ಲಂಡನ್, ಸೆ 17 ಚೊಚ್ಚಲ ಟೆಸ್ಟ್ ಸರಣಿಯಲ್ಲೇ 22 ವಿಕೆಟ್ ಕಬಳಿಸಿರುವ ಜೊಫ್ರಾ ಆರ್ಚರ್ ಅವರು ಮುಂಬರುವ 2021-22ರ ಸಾಲಿನಲ್ಲಿ ಆ್ಯಷಸ್ ಟ್ರೋಫಿ ಮರಳಿ ಪಡೆಯಲು ನೆರವಾಗಲಿದ್ದಾರೆ ಎಂದು ಇಂಗ್ಲೆಂಡ್ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾನುವಾರ ಮುಕ್ತಾಯವಾಗಿದ್ದ ಐದನೇ ಹಾಗೂ ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ 135 ರನ್ಗಳಿಂದ ಆಸ್ಟ್ರೇಲಿಯಾವನ್ನು ಮಣಿಸಿತ್ತು. ಆ ಮೂಲಕ ಐದು ಪಂದ್ಯಗಳ ಆ್ಯಷಸ್ ಸರಣಿಯು 2-2 ಅಂತರದಲ್ಲಿ ಡ್ರಾ ಆಯಿತು. ಚೊಚ್ಚಲ ಟೆಸ್ಟ್ ಸರಣಿ ಆಡಿದ ಜೊಫ್ರಾ ಆರ್ಚರ್ ಅವರು 22 ವಿಕೆಟ್ ಕಿತ್ತು ಎಲ್ಲರ ಗಮನ ಸೆಳೆದಿದ್ದರು.
24ರ ಪ್ರಾಯದ ಜೊಫ್ರಾ ಆರ್ಚರ್ ಅವರು ಇಂಗ್ಲೆಂಡ್ ತಂಡಕ್ಕೆ ಪದಾರ್ಪಣೆ ಮಾಡುತ್ತಿದ್ದಂತೆ ಆಂಗ್ಲರು ಚೊಚ್ಚಲ ವಿಶ್ವಕಪ್ ಮುಡಿಗೇರಿಸಿಕೊಂಡರು. ಬಲಗೈ ವೇಗಿ ಆಡಿದ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ತಮ್ಮ ವೇಗ ಮತ್ತು ಸ್ವಿಂಗ್ನಿಂದ ಆಸ್ಟ್ರೇಲಿಯಾ ಬ್ಯಾಟ್ಸ್ಮನ್ಗಳಿಗೆ ಸಿಂಹ ಸ್ವಪ್ನರಾಗಿದ್ದರು.
"ನನ್ನ ವೃತ್ತಿ ಜೀವನದಲ್ಲಿ ಜೊಫ್ರಾ ಆರ್ಚರ್ ಅವರಂಥ ಪ್ರತಿಭಾವಂತ ಬೌಲರ್ ಅನ್ನು ಎಂದೂ ಕಂಡಿಲ್ಲ. ನಮ್ಮ ತಂಡದಲ್ಲಿ ಆರ್ಚರ್ ಇರುವುದು ಅದ್ಭುತ. ಮುಂಬರುವ 2021-22 ಸಾಲಿನಲ್ಲಿ ಕಾಂಗೂರು ನಾಡಿನಲ್ಲಿ ನಡೆಯುವ ಆ್ಯಷಸ್ ಸರಣಿಯಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿ ಆ್ಯಷಸ್ ಟ್ರೋಫಿ ಮರಳಿ ಪಡೆಯಲು ಖಂಡಿತ ಆರ್ಚರ್ ನೆರವಾಗಲಿದ್ದಾರೆ ಎಂದು ಸ್ಟೋಕ್ಸ್ ಭರವಸೆ ವ್ಯಕ್ತಪಡಿಸಿದರು.
"ಜೊಫ್ರಾ ಆರ್ಚರ್ ಆಸ್ಟ್ರೇಲಿಯಾದಲ್ಲಿ ನಡೆಯುವ ಬಿಗ್ಬ್ಯಾಷ್ ಲೀಗ್ ಆಡಿದ ಅನುಭವ ಹೊಂದಿದ್ದಾರೆ. ಆದ್ದರಿಂದ ಕಾಂಗರೂ ನಾಡಿನಲ್ಲಿ ಉತ್ತಮ ಪ್ರದರ್ಶನ ತೋರಲಿದ್ದಾರೆಂಬ ನಂಬಿಕೆ ಇದೆ. ಗಂಟೆಗೆ 90 ಮೈಲಿ ವೇಗವಾಗಿ ಬೌಲಿಂಗ್ ಮಾಡುವ ಆರ್ಚರ್, ಚೆಂಡಿನ ಮೇಲೆ ಉತ್ತಮ ನಿಯಂತ್ರಣ ಕಾಯ್ದುಕೊಳ್ಳಬಲ್ಲರು. ವಿಶ್ವದ ಯಾವುದೇ ಭಾಗದಲ್ಲಿ ಅವರು ಎದುರಾಳಿ ಬ್ಯಾಟ್ಸ್ಮನ್ಗಳ ಮೇಲೆ ಒತ್ತಡ ಹೇರಬಲ್ಲರು ಎಂದರು.
29 ವಿಕೆಟ್ ಪಡೆದ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಹಾಗೂ ಜೊಫ್ರಾ ಆರ್ಚರ್ ಅವರ ನಡುವೆ ಹೋಲಿಕೆ ಕುರಿತು ಮಾತನಾಡಿ, "24ರ ಪ್ರಾಯದ ಜೊಫ್ರಾ ಆರ್ಚರ್ ಇನ್ನು ಇದು ಮೊದಲನೇ ಟೆಸ್ಟ್ ಸರಣಿಯಾಗಿದೆ. ಕ್ಲಿಷ್ಟಕರ ಸನ್ನಿವೇಶದಲ್ಲಿ ಅವರು ತೋರಿರುವ ಪ್ರದರ್ಶನ ಅತ್ಯುತ್ತಮವಾದದ್ದು. ಪಂದ್ಯದಿಂದ ಪಂದ್ಯಕ್ಕೆ ಸುಧಾರಣೆ ಕಂಡುಕೊಂಡಿದ್ದಾರೆ. ಆರ್ಚರ್ ಕೌಶಲ್ಯಭರಿತ ಬೌಲರ್ ಆಗಿರುವ ಹಿನ್ನೆಲೆಯಲ್ಲಿ ಪಂದ್ಯದ ಉಪಯುಕ್ತ ಸಂಗತಿಗಳನ್ನು ಬಹು ಬೇಗ ಕರಗತ ಮಾಡಿಕೊಳ್ಳುತ್ತಾರೆ. ಹಾಗಾಗಿ ಅವರಿಂದ ಮುಂದಿನ ಪಂದ್ಯಗಳಲ್ಲಿ ಹೆಚ್ಚಿನ ನಿರೀಕ್ಷೆ ಮಾಡಲಾಗಿದೆ ಎಂದು ಬೆನ್ ಸ್ಟೋಕ್ಸ್ ಹೇಳಿದರು.
ಆ್ಯಷಸ್ ಸರಣಿ ಮುಗಿಸಿರುವ ಇಂಗ್ಲೆಂಡ್ ಅಕ್ಟೋಬರ್ ಕೊನೆಯಲ್ಲಿ ಐದು ಪಂದ್ಯಗಳ ಟಿ-20 ಸರಣಿ ಹಾಗೂ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡಲು ನ್ಯೂಜಿಲೆಂಡ್ ಪ್ರವಾಸ ಮಾಡಲಿದೆ.