ನವದೆಹಲಿ: ಬಿಜೆಪಿ ಸೇರಿದ ಜಯಪ್ರದಾ

  ನವದೆಹಲಿ, ಮಾ 26 : ಸಮಾಜವಾದಿ ಪಕ್ಷದ ನಾಯಕ ಅಮರ್ ಸಿಂಗ್ ಆಪ್ತೆ ಹಾಗೂ ನಟಿ ಜಯಪ್ರದಾ ಮಂಗಳವಾರ ಬಿಜೆಪಿ ಸೇರ್ಪಡೆಗೊಂಡರು. 

  ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಭುಪೇಂದರ್ ಯಾದವ್ ಜಯಪ್ರದಾ ಅವರನ್ನು ಸ್ವಾಗತಿಸಿದರು.

  ನಂತರ ಮಾತನಾಡಿದ ಜಯಪ್ರದಾ, ಇದು ನನ್ನ ಜೀವನದ ಪ್ರಮುಖ ಘಟನೆ ಎಂದರು. 

  ಸಿನೆಮಾ ಅಥವಾ ರಾಜಕಾರಣ ಕ್ಷೇತ್ರಗಳಲ್ಲಿ ಎಲ್ಲ ಆಯ್ಕೆಗಳನ್ನು ಮನಃಪೂರ್ವಕವಾಗಿ ಮಾಡಿದ್ದು, ಅದಕ್ಕಾಗಿ ನನ್ನ ಜೀವನವನ್ನೇ ಸವೆಸಿದ್ದೇನೆ. ಇದೆ ಮೊದಲ ಬಾರಿಗೆ ದೇಶದ ರಾಷ್ಟ್ರೀಯ ಪಕ್ಷವೊಂದರ ಸದಸ್ಯೆಯಾಗಿದ್ದೇನೆ ಎಂದರು. 

  ಪ್ರಧಾನಿ ಮೋದಿ ಅವರು ಸಮಾಜದ ಅಭಿವೃದ್ಧಿಗೆ ಕೈಗೊಂಡ ಕಾರ್ಯಗಳಿಂದ ಪ್ರಭಾವಿತರಾಗಿ ಜಯಪ್ರದಾ ಬಿಜೆಪಿ  ಸೇರಿದ್ದಾರೆ ಎಂದು ಭುಪೇಂದರ್ ಯಾದವ್ ಹೇಳಿದರು. 

  ಜಯಪ್ರದಾ ಅವರು ಈ ಹಿಂದೆ ಗೆಲುವು ಸಾಧಿಸಿದ ರಾಮಪುರ ಕ್ಷೇತ್ರದಿಂದಲೇ ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸುವ ಸಾಧ್ಯತೆಯಿದೆ. ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿಶ್ಚಯಿಸಿದಲ್ಲಿ, ಸಮಾಜವಾದಿ ಪಕ್ಷದ ಅಜಮ್ ಖಾನ್‍ ಎದುರು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ. 

  ತೆಲುಗು ದೇಶಂ ಪಕ್ಷದೊಂದಿಗೆ  (ಟಿಡಿಪಿ) ತಮ್ಮ ರಾಜಕೀಯ ಪಯಣ ಆರಂಭಿಸಿದ್ದ ಜಯಪ್ರದಾ, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೊಂದಿಗಿನ ಕಲಹದ ಹಿನ್ನೆಲೆಯಲ್ಲಿ ಪಕ್ಷ ತೊರೆದಿದ್ದರು. ನಂತರ, ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡು, 2004 ಹಾಗೂ 2009ರಲ್ಲಿ ರಾಮಪುರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. 2010ರಲ್ಲಿ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. 

  ನಂತರ ಜಯಪ್ರದಾ ಅಮರ್ ಸಿಂಗ್ ಜೊತೆಗೂಡಿ ರಾಷ್ಟ್ರೀಯ ಲೋಕ ಮಂಚ್ ಪಕ್ಷ ಸ್ಥಾಪಿಸಿದ್ದರು. ಆದರೆ, ಇದು ಉತ್ತರಪ್ರದೇಶದಲ್ಲಿ ಜನರನ್ನು ಸೆಳೆಯುವಲ್ಲಿ ವಿಫಲವಾಯಿತು. ನಂತರ, ಬಿಜ್ನೂರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಜಯಪ್ರದಾ ಸೋಲು ಅನುಭವಿಸಿದ್ದರು.