ಮಂಗಳೂರು , ಫೆ 12 : ಯೋಗ ಮತ್ತು ನ್ಯಾಚುರೋಪತಿಯನ್ನು ಭಾರತೀಯ ಔಷಧ ಪದ್ಧತಿಯ ರಾಷ್ಟ್ರೀಯ ಆಯೋಗ (ಎನ್.ಸಿ.ಐ.ಎಸ್.ಎಂ) ಕ್ಕೆ ಸೇರಿಸುವಂತೆ ಆಗ್ರಹಿಸಿ ದೇಶದಾದ್ಯಂತ ಇಂದು ಯೋಗ ಹಾಗೂ ಪ್ರಕೃತಿ ಚಿಕಿತ್ಸಾ ವೈದ್ಯರು, ಪದವೀಧರರು ಹಾಗೂ ಉಪನ್ಯಾಸಕರು ಉಪವಾಸ ಸತ್ಯಾಗ್ರಹ ನಡೆಸಿದರು.
ದೇಶದ ಪ್ರಥಮ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯದ 700 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಇಂದು ಉಜಿರೆಯ ಕಾಲೇಜು ಕ್ಯಾಂಪಸ್ ನಲ್ಲಿ ಉಪವಾಸ ಮಾಡಿ ಪ್ರತಿಭಟನೆ ಮಾಡಿದರು.
ಭಾರತೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವೈದ್ಯಕೀಯ ಪದವೀಧರ ರ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ಪ್ರಶಾಂತ್ ಶೆಟ್ಟಿ ಅವರ ನೇತೃತ್ವದಲ್ಲಿ ದೇಶವ್ಯಾಪಿ ಉಪವಾಸ ಸತ್ಯಾಗ್ರಹ ಆಯೋಜಿಸಲಾಗತ್ತು. ದೇಶದ ಎಲ್ಲಾ 42 ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವಿದ್ಯಾ ಸಂಸ್ಥೆಗಳಲ್ಲಿ ಈ ಒಂದು ದಿನದ ಸತ್ಯಾಗ್ರಹ ನಡೆಯಿತು.
ಯೋಗ ಮತ್ತು ನ್ಯಾಚುರೋಪತಿಯನ್ನು ಪ್ರತ್ಯೇಕ ಸಮಿತಿ ಅಥವಾ ಭಾರತೀಯ ಔಷಧೀಯ ಪದ್ದತಿಯ ರಾಷ್ಟ್ರೀಯ ಆಯೋಗದ ಅಡಿಯಲ್ಲಿ ತಾರದೆ ಇದ್ದರೆ , ವಿಶ್ವವಿದ್ಯಾನಿಲಯಗಳು ತಮಗೆ ಬೇಕಾದಂತೆ ಪಠ್ಯ ಕ್ರಮ ತಯಾರಿಸುತ್ತವೆ, ಇಡೀ ದೇಶಕ್ಕೆ ಮಾರ್ಗದರ್ಶನ ನೀಡಬೇಕಾದ ವ್ಯವಸ್ಥೆ ಹಳಿ ತಪ್ಪುತ್ತದೆ ಮತ್ತು ಇದರಿಂದಾಗಿ 42 ವಿದ್ಯಾ ಸಂಸ್ಥೆಗಳು, 7 ಸಾವಿರ ವಿದ್ಯಾರ್ಥಿಗಳು , 5 ಸಾವಿರ ಪದವಿಧರ ಹಾಗೂ 100 ಕ್ಕೂ ಅಧಿಕ ಡಾಕ್ಟರೇಟ್ ಪದವೀಧರರ ಭವಿಷ್ಯ ಡೋಲಾಯಮಾನವಾಗಲಿದೆ ಎಂದು ಡಾ. ಪ್ರಶಾಂತ್ ಶೆಟ್ಟಿ ಅವರು ಆತಂಕ ವ್ಯಕ್ತಪಡಿಸಿದರು.
ಪ್ರಧಾನ ಮಂತ್ರಿಯವರ ಕಾರ್ಯಾಲಯ ತಕ್ಷಣ ಮಧ್ಯಪ್ರವೇಶ ಮಾಡಿ ದೇಶದಾದ್ಯಂತ ಇರುವ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವಿದ್ಯಾ ಸಂಸ್ಥೆಗಳನ್ನು ಹಾಗೂ ವೈದ್ಯರುಗಳ ಭವಿಷ್ಯ ಹಾಗೂ ವೈದ್ಯಕೀಯ ಪದ್ಧತಿ ಉಳಿಸಲು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.
ಕೇಂದ್ರ ಸರಕಾರ ಯೋಗ ಸೇರಿದಂತೆ ನ್ಯಾಚುರೋಪತಿಗೆ ವಿಶೇಷ ಆದ್ಯತೆ ನೀಡುತ್ತಿದ್ದರೂ , ಶೈಕ್ಷಣಿಕ ವ್ಯವಸ್ಥೆಯಲ್ಲಾಗಿರುವ ನ್ಯೂನತೆಯನ್ನು ಸರಿ ಮಾಡದೇ ಇರುವುದು ದುರದೃಷ್ಟಕರ ಬೆಳವಣಿಗೆ ಎಂದು ಡಾ. ಪ್ರಶಾಂತ್ ಶೆಟ್ಟಿ ಅವರು ವಿಷಾದ ವ್ಯಕ್ತಪಡಿಸಿದರು.
ಯೋಗವನ್ನು ಮುಂದಿಟ್ಟುಕೊಂಡು ಭಾರತವು ವಿಶ್ವಗುರು ಆಗುತ್ತಿರುವ ಸಂದರ್ಭದಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆಗೆ ಸೂಕ್ತ ಶೈಕ್ಷಣಿಕ ಮಾನ್ಯತೆ ಹಾಗೂ ವೈದ್ಯರುಗಳ ರಾಷ್ಟ್ರೀಯ ವೈದ್ಯಕೀಯ ಪರವಾನಿಗೆ ನೀಡುವ ಸದವಕಾಶವನ್ನು ಕಳೆದುಕೊಳ್ಳುತ್ತಿರುವುದು ದುರದೃಷ್ಟಕರ ಬೆಳವಣಿಗೆಯಾಗಿದೆ ಎಂದು ಡಾ. ಪ್ರಶಾಂತ್ ಶೆಟ್ಟಿ ಅವರು ಆತಂಕ ವ್ಯಕ್ತಪಡಿಸಿದರು.
ಉಜಿರೆಯಲ್ಲಿ ನಡೆದ ಸತ್ಯಾಗ್ರಹ ದಲ್ಲಿ ಕಾಲೇಜಿನ ಡೀನ್ ಡಾ.ಶಿವಪ್ರಸಾದ್ ಅವರು ನೇತೃತ್ವದಲ್ಲಿ , ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿ ಗಳು ಪಾಲ್ಗೊಂಡ ರು.
ಪ್ರಧಾನಿಗೆ ಡಾ. ಹೆಗ್ಗಡೆ ಅವರಿಂದ ಪತ್ರ : ಯೋಗ ಮತ್ತು ನ್ಯಾಚುರೋಪತಿ ಶಿಕ್ಷಣಕ್ಕೆ ಆಗುತ್ತಿರುವ ತೊಡಕುಗಳನ್ನು ನಿವಾರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹಾಗೂ ಶ್ರೀ ಸ್ವಾಮಿ ವಿವೇಕಾನಂದ ಯೋಗ ಅನುಸಂದಾನ ಸಂಸ್ಥಾನದ ಕುಲಪತಿ ಡಾ. ಎಚ್. ಆರ್. ನಾಗೇಂದ್ರಜೀ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಈಗಾಗಲೇ ಪತ್ರ ಬರೆದಿದ್ದಾರೆ.