್ಟಿಕಾಂಶದ ಸ್ಥಿತಿಗತಿಯನ್ನು ಅಪ್ ಲೋಡ್ ಮಾಡಲಿದ್ದಾರೆ ಎಂದರು.
ಬಜೆಟ್ ನಲ್ಲಿ ರಕ್ಷಣಾ ಕ್ಷೇತ್ರಕ್ಕೆ 3.37ಲಕ್ಷ ಕೋಟಿ ರೂಪಾಯಿ ಅನುದಾನವನ್ನು ನಿರ್ಮಲಾ ಸೀತಾರಾಮನ್ ನಿಗದಿಪಡಿಸಿದ್ದಾರೆ. ಪ್ರಸಕ್ತ ಹಣಕಾಸು ವರ್ಷಕ್ಕೆ ಹೋಲಿಕೆ ಮಾಡಿದರೆ ಇದು ಕೇವಲ ಶೇ. 5.8ರಷ್ಟು ಹೆಚ್ಚಳವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದ ರಕ್ಷಣಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದೆ. ದೇಶದ ರಕ್ಷಣಾ ಪಡೆಗಳನ್ನು ಬಲಗೊಳಿಸುವ ನಿಟ್ಟಿನಲ್ಲಿ ಕಳೆದ ಆರು ವರ್ಷಗಳ ಅವಧಿಯಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಂಡಿತ್ತು
ಕೇಂದ್ರ ಬಜೆಟ್ ವಿಶೇಷವಾಗಿ ಗ್ರಾಮೀಣ ಮತ್ತು ಮೂಲಸೌಕರ್ಯ-ಸಂಬಂಧಿತ ಸುಧಾರಣೆಯತ್ತ ವಿಶೇಷ ಗಮನ ಹರಿಸಿದ ಮೂಲಸೌಕರ್ಯ ಹೆಚ್ಚಿಸಲು ರೂ.103 ಲಕ್ಷ ಕೋಟಿ ಮತ್ತು ದೇಶದ ನಾನಾ ಭಾಗದಲ್ಲಿ ಇನ್ನೂ 100 ವಿಮಾನ ನಿಲ್ದಾಣಗಳ ಅಭಿವೃದ್ಧಿ ಮಾಡುವ ಘೋಷಣೆ ಮಾಡಲಾಗಿದೆ. ಸರ್ಕಾರ ಬಡವರಿಗೆ ಕೈಗೆಟುಕುವ ವಸತಿ ಒದಗಿಸಲು 150,000 ಕಡಿತ ಸಾಲ ಮಂಜೂರಾತಿಯನ್ನು ಇನ್ನೂ ಒಂದು ವರ್ಷ ವಿಸ್ತರಿಸಲಾಗಿದೆ. ಆರ್ಥಿಕ ಅಭಿವೃದ್ಧಿಗಾಗಿ ' ರಿಯಲ್ ಎಸ್ಟೇಟ್ ಉದ್ಯಮವನ್ನು ಪುನರುಜ್ಜೀವನಕ್ಕೆ ಇದು ಪೂರಕವಾಗಲಿದೆ. ನಾಗರಿಕರ ಕ್ಷೇಮದ ಗುರಿಯೊಂದಿಗೆ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಗೆ 6,400 ಕೋಟಿ ರೂ ಸೇರಿದಂತೆ ಆರೋಗ್ಯ ರಕ್ಷಣೆ ವಲಯಕ್ಕೆ 69,000 ಕೋಟಿ ರೂ ಹಣವನ್ನು 2020-21 ನೇ ಸಾಲಿನ ಬಜೆಟ್ ನಲ್ಲಿ ಒದಗಿಸಲಾಗಿದೆ.
‘ಸದ್ಯ, ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂಜೆಎವೈ) ಅಡಿ 20,000 ಕ್ಕೂ ಹೆಚ್ಚು ಪಟ್ಟಿ ಮಾಡಿದ ಆಸ್ಪತ್ರೆಗಳಿವೆ. ಈ ಯೋಜನೆಯಡಿ ಬಡ ಜನರಿಗೆ ಎರಡು ಮತ್ತು ಮೂರನೇ ಸ್ತರ ನಗರಗಳಲ್ಲಿ ಹೆಚ್ಚಿನ ಆಸ್ಪತ್ರೆಗಳ ಅಗತ್ಯವಿದೆ. ಸರ್ಕಾರಿ-ಖಾಸಗಿ ಪಾಲುದಾರಿಕೆಯಲ್ಲಿ ಆಸ್ಪತ್ರೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಸೀತಾರಾಮನ್ ತಿಳಿಸಿದ್ದಾರೆ.
ಮೊದಲ ಹಂತದಲ್ಲಿ, ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಈ ಆಸ್ಪತ್ರೆಗಳನ್ನು ತೆರೆಯಲಾಗುವುದು. ಈ ಜಿಲ್ಲೆಗಳಲ್ಲಿ ಸದ್ಯ, ಆಯುಷ್ಮಾನ್ ಯೋಜನೆಯ ಪಟ್ಟಿಮಾಡಿದ ಆಸ್ಪತ್ರೆಗಳಿಲ್ಲ. ಹೊಸ ಆಸ್ಪತ್ರೆಗಳ ನಿರ್ಮಾಣದಿಂದ ಯುವಕರಿಗೆ ದೊಡ್ಡ ಪ್ರಮಾಣದ ಉದ್ಯೋಗಾವಕಾಶ ದೊರೆಯಲಿದೆ. ವೈದ್ಯಕೀಯ ಸಾಧನಗಳ ಮೇಲಿನ ತೆರಿಗೆಯಿಂದ ಬರುವ ಆದಾಯವನ್ನು ಆರೋಗ್ಯ ಮೂಲಸೌಕರ್ಯಕ್ಕೆ ಬಳಸಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
‘ಟಿಬಿ ಹರೇಗಾ ದೇಶ್ ಜೀತೆಗಾ’ (ಕ್ಷಯರೋಗ ತೊಲಗುತ್ತದೆ, ದೇಶ ಜಯಿಸುತ್ತದೆ) ಎಂಬ ಅಭಿಯಾನವನ್ನು ಪ್ರಾರಂಭಿಸಲಾಗಿದೆ. 2025 ರ ವೇಳೆಗೆ ಕ್ಷಯರೋಗದಿಂದ ದೇಶವನ್ನು ಮುಕ್ತಗೊಳಿಸುವತ್ತ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ಸಚಿವರು ಹೇಳಿದ್ದಾರೆ.
5 ಲಕ್ಷದಿಂದ 7.5 ಲಕ್ಷದ ವರೆಗಿನ ವ್ಯಕ್ತಿಗತ ಆದಾಯಕ್ಕೆ ಶೇ.10 ರಷ್ಟು ತೆರಿಗೆ ವಿಧಿಸಲಾಗುವುದು. 7.5 ಲಕ್ಷ ದಿಂದ 10 ಲಕ್ಷದ ಆದಾಯಕ್ಕೆ ಈ ಹಿಂದಿನ ಶೇ.20 ರಷ್ಟು ಬದಲು ಶೇ.15ರಷ್ಟು ತೆರಿಗೆ ವಿಧಿಸಲು ಪ್ರಸ್ತಾಪಿಸಿದ್ದಾರೆ.
10 ಲಕ್ಷದಿಂದ 12.5 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ಈ ಹಿಂದೆ ವಿಧಿಸುತ್ತಿದ್ದ ಶೇ. 30ರ ಬದಲು ಶೇ.20ರಷ್ಟು, 12.5 ಲಕ್ಷ ದಿಂದ 15ಲಕ್ಷ ಆದಾಯಕ್ಕೆ ಶೇ.25 ರಷ್ಟು, 15 ಲಕ್ಷ ಕ್ಕೂ ಮೀರಿದ ಆದಾಯಕ್ಕೆ ಶೇ.30 ರಷ್ಟು ತೆರಿಗೆ ಮುಂದುವರಿಯಲಿದೆ ಎಂದು ಪ್ರಕಟಿಸಿದ್ದಾರೆ.
ನಲ್ಲಿ ಶಿಕ್ಷಣ ರಂಗದಲ್ಲೂ ವಿದೇಶಿ ಬಂಡವಾಳ ಹೂಡಿಕೆಗೆ ಕ್ರಮಕೈಗೊಳ್ಳಲಾಗಿದೆ. ಈ ಸಂಬಂಧ ಹೊಸ ಶಿಕ್ಷಣ ನೀತಿ ಶೀಘ್ರವೇ ಘೋಷಣೆ ಮಾಡುವುದಾಗಿ ಹಣಕಾಸು ಸಚಿವರು ಪ್ರಕಟಿಸಿದರು. ಭಾಷಣದ ಮಧ್ಯೆ ಹಣಕಾಸು ಸಚಿವರು ಹಲವು ಶಾಯರಿಗಳನ್ನು ಉಲ್ಲೇಖ ಮಾಡಿ, ಗಮನ ಸೆಳೆದರು.