ನೈಟ್‌ವಾಚ್‌ಮನ್‌ ಗಿಲೆಸ್ಪಿ ದ್ವಿಶತಕದ ಸ್ಮರಣೆ

ನವದೆಹಲಿ, ಏ 19,ಟೆಸ್ಟ್‌ ಕ್ರಿಕೆಟ್‌ನಲ್ಲಿ ಒಂದು ಸಂಪ್ರದಾಯವಿದೆ. ಐದು ದಿನಗಳ ಕಾಲ ನಡೆಯುವ ಕ್ರಿಕೆಟ್‌ ಪಂದ್ಯದಲ್ಲಿ ಯಾವುದಾದರು ಒಂದು ದಿನ ತಂಡವೊಂದು ದಿನದ ಕೊನೆಯ ಅವಧಿಯಲ್ಲಿ ಬ್ಯಾಟ್‌ ಮಾಡುತ್ತಿರುವಾಗ ಒಂದೆರಡು ವಿಕೆಟ್‌ ಕಳೆದುಕೊಂಡರೆ, ಪ್ರಮುಖ ಬ್ಯಾಟ್ಸ್‌ಮನ್‌ಗಳನ್ನು ಔಟಾಗದಂತೆ ರಕ್ಷಿಸಿಕೊಳ್ಳುವ ಉದ್ದೇಶದಿಂದ ಬೌಲರ್‌ಗಳನ್ನು ದಿನದ ಅಂತ್ಯದವರೆಗೆ ಹೇಗಾದರೂ ಬ್ಯಾಟ್‌ಮಾಡಿ ತಂಡಕ್ಕೆ ನೆರವಾಗುವ ಜವಾಬ್ದಾರಿ ಹೊರಿಸಿ ಕಣಕ್ಕಿಳಿಸಲಾಗುತ್ತದೆ.ಈ ರೀತಿ ದಿನದ ಕೊನೆಯ ಅವಧಿಯಲ್ಲಿ ಬ್ಯಾಟಿಂಗ್‌ಗೆ ಇಳಿಯುವ ಟೇಲ್‌ ಎಂಡ್‌ ಬ್ಯಾಟ್ಸ್‌ಮನ್‌ಗೆ ಕ್ರಿಕೆಟ್‌ ಜಗತ್ತಿನಲ್ಲಿ 'ನೈಟ್‌ವಾಚ್‌ಮನ್‌' ಎಂದು ಕರೆಯಲಾಗುತ್ತದೆ. ಈ ರೀತಿ ಕ್ರೀಸ್‌ಗೆ ಇಳಿಯುವ ನೈಟ್‌ವಾಚ್‌ಮನ್‌ ಹಲವು ಬಾರಿ ಬಂದ ದಾರಿಗೆ ಸುಂಕವಿಲ್ಲದಂತೆ ಹಿಂದಿರುಗಿದ್ದೇ ಹೆಚ್ಚು. ಆದರೆ ಕೆಲವೊಮ್ಮೆ ಬ್ಯಾಟ್ಸ್‌ಮನ್‌ಗಳನ್ನು ಮೀರಿಸುವಂತಹ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ಮೂಡಿಬಂದ ಉದಾಹರಣೆಗಳೂ ಇವೆ.
ಇಂತಹ ಪ್ರದರ್ಶನಕ್ಕೆ 2006ರ ಈ ದಿನ ಚಿತ್ತಗಾಂಗ್ ನಲ್ಲಿ ನಡೆದ ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಸಾಕ್ಷಿಯಾಗಿದೆ.  ಅಂದು, ಆ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ತಂಡದ ಪರ ನೈಟ್‌ವಾಚ್‌ಮನ್‌ ಜವಾಬ್ದಾರಿ ಹೊತ್ತು ಬ್ಯಾಟಿಂಗ್‌ಗೆ ಇಳಿದಿದ್ದ ವೇಗದ ಬೌಲರ್‌ ಜೇಸನ್‌ ಗಿಲೆಸ್ಪಿ, ಬಾಂಗ್ಲಾ ತಂಡದ ಬೌಲಿಂಗ್‌ ದಾಳಿಯನ್ನು ಧೂಳೀಪಟ ಮಾಡಿ ದ್ವಿಶತಕ ಬಾರಿಸುವ ಮೂಲಕ ಕ್ರಿಕೆಟ್‌ ಜಗತ್ತನ್ನು ನಿಬ್ಬೆರಗಾಗಿಸಿದ್ದರು.ಪಂದ್ಯದ ಮೊದಲ ದಿನದಾಟದಲ್ಲಿ ಮ್ಯಾಥ್ಯೂ ಹೇಡನ್‌ ನಿರ್ಗಮನದ ಬಳಿಕ ಕ್ರೀಸ್‌ಗೆ ಬಂದಿದ್ದ ಗಿಲೆಸ್ಪಿ, ಮೊದಲಿಗೆ ಫಿಲ್‌ ಜಾಕಸ್‌ ಜೊತೆಗೆ 53 ರನ್‌ ಮತ್ತು ನಾಯಕ ರಿಕಿ ಪಾಂಟಿಂಗ್‌ ಜೊತೆಗೆ 90 ರನ್‌ ಹಾಗು ಮಿಸ್ಟರ್‌ ಕ್ರಿಕೆಟ್‌ ಮೈಕ್‌ ಹಸ್ಸಿ ಅವರೊಟ್ಟಿಗೆ 320 ರನ್‌ಗಳ ಅಮೋಘ ಜೊತೆಯಾಟವಾಡಿದ್ದರು. ಅಂತಿಮವಾಗಿ ಮೈಕಲ್‌ ಕ್ಲಾರ್ಕ್‌ ಜೊತೆಗೂ 51 ರನ್‌ ಜೊತೆಯಾಟವಾಡಿ 425  ಎಸೆತಗಳಲ್ಲಿ ವೈಯಕ್ತಿಕ 200* ರನ್‌ಗಳ ಗಡಿ ಮುಟ್ಟಿದರು.