ಪಕ್ಷಕ್ಕೆ ಹೊಸ ಚೈತನ್ಯ, ಮೇಜರ್ ಸರ್ಜರಿಗೆ ಸೋನಿಯಾ ಸಜ್ಜು

ನವದೆಹಲಿ 4:   ಕಾಂಗ್ರೆಸ್ ಪಕ್ಷಕ್ಕೆ ಹೊಸ ಚೈತನ್ಯ ನೀಡಲು ಮೇಜರ್ ಸರ್ಜರಿಗೆ  ಪಕ್ಷದ ಮುಖ್ಯಸ್ಥೆ  ಸೋನಿಯಾ ಗಾಂಧಿ ಮುಂದಾಗಿದ್ದು, ಅದರಂತೆ ಅನೇಕ ರಾಜ್ಯಗಳಿಗೆ ಹೊಸ ಅಧ್ಯಕ್ಷರ ನೇಮಕವಾಗಲಿದೆ.   

  ಶತಮಾನದಷ್ಟು ಹಳೆಯದಾದ ಪಕ್ಷಕ್ಕೆ ಸಾಂಸ್ಥಿಕ, ಹೊಸ ರೂಪ ಕೊಡಲು ದೆಹಲಿ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡಲು ಸೋನಿಯಾ ಸಜ್ಜಾಗಿದ್ದಾರೆ ಎನ್ನಲಾಗಿದೆ.  

  ಶೀಲಾ ದೀಕ್ಷಿತ್ ಅವರ ನಿಧನದ ನಂತರ ದೆಹಲಿಯಲ್ಲಿ ಅಧ್ಯಕ್ಷರ ಹುದ್ದೆ ಖಾಲಿ ಇದ್ದು, ಕಮಲ್ ನಾಥ್ ಅವರು ಮಧ್ಯಪ್ರದೇಶದಲ್ಲೂ ಮುಖ್ಯಮಂತ್ರಿಯಾದ ನಂತರವೂ ಅಧ್ಯಕ್ಷರ ಹುದ್ದೆಯಲ್ಲಿ  ಮುಂದುವರಿದಿದ್ದಾರೆ.  

  ಅದೇ ರೀತಿ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಾಜ್ ಬಬ್ಬರ್ ಅವರು ಈ ಹುದ್ದೆಯಿಂದ ಕೆಳಗಿಳಿಯುವುದಾಗಿ ಹೇಳಿದ್ದಾರೆ. ಅವರ ಬದಲಿಗೆ ಹೊಸ ಅಧ್ಯಕ್ಷರನ್ನು ಶೀಘ್ರದಲ್ಲೇ ಘೋಷಿಸುವ ಸಾಧ್ಯತೆಯಿದೆ ಎನ್ನಲಾಗಿದೆ.  

  ರಾಜೀನಾಮೆ ಹಿಂಪಡೆಯಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಮಾಡಿದ ಮನವಿಯನ್ನು  ರಾಹುಲ್ ಗಾಂಧಿ ತಿರಸ್ಕರಿಸಿದ ನಂತರ ಆಗಸ್ಟ್ 10 ರಂದು ಪಕ್ಷದ ಹಂಗಾಮಿ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಅಧಿಕಾರ ವಹಿಸಿಕೊಂಡಿದ್ದಾರೆ.  ರಾಜಸ್ಥಾನದಲ್ಲಿ ಸಚಿನ್ ಪೈಲಟ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಎರಡು ಹುದ್ದೆ ಹುದ್ದೆ ಅಲಂಕರಿಸಿದ್ದಾರೆ. ಅನೇಕ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯಗಳ ಉಸ್ತುವಾರಿಗಳೂ ಸಹ ಬದಲಾಗುವ ಸಾಧ್ಯತೆಯಿದೆ ಎಂದೂ ಹೇಳಲಾಗಿದೆ.