ಗದಗ : ನೆರೆಯಿಂದಾಗಿ ಪದೇ ಪದೇ ಸಂಕಷ್ಟಕ್ಕೆ ಒಳಗಾಗುತ್ತಿರುವ ಜನರ ಸಮಸ್ಯೆ ಪರಿಹಾರಕ್ಕೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಿರಂತರ ಕಾಳಜಿ ವಹಿಸುತ್ತಿದ್ದಾರೆ . ಇಂತಹ ಸಂದರ್ಭದಲ್ಲಿ ನೆರೆ ಸಂತ್ರಸ್ತರ ಪರಿಹಾರ ಕುರಿತಂತೆ ಯಾವುದೇ ಅಧಿಕಾರಿ ಸಿಬ್ಬಂದಿ ಬೇಜವಾಬ್ದಾರಿ ತೋರಿದಲ್ಲಿ ಅವರನ್ನು ಕ್ಷಮಿಸುವುದಿಲ್ಲ ಎಂದು ರಾಜ್ಯದ ಗಣಿ, ಭೂ ವಿಜ್ಞಾನ, ಅರಣ್ಯ ಪರಿಸರ, ಜೀವಿಶಾಸ್ತ್ರ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ನುಡಿದರು.
ಅವರು ನೆರೆ ಪೀಡಿತ ಹೊಳೆ ಆಲೂರಿಗೆ ಭೇಟಿ ನೀಡಿ ನೆರೆ ಪರಿಸ್ಥಿತಿ ಪರಿಶೀಲಿಸಿದ ಸಂದರ್ಭದಲ್ಲಿ ಗ್ರಾಮಸ್ಥರ ಹಾಗೂ ಅಧಿಕಾರಿಗಳೊಂದಿಗೆ ಮಾತನಾಡಿದರು.
ಜಿಲ್ಲಾಡಳಿತಗಳಿಗೆ ರಾಜ್ಯ ಸರ್ಕಾರ ಅವಶ್ಯಕ ಹಣಕಾಸು ಒದಗಿಸುತ್ತಿದ್ದು ಗದಗ ಜಿಲ್ಲಾಡಳಿತದ ಬಳಿ ನೆರೆ ಮತ್ತು ಮಳೆ ವಿಪತ್ತು ನಿರ್ವಹಣೆ ಕುರಿತಂತೆ ಸಾಕಷ್ಟು ಅನುದಾನ ಲಭ್ಯವಿದೆ. ಅಗಸ್ಟ ತಿಂಗಳಿನ ಹಾಗೂ ಈಗಿನ ನೆರೆ ಪರಿಸ್ಥಿತಿಯನ್ನು ಗ್ರಾಮ ಮಟ್ಟದಿಂದ ಜಿಲ್ಲಾಧಿಕರಿಗಳವರೆಗೂ ಉತ್ತಮ ಕಾರ್ಯನಿರ್ವಹಣೆ ಮಾಡಿದ್ದಾರೆ. ಎಷ್ಟಲ್ಲ ಇದ್ದರೂ ಗ್ರಾಮದ ಅಧಿಕಾರಿ ಸಿಬ್ಬಂದಿಯ ಸಣ್ಣ ತಪ್ಪಾದರೂ ಅದು ಮಾಧ್ಯಮವರಿಗೆ ಆಹಾರವಾಗಿ ನಮಗೆ ಅಪವಾದ ತಪ್ಪುವುದಿಲ್ಲ. ಆದುದರಿಂದ ಪ್ರವಾಹ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಪಿ ಡಿ ಓ ಗ್ರಾಮ ಲೆಕ್ಕಾಧಿಕಾರಿಗಳು ತಮ್ಮ ಮೊಬೈಲ್ ಬಂದು ಮಾಡದೇ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿದ್ದು ಪರಿಸ್ಥಿತಿ ಕುರಿತು ಸದಾ ನಿಗಾ ಇರಬೇಕು. ತುರ್ತ ಸ್ಥಿತಿ ಇದ್ದಾಗ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅಗತ್ಯವಿದ್ದಲ್ಲಿ ಕಾಳಜಿ ಕೇಂದ್ರ ಪ್ರಾರಂಭಿಸಿ ಜನರ ಸಮಸ್ಯೆಗಳ ಪರಿಹಾರಕ್ಕೆ ಅವಶ್ಯಕ ಕ್ರಮ ಜರುಗಿಸಬೇಕು. ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ನೆರೆ ಪರಿಸ್ಥಿತಿ ಇಳಿಮುಖವಾಗುವವರೆಗೂ ಮುಂಜಾನೆ ಹಾಗೂ ಸಂಜೆ ಪರಿಸ್ಥಿತಿ ಕುರಿತು ತಮಗೆ ವರದಿ ನೀಡಬೇಕು ಎಂದು ಸಚಿವ ಸಿ.ಸಿ.ಪಾಟೀಲ ಕಟ್ಟುನಿಟ್ಟಿನ ಸೂಚನೆ ನೀಡಿದರು. ಹೊಳೆ ಆಲೂರು ಗ್ರಾಮಸ್ಥರ ಮನವಿಯನ್ನು ಆಲಿಸಿದರು.
ಹೊಳೆ ಆಲೂರ ಗ್ರಾಮ ಪಂಚಾಯತ ಅಧ್ಯಕ್ಷೆ ಸುಮಂಗಲಾ ಕಾತರಕಿ, ರೋಣ ತಹಶೀಲ್ದಾರ ಶರಣಮ್ಮ ಕಾರಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಪಾಟೀಲ, ತಾ.ಪಂ., ಗ್ರಾಮ ಪಂಚಾಯತ ಸದಸ್ಯರು ಉಪಸ್ಥಿತರಿದ್ದರು.