ಭಾರತದ ವಿರುದ್ದ ನೇಪಾಳ ಪ್ರಧಾನಿ ಕೆಪಿಶರ್ಮ ಓಲಿ ತೀವ್ರ ರೀತಿಯ ಹೇಳಿಕೆ

ಕಠ್ಮಂಡು, ಮೇ ೨೦,  ಲಿಪುಲೇಖ್,ಕಾಲಾಪಾನಿ, ಲಿಂಪಿಯಧುರ ಪ್ರದೇಶಗಳಿಗಾಗಿ ಭಾರತ, ನೇಪಾಳ ನಡುವೆ ವಿವಾದ ಉದ್ಭವಿಸಿರುವ ನಡುವೆಯೇ ನೇಪಾಳ ಪ್ರಧಾನಿ ಕೆ ಪಿ ಶರ್ಮ ಓಲಿ  ಭಾರತದ   ವಿರುದ್ದ  ಮತ್ತೊಮ್ಮೆ  ತೀವ್ರ ರೀತಿಯ ಹೇಳಿಕೆ ನೀಡಿದ್ದಾರೆ.ಭಾರತದಿಂದ   ಬರುವವರಿಂದಲೇ  ತಮ್ಮ ದೇಶದಲ್ಲಿ  ಕೊರೊನಾ ಸಾಂಕ್ರಾಮಿಕ  ತೀವ್ರಗೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. ಭಾರತದಿಂದ  ದೇಶ ಪ್ರವೇಶಿಸುವ   ವೈರಸ್,   ಚೈನಾ, ಇಟಲಿಯ ವೈರಸ್ ಗಿಂತ  ಮಾರಣಾಂತಿಕವಾದದ್ದು  ಎಂಬ  ಹೇಳಿಕೆ ನೀಡಿದ್ದಾರೆ.
ಈ ಸಂಬಂಧ ಮಂಗಳವಾರ  ಸಂಸತ್ತಿನಲ್ಲಿ ಮಾತನಾಡಿದ ಕೆಪಿ ಶರ್ಮ ಓಲಿ ..” ಭಾರತದಿಂದ ಅಕ್ರಮ ಮಾರ್ಗಗಳ ಮೂಲಕ  ನೇಪಾಳಕ್ಕೆ  ಬರುವವರಿಂದ  ದೇಶದಲ್ಲಿ ವೈರಸ್  ಹರಡುತ್ತಿದೆ. ಆದರೆ,  ಸ್ಥಳೀಯ ಜನಪ್ರತಿನಿಧಿಗಳು, ಕೆಲ ಮಂದಿ ರಾಜಕೀಯ ನಾಯಕರು ಹೊಣೆಗೇಡಿತನದಿಂದ  ಅವರನ್ನು ಪರೀಕ್ಷೆ  ನಡೆಸದೆ ಅವರನ್ನು ದೇಶದೊಳಕ್ಕೆ ಕರೆತರುತ್ತಿದ್ದಾರೆ ಎಂದು ದೂರಿದ್ದಾರೆ. ಈ ರೀತಿ  ಹೊರಗಿನ  ದೇಶದಿಂದ  ಜನರು ಬಂದು ಹೋಗುತ್ತಿರುವುದರಿಂದ   ದೇಶದಲ್ಲಿ ಕೋವಿಡ್ -೧೯ ನಿಯಂತ್ರಿಸುವುದು ಅತ್ಯಂತ ಕಷ್ಟಕರ ಕೆಲಸವಾಗಿದೆ. ಚೈನಾ, ಇಟಲಿಗಿಂತ  ಭಾರತದ ವೈರಸ್  ಹೆಚ್ಚು ಮಾರಾಣಂತಿಕವಾಗಿದೆ. ಇದರಿಂದ ಎಷ್ಟೋ ಮಂದಿ ಸೋಂಕಿಗೆ ಒಳಗಾಗಿದ್ದಾರೆ ಎಂದು ಭಾರತದ ವಿರುದ್ದ ಅಸಹನೆ ವ್ಯಕ್ತಪಡಿಸಿದ್ದಾರೆ.
ಉತ್ತರಾಖಂಡ್ ಗಡಿಯ   ಧಾರ್ಚುಲಾ ಪ್ರದೇಶವನ್ನು ಲಿಪುಲೇಖ್ ನೊಂದಿಗೆ ಸಂಪರ್ಕ ಕಲ್ಪಿಸಿ  ಭಾರತ ನಿರ್ಮಿಸಿರುವ  ರಸ್ತೆಯ  ಬಗ್ಗೆ  ಆಕ್ಷೇಪ ವ್ಯಕ್ತಪಡಿಸಿದ ನೇಪಾಳ್,  ಇದಕ್ಕೆ ಪ್ರತಿಭಟನಾ ಕ್ರಮವಾಗಿ ತನ್ನ ದೇಶದಲ್ಲಿರುವ ಭಾರತ ರಾಯಭಾರಿಗೆ ನೋಟೀಸ್ ಜಾರಿ ಮಾಡಿತ್ತು.ಈ ಕ್ರಮವಾಗಿ ಲಿಪು ಲೇಖ್,ಕಾಲಾಪಾನಿ, ಲಿಂಪಿಯಧುರ  ಪ್ರದೇಶಗಳನ್ನು  ತಮಗೆ ವಾಪಸ್ಸು ನೀಡಬೇಕೆಂದು  ಭಾರತವನ್ನು  ಒತ್ತಾಯಿಸುವ ನಿರ್ಣಯಕ್ಕೆ    ಸಂಪುಟ ಅನುಮೋದನೆ ನೀಡಿದೆ. ಇದಕ್ಕೆ ಸಂಬಂಧಿಸಿದ  ತೀರ್ಮಾನವನ್ನು  ಆಡಳಿತಾರೂಢ ನೇಪಾಳ್  ಕಮ್ಯುನಿಸ್ಟ್  ಪಕ್ಷ ಸದಸ್ಯ ರೊಬ್ಬರು  ಸಂಸತ್ತಿನಲ್ಲಿ  ಮಂಡಿಸಿದ್ದರು. ಈ ಹಿನ್ನಲೆಯಲ್ಲಿ ಈ ಮೂರು ಪ್ರಾಂತ್ಯಗಳ ವಿಷಯದಲ್ಲಿ ಈ ಹಿಂದೆ ಆಡಳಿತ ನಡೆಸಿದವರ ಮಾದರಿಯಲ್ಲಿ ತಾವು ಯಾವುದೇ ಹಿಂಜರಿಯುವುದಿಲ್ಲ, ಅವುಗಳನ್ನು ಪಡೆದೇ ತೀರುತ್ತೇವೆ ಎಂದು ಪ್ರಧಾನಿ  ಕೆಪಿ ಶರ್ಮ ಓಲಿ   ಮಹತ್ವದ  ಹೇಳಿಕೆ  ನೀಡಿದ್ದಾರೆ. ತಮ್ಮ ದೇಶದಲ್ಲಿ ಕೊರೊನಾ ಸೋಂಕು  ಹರಡಲು   ಭಾರತ ಕಾರಣ ಎಂದು ಹೇಳುವ ಮೂಲಕ  ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದಾರೆ.