ಸೂಡಿಯ ನಗರೇಶ್ವರ ದೇವಾಲಯದ ಬಲಕಂಬದಲ್ಲಿ ಹೊಸ ಶಾಸನ ಪತ್ತೆ

New inscription discovered on the right pillar of the Nagareshwara temple in Sudia

ಲೋಕದರ್ಶನ ವರದಿ 

ಸೂಡಿಯ ನಗರೇಶ್ವರ ದೇವಾಲಯದ ಬಲಕಂಬದಲ್ಲಿ ಹೊಸ ಶಾಸನ ಪತ್ತೆ 

ಗದಗ 19: ರೋಣ ತಾಲೂಕಿನ ಇತಿಹಾಸ ಪ್ರಸಿದ್ಧ ಸೂಡಿಯಲ್ಲಿ ಇದುವರೆಗೆ 16 ಶಾಸನಗಳನ್ನು ಗುರುತಿಸಲಾಗಿತ್ತು. ಆದರೆ ಸೂಡಿಯಲ್ಲಿ ಅತಿ ವಿಸ್ತಾರವೂ ಸುಂದರವೂ ಆದ ನಗರೇಶ್ವರ ದೇವಾಲಯವನ್ನು ನಿರ್ಮಿಸಿದ ರೂವಾರಿಗಳ ಬಗೆಗೆ ಇದುವರೆಗೆ ದಾಖಲೆಗಳು ದೊರೆತಿರಲಿಲ್ಲ. ಈಗ ಅದೇ ದೇವಾಲಯದ ಕಂಬವೊಂದರ ಕೆಳಭಾಗದ ಪಟ್ಟಿಕೆಯಲ್ಲಿ ದೊರೆತ ಸು.11ನೆಯ ಶತಮಾನದ ಅಕ್ಷರಗಳಲ್ಲಿ 5 ಸಾಲುಗಳಲ್ಲಿರುವ ಶಾಸನವು, ಮಹಾಪ್ರಧಾನನೂ ವಡ್ಡರಾವುಳದ ದಣ್ಡನಾಯಕನೂ ಆದ ‘ಗೋವಿಂದರಸರ ತೊತ್ತು, ಕೇತೋಝರ ಪುತ್ರನೂ ಆದ, ಸರಸ್ವತಿ ಪಾದಪಂಕಜ ಭ್ರಮರ, ಸರಸ್ವತಿ ಗಣಮಿತ್ರ, ಬಿರುದ ರೂವಾರಿ ಮಾಯಚಿತ್ತಾರ, ಅರಿ ಬಿರುದ ರೂವಾರಿ, ವೇಸ್ಯಾಭುಜಂಗ, ದುಷ್ಟ ರೂವಾರಿ ಘರಟ್ಟ, ಶಿಷ್ಟ ಜನ ಹೃದಯ ಸಂತೋಷ, ಚಿತ್ರಶಾಸ್ತ್ರ ವಿದ್ಯಾ ಪ್ರವೀಣ, ಸರಸ್ವತಿ ಲಬ್ಧ ವರ​‍್ರಸಾದ ಎಂಬ ವಿಶೇಷಣಗಳನ್ನುಳ್ಳ ಚಾವೋಜರ ವಿದ್ಯಾರ್ಥಿ’ ಎನಿಸಿದ ಚಟ್ಟೋಜನು ಎಂಬ ವಾಕ್ಯವಿದೆ. (ಈತ ನಿರ್ಮಿಸಿದ್ದು ದೇವಾಲಯವೇ? ಇಲ್ಲವೇ ಶಾಸನವಿರುವ ಕಂಬವೇ?). ಆದರೆ ಸ್ಪಷ್ಟ ಒಕ್ಕಣೆಯಿಲ್ಲದಿದ್ದರೂ ಈ ಶಾಸನೋಕ್ತ ಚಟ್ಟೋಜನೇ ದೇವಾಲಯವನ್ನು ನಿರ್ಮಿಸಿದನೆಂದು ಸಂಭಾವ್ಯ ಊಹೆ ಮಾಡಬಹುದು. 

 ‘ನಗರೇಶ್ವರದ ಪ್ರತಿಬದ್ಧ ನಾಗೇಶ್ವರ’ ಎಂದು ಕ್ರಿ.ಶ.1060ರ ಸೂಡಿಯ ಶಾಸನ, ‘ನಗರೇಶ್ವರದ ಪ್ರತಿಬದ್ಧ ಪಂಚ ಲಿಂಗೇಶ್ವರ’ ಎಂದು ಕ್ರಿ.ಶ.1075ರ ಸೂಡಿ ಶಾಸನಗಳಲ್ಲಿ ಈ ದೇವಾಲಯದ ಉಲ್ಲೇಖವಿದೆ. ಕ್ರಿ.ಶ.1113ರ ಸೂಡಿಯ ಶಾಸನದಲ್ಲಿಯೂ ನಗರೇಶ್ವರ ದೇವಾಲಯದ ಪ್ರಸ್ತಾಪವಿದೆ. ಮುಂದುವರಿದು ಈ ದೇವಸ್ಥಾನಕ್ಕೆ ಹೊಂದಿಕೊಂಡು ಮಠವಿತ್ತು. ಅಲ್ಲಿ ನೈಷ್ಠಿಕರಾದ ತಪೋಧನರಿರುತ್ತಿದ್ದರು. ಈ ನಗರೇಶ್ವರದ ಆಚಾರ್ಯ ಕಲ್ಯಾಣಶಕ್ತಿ ಪಂಡಿತ ದೇವನಾಗಿದ್ದನು. ಮಹಾಸಾಮಂತನಾದ ಬಪ್ಪುರ ವಂಶದ ಮುಮ್ಮಡಿ ದಡಿಗನು, 1000 ಮತ್ತರು ಭೂಮಿಯನ್ನು ಈ ಮಠದಲ್ಲಿಯ ತಪೋಧನರ ಅಶನಾಚ್ಛಾದನಕ್ಕಾಗಿ, ಎಲ್ಲ ಕರ(ಸುಂಕ)ಗಳಿಂದ ಮುಕ್ತಗೊಳಿಸಿ, ದಾನವನ್ನು ಬಿಟ್ಟನೆಂಬ ವಿವರಗಳಿವೆ. ಇದರಿಂದ ಕ್ರಿ.ಶ.1060ಕ್ಕಿಂತ ಮುಂಚೆಯೇ ಈ ದೇವಾಲಯವಿತ್ತು ಎನ್ನುವುದು ಸ್ಪಷ್ಟವಾಗುತ್ತದೆ. ಸೂಡಿಯಲ್ಲಿಯ ದೇವಾಲಯಗಳು ಇದಕ್ಕೆ ಪ್ರತಿಬದ್ಧವಾಗಿರುವುದನ್ನು ಗಮನಿಸಿದರೆ ಇಲ್ಲಿಯ ಸ್ಥಾನಾಚಾರ್ಯರ ಅಧಿಕಾರಕ್ಕೆ ಒಳಪಟ್ಟಿದ್ದವೆಂಬುದು ಗಮನಾರ್ಹ. ಈಗ ಉಳಿದಿರುವ ಸುಂದರವಾದ ಕಂಬಗಳು ಮತ್ತು ಅಳಿದುಳಿದ ಅಧಿಷ್ಠಾನದ ವಿಸ್ತಾರಗಳನ್ನು ಗಮನಿಸಿದರೆ ತುಂಬ ದೊಡ್ಡ ದೇವಾಲಯವಾಗಿತ್ತೆಂದು ಊಹಿಸಬಹುದು. ಆದರೆ ಇದುವರೆಗೆ ಅದರ ನಿರ್ಮಾಣ ಕುರಿತಾದ ಸ್ಪಷ್ಟ ಮತ್ತು ಖಚಿತ ಲಿಖಿತ ದಾಖಲೆಗಳು ಸಿಕ್ಕಿಲ್ಲ.  

ಬಹುಶಃ ರಣಭೈರವಿ, ಉಚ್ಚಂಡ ಭೈರವಿ, ಚಾಳುಕ್ಯ ಕುಳೇಶ್ವರಿ, ಗುಣದ ಬೆಡಂಗಿ ಎನಿಸಿದ ಚಾಳುಕ್ಯ ರಾಜಕುಮಾರಿ ಅಕ್ಕಾದೇವಿಯ ಅಧೀನಾಧಿಕಾರಿಯಾಗಿರಬಹುದಾದ, ಶ್ರೀಮನ್ಮಹಾಪ್ರಧಾನ ವಡ್ಡರಾವುಳದ ದಣ್ಡನಾಯಕ ಗೋವಿಂದರಸರ ಕಾಲದಲ್ಲಿ ಈ ನಗರೇಶ್ವರ ದೇವಾಲಯ ನಿರ್ಮಾಣವಾಯಿತೆಂದು ಈ ಶಾಸನದಿಂದ ಮತ್ತು ವಾಸ್ತುಶಿಲ್ಪದ ಆಧಾರದಿಂದ ತೀರ್ಮಾನಿಸಬಹುದು.