ನವದೆಹಲಿ: ಟ್ರಂಪ್ ಮೋದಿ ಮಾತುಕತೆ; ಪರಸ್ಪರ ಹಿತಾಸಕ್ತಿಯ ಕ್ಷೇತ್ರಗಳಲ್ಲಿ ಸಹಕಾರ ವೃದ್ಧಿ ಭರವಸೆ

ನವದೆಹಲಿ 07: ವಿಶ್ವಾಸ, ಪರಸ್ಪರ ಗೌರವ ಮತ್ತು ಅರ್ಥೈಸುವಿಕೆಯ ಮೇಲೆ ಭಾರತ – ಅಮೆರಿಕ ಸಂಬಂಧಗಳು ನಿಂತು ಬೆಳೆಯುತ್ತಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ದೂರವಾಣಿ ಮೂಲಕ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದ ಮೋದಿ, ಪರಸ್ಪರ ಹಿತಾಸಕ್ತಿಯ ಎಲ್ಲಾ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳುವು ಪ್ರಕ್ರಿಯೆಯನ್ನು ಮುಂದುವರೆಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷದಲ್ಲಿ ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಸಹಭಾಗಿತ್ವದಲ್ಲಿನ ಮಹತ್ತರ ಪ್ರಗತಿಯನ್ನು ಪ್ರಧಾನಿ ವಿವರಿಸಿದ್ದಾರೆ. ಹೊಸ ವರ್ಷದಲ್ಲಿ ಜನರಿಗೆ ಉತ್ತಮ ಆರೋಗ್ಯ, ಸಮೃದ್ಧಿ ಮತ್ತು ಯಶಸ್ಸು ಸಿಗಲಿ ಎಂದು ಮೋದಿ ಹಾರೈಸಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಭಾರತ – ಅಮೆರಿಕ ನಡುವಿನ ಸಂಬಂಧ, ಸಾಧನೆಗಳ ಬಗ್ಗೆ ಟ್ರಂಪ್ ತೃಪ್ತಿ ವ್ಯಕ್ತಪಡಿಸಿದ್ದಾರೆ. ಜೊತೆಗೆ ದ್ವಿಪಕ್ಷೀಯ ಸಹಕಾರವನ್ನು ಇನ್ನಷ್ಟು ಗಾಢವಾಗಿಸಲು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಅವರೂ ಸಹ ಹೊಸ ವರ್ಷದ ಶುಭ ಕಾಮನೆಗಳನ್ನು ತಿಳಿಸಿದರು.