ಹೇಮಾವತಿ ನದಿಯಲ್ಲಿ ‌ಮುಳುಗಿ ನವದಂಪತಿ ಸಾವು

ಹಾಸನ, ಮೇ 8,  ಸುತ್ತಾಡಿಕೊಂಡು ಬರುತ್ತೇವೆ ಎಂದು ಹೇಳಿ‌ ಹೋಗಿದ್ದ ನವದಂಪತಿ  ಹೇಮಾವತಿ ನದಿಯಲ್ಲಿ ಶವವಾಗಿ ಪತ್ತೆಯಾಗಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆನ್ನಲಿ ಗ್ರಾಮದಲ್ಲಿ ನಡೆದಿದೆ.ಬೇಲೂರು ತಾಲೂಕಿನ ಮುರಹಳ್ಳಿ ಗ್ರಾಮದ 27 ವರ್ಷದ ಅರ್ಥೇಶ್ ಹಾಗೂ ಹೆನ್ನಾಲಿ ಗ್ರಾಮದ 23 ವರ್ಷದ ಕೃತಿಕಾ ಮೃತ ದಂಪತಿ. ಇವರು ಕಳೆದ 2 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು ಎಂದು ತಿಳಿದು ಬಂದಿದೆ‌.
ಕೊರೊನಾ ನಿಯಂತ್ರಿಸಲು ಲಾಕ್​ಡೌನ್​ ಜಾರಿಯಾದ ಹಿನ್ನೆಲೆಯಲ್ಲಿ  ಬೆಂಗಳೂರಿನಿಂದ ಇಬ್ಬರೂ ಅವರವರ ಊರಿಗೆ ತೆರಳಿದ್ದರು. ನಂತರ ಅರ್ಥೇಶ್, ತನ್ನ ಹೆಂಡತಿಯನ್ನು ಭೇಟಿಯಾಗಲು ಹೆನ್ನಾಲಿಗೆ ತೆರಳಿದ್ದನು. ಇಬ್ಬರೂ ಗುರುವಾರ ಸಂಜೆ ಹೊರಗೆ ಸುತ್ತಾಡಿಕೊಂಡು ಬರುವುದಾಗಿ ಹೇಳಿ ಬೈಕ್​ನಲ್ಲಿ  ತೆರಳಿದ್ದರು. ಆದರೆ, ರಾತ್ರಿಯಾದರೂ ಮಗಳು-ಅಳಿಯ ಮನೆಗೆ  ವಾಪಾಸ್ಸಾಗದ ಹಿನ್ನೆಲೆಯಲ್ಲ ಕೃತಿಕಾಳ ಮನೆಯವರು ನದಿಯ ಬಳಿ ಹೋಗಿ ನೋಡಿದಾಗ ಬೈಕ್ ನಿಂತಿರುವುದು ಕಂಡಿತ್ತು. ನಂತರ ಮೀನುಗಾರರಿಗೆ ಇಬ್ಬರ ಶವ ಪತ್ತೆಯಾಗಿದೆ. ಇಬ್ಬರೂ ನದಿಯ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದಾಗ ಕಾಲು ಜಾರಿ ಬಿದ್ದು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ‌ ಕೈಗೊಂಡಿದ್ದಾರೆ.  ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.