ಶ್ರೀಲಂಕಾಕ್ಕೆ 268 ರನ್ ಗುರಿ ನೀಡಿದ ನ್ಯೂಜಿಲೆಂಡ್

ಗಾಲೆ, ಆ 17           ಬಿಜೆ ವ್ಯಾಟ್ಲಿಂಗ್ (77 ರನ್, 173 ಎಸೆತಗಳು) ಅವರ ಅರ್ಧ ಶತಕ ಹಾಗೂ ವಿಲಿಯಮ್ ಸೋಮರ್ವಿಲ್ಲೆ (40* ರನ್, 116 ಎಸೆತಗಳು) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ನ್ಯೂಜಿಲೆಂಡ್ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾಕ್ಕೆ ಸ್ಪರ್ಧಾತ್ಮಕ ಗುರಿ ನೀಡುವಲ್ಲಿ ಯಶಸ್ವಿಯಾಗಿದೆ.  

ಇಲ್ಲಿನ ಗಾಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಏಳು ವಿಕೆಟ್ ಕಳೆದುಕೊಂಡು 195 ರನ್ಗಳಿಂದ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಪ್ರವಾಸಿ ನ್ಯೂಜಿಲೆಂಡ್ 106 ಓವರ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡು 285 ರನ್ ಗಳಿಸಿತು. ಆತಿಥೇಯ ಲಂಕೆಗೆ 268 ರನ್ ಗುರಿ ನೀಡಿತು. 

ಶನಿವಾರ ಬೆಳಗ್ಗೆ ಕ್ರೀಸ್ಗೆ ಆಗಮಿಸಿದ ಬಿ.ಜೆ ವ್ಯಾಟ್ಲಿಂಗ್ ಹಾಗೂ ಸೋಮರ್ವಿಲ್ಲೆ ಜೋಡಿಯು ಹೆಚ್ಚು ಹೊತ್ತು ಕ್ರೀಸ್ನಲ್ಲಿ ಉಳಿಯಲಿಲ್ಲ. ಶುಕ್ರವಾರ ಅರ್ಧ ಶತಕ ಸಿಡಿಸಿದ್ದ ಬಿ.ಜೆ ವ್ಯಾಟ್ಲಿಂಗ್ ಶನಿವಾರ ಕೇವಲ 14 ರನ್ಗಳಿಗೆ ಸೀಮಿತರಾದರು. 77 ರನ್ ಗಳಿಸಿ ಮುನ್ನುಗ್ಗುತ್ತಿದ್ದ ಅವರನ್ನು ಲಹಿರು ಕುಮಾರ ಕಟ್ಟಿ ಹಾಕಿದರು.  

ನಂತರ ಕ್ರೀಸ್ಗೆ ಬಂದ ಟ್ರೆಂಟ್ ಬೌಲ್ಟ್ ನಿರಾಸೆ ಮಾಡಲಿಲ್ಲ. 25 ಎಸೆತಗಳಲ್ಲಿ 26 ರನ್ ಗಳಿಸಿ ತಂಡಕ್ಕೆ ಅಲ್ಪ ಕಾಣಿಕೆ ನೀಡಿದರು. ಅಜಾಝ್ ಪಟೇಲ್ ಅವರು  14 ರನ್ ಗಳಿಸಿ ಧನಂಜಯ್ ಡಿ ಸಿಲ್ವಾಗೆ ಔಟ್ ಆದರು.  

ಶನಿವಾರ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ ವಿಲಿಯಮ್ ಸೋಮರ್ವಿಲ್ಲೆ ಲಂಕಾ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದರು. 118 ಎಸೆತಗಳಲ್ಲಿ ಎರಡು ಬೌಂಡರಿಯೊಂದಿಗೆ ಅಜೇಯ 40 ರನ್ ಗಳಿಸಿದರು. ಇವರಿಗೆ ಮತ್ತೊಂದು ತುದಿಯಲ್ಲಿ ಯಾರೂ ಹೆಚ್ಚು ಹೊತ್ತು ಸಾಥ್ ನೀಡಲಿಲ್ಲ. ಅಂತಿಮವಾಗಿ ನ್ಯೂಜಿಲೆಂಡ್ ದ್ವಿತೀಯ ಇನಿಂಗ್ಸ್ನಲ್ಲಿ 285 ರನ್ ಗಳಿಗೆ ಅಭಿಯಾನ ಮುಗಿಸಿತು. 

ಶ್ರೀಲಂಕಾ ಪರ ಉತ್ತಮ ಬೌಲಿಂಗ್ ಮಾಡಿದ ಲಸಿತ್ ಎಂಬುಲ್ಡೇನಿಯಾ ಅವರು ನಾಲ್ಕು ವಿಕೆಟ್ ಪಡೆದರೆ, ಧನಂಜಯ್ ಡಿ ಸಿಲ್ವಾ ಮೂರು ಮತ್ತು ಲಹಿರು ಕುಮಾರ ಎರಡು ವಿಕೆಟ್ ಕಬಳಿಸಿದರು. 

ಸಂಕ್ಷಿಪ್ತ ಸ್ಕೋರ್ 

ನ್ಯೂಜಿಲೆಂಡ್ 

ಪ್ರಥಮ ಇನಿಂಗ್ಸ್: 249 

ದ್ವಿತೀಯ ಇನಿಂಗ್ಸ್: 285 (106) 

ಬಿ.ಜೆ ವ್ಯಾಟ್ಲಿಂಗ್-77 

ವಿಲಿಯಮ್ ಸೋಮರ್ವಿಲ್ಲೆ-40* 

ಟ್ರೆಂಟ್ ಬೌಲ್ಟ್-26 

ಬೌಲಿಂಗ್: ಲಸಿತ್ ಎಂಬುಲ್ಡೇನಿಯಾ 99 ಕ್ಕೆ 4, ಧನಂಜಯ್ ಡಿ ಸಿಲ್ವಾ 25 ಕ್ಕೆ 3, ಲಹಿರು ಕುಮಾರ 31 ಕ್ಕೆ 2 

ಶ್ರೀಲಂಕಾ 

ಪ್ರಥಮ ಇನಿಂಗ್ಸ್: 267