ನವದೆಹಲಿ, ಅ 9: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅ 14 ರಂದು ಉತ್ತರಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಉತ್ತರಪ್ರದೇಶದಲ್ಲಿ ಹೇಗಾದರೂ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕು ಎಂಬ ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಹೊಸ ತಂಡ ರಚನೆ ಮಾಡಿ ಅಜಯ್ ಕುಮಾರ್ ಲಲ್ಲು ಅವರಿಗೆ ಹೊಸ ಸಾರಥ್ಯ ವಹಿಸಿಕೊಟ್ಟಿದ್ದಾರೆ. ಈ ನಡುವೆ ಹೊಸ ತಂಡ ಯಾವ ರೀತಿ ಕೆಲಸ ಮಾಡಬೇಕು, ಯಾವ ರೀತಿ ತಂತ್ರಗಾರಿಕೆ ಬಳಸಬೇಕು ಎಂಬುದರ ಬಗ್ಗೆ ಸಮಾಲೋಚನೆ ಮಾಡಲು ಪ್ರಿಯಾಂಕಾ ವಾದ್ರಾ ಇದೇ 14 ರಂದು ಉತ್ತರಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಜನಪರ ವಿಷಯಗಳನ್ನು ಕೈಗೆತ್ತಿಕೊಂಡು ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿರುವ ಹಾಗೂ ಇದರ ಮೂಲಕವೇ ಜನಪ್ರಿಯತೆ ಹೆಚ್ಚಿಸಿಕೊಂಡಿರುವ ಪ್ರಿಯಾಂಕಾ ಗಾಂಧಿ ಅವರು ಹೊಸ ತಂಡದ ಸದಸ್ಯರೊಂದಿಗೆ ಪಕ್ಷದ ನೆಲೆ ವಿಸ್ತರಣೆ ಮಾಡುವ ಮಾರ್ಗೊಪಾಯಗಳ ಕುರಿತು ಚರ್ಚಿಸಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ. ಜಾತಿ ಆಧಾರದ ಮೇಲೆ ಮತ ಕಬಳಿಕೆ ಮಾಡುವ ಕಡೆ ಗಮನ ಹರಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.