ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆಗೆ ಹೆಚ್ಚು ಆದ್ಯತೆ: ನಳಿನ್ ಕುಮಾರ್ ಕಟೀಲ್

 ಮಂಗಳೂರು, ಆ 21       ಪಕ್ಷದ ವರಿಷ್ಟರು ದೊಡ್ಡ ಜವಾಬ್ದಾರಿ ನನಗೆ ವಹಿಸಿದ್ದಾರೆ. ಪಕ್ಷದ ಎಲ್ಲ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ನಾನು ಈ ಮಟ್ಟಕ್ಕೆ ಬೆಳೆಯಲು ಜಿಲ್ಲೆಯ ಕಾರ್ಯಕರ್ತರು ಹಾಗೂ ಜನತೆ ಕಾರಣ ಅವರೆಲ್ಲರಿಗೂ ಅಬಾರಿಯಾಗಿದ್ದೇನೆ ಎಂದು ನೂತನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಕೇರಳದ ಎರ್ನಕುಲಂ ನಲ್ಲಿ ಬಿಜೆಪಿ ರಾಜ್ಯರಾಜಕಾರಿಣಿ ಸಭೆಯಲ್ಲಿ ಭಾಗವಹಿಸಿ ಇಂದು  ಮುಂಜಾನೆ ಮಂಗಳೂರಿನ ಕಂಕನಾಡಿ ರೈಲ್ವೇ ನಿಲ್ದಾಣಕ್ಕೆ ಆಗಮಿಸಿದ ನಳಿನ್ ಕುಮಾರ್ ಕಟೀಲ್  ಅವರನ್ನು ಸಾವಿರಾರು ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು.  ಈ ವೇಳೆ ಮಾತನಾಡಿದ ಅವರು, ಸಾಮಾನ್ಯ ಕಾರ್ಯಕರ್ತರಿಗೂ ಉನ್ನತ ಮಟ್ಟದ ಹುದ್ದೆಗಳು ನಿರ್ವಹಿಸಲು ಅವಕಾಶ ಸಿಗುತ್ತದೆ ಎನ್ನುವುದಕ್ಕೆ ನಾನೇ ನಿದರ್ಶನ. ರಾಜ್ಯದಲ್ಲಿ ಈಗ ಬಿಜೆಪಿ ಸರ್ಕಾರವಿದೆ. ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಪಕ್ಷ ಸಧೃಡವಾಗಿದೆ. ಅವರ ಮಾರ್ಗದರ್ಶನ, ಸಹಕಾರ ಪಡೆದು ರಾಜ್ಯ ಪ್ರವಾಸ ಕೈಗೊಂಡು ಪಕ್ಷವನ್ನು ಮತ್ತಷ್ಟು ಸಧೃಡಗೊಳಿಸುವ ಸಂಕಲ್ಪ ಮಾಡಲಿದ್ದೇನೆ ಎಂದು ತಿಳಿಸಿದರು.  ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಭರವಸೆ ಯಿಟ್ಟು ಈ ಸ್ಥಾನ ನೀಡಿದ್ದಾರೆ. ಆ ನಿರೀಕ್ಷೆಗೆ ಚ್ಯುತಿ ಬಾರದಂತೆ ಕೆಲಸ ನಿರ್ವಹಿಸುತ್ತೇನೆ. ರಾಜ್ಯದ ಹಿರಿಯ ನಾಯಕರ ಸಲಹೆ ಮೇರೆಗೆ ಪಕ್ಷ ಸಂಘಟನೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಇದೇ ವೇಳೆ ಹಾರ, ತುರಾಯಿ, ಶಾಲು ಹಾಕುವ ಬದಲು ಆ ಹಣವನ್ನು ಸಂಗ್ರಹಿಸಿ ರಾಜ್ಯದ ನೆರೆ ಸಂತ್ರಸ್ತರಿಗೆ ನೀಡುವಂತೆ ಕಾರ್ಯಕರ್ತರಿಗೆ ನಳಿನ್ ಕುಮಾರ್ ಕಟೀಲ್ ಮನವಿ ಮಾಡಿದರು.