ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ಶಿಪ್: ಶಿವ ಥಾಪ, ಮೊಹಮ್ಮದ್, ಪಿ.ಎಲ್ ಪ್ರಸಾದ್ಗೆ ಚಿನ್ನ ಪದಕ

ಬಡ್ಡಿ (ಹಿಮಾಚಲ ಪ್ರದೇಶ) ಅ 10:     ಶಿವ ಥಾಪ (63 ಕೆ.ಜಿ), ಮೊಹಮ್ಮದ್ ಹಸ್ಮದ್ದೀನ್ (57 ಕೆ.ಜಿ) ಹಾಗೂ ಪಿಎ.ಎಲ್ ಪ್ರಸಾದ್ (52 ಕೆ.ಜಿ) ಅವರು ಇಲ್ಲಿ ನಡೆಯುತ್ತಿರುವ 4ನೇ ಎಲೈಟ್ ಪುರುಷರ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ಶಿಪ್ ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಒಟ್ಟಾರೆ, ಸರ್ವಿಸ್ ತಂಡ ರಾಷ್ಟ್ರೀಯ ಚಾಂಪಿಯನ್ಪಟ್ಟವನ್ನು ಉಳಿಸಿಕೊಂಡಿತು.  ಇಲ್ಲಿನ ಬಡ್ಡಿ ವಿಶ್ವ ಬಡ್ಡಿ ವಿಶ್ವವಿದ್ಯಾಲಯದಲ್ಲಿ ಗುರುವಾರ ಮುಕ್ತಾಯವಾಗಿದ್ದ ಬಾಕ್ಸಿಂಗ್ ಚಾಂಪಿಯನ್ಶಿಪ್ ನಲ್ಲಿ ಸರ್ವಿಸ್ ಬಾಕ್ಸರ್ ಗಳು ಆರು ಚಿನ್ನ, ಎರಡು ಬೆಳ್ಳಿ ಹಾಗೂ ಒಂದು ಕಂಚು ಸೇರಿ ಒಟ್ಟಾರೆ ಒಂಬತ್ತು ಪದಕಗಳನ್ನು ಮುಡಿಗೇರಿಸಿಕೊಂಡರು. ಇದರೊಂದಿಗೆ ಅಂಕಪಟ್ಟಿಯಲ್ಲಿ 62 ಪಾಯಿಂಟ್ಗಳನ್ನು ಕಲೆಹಾಕಿ ಸರ್ವಿಸ್ ಚಾಂಪಿಯನ್ ಪಟ್ಟವನ್ನು ಉಳಿಸಿಕೊಂಡಿತು. ರೈಲ್ವೇಸ್ ಹಾಗೂ ಹರಿಯಾಣ ತಂಡಗಳು ಕ್ರಮವಾಗಿ 37 ಮತ್ತು 30 ಅಂಕಗಳನ್ನು ಪಡೆಯುವ ಮೂಲಕ ಎರಡು, ಮೂರನೇ ಸ್ಥಾನಗಳನ್ನು ಅಲಂಕರಿಸಿದವು. ಗುರುವಾರ ಸರ್ವಿಸ್ನ ಮೊಹಮ್ಮದ್ ಹುಸಮುದ್ದೀನ್ ಹಾಗೂ ರೈಲ್ವೇಸ್ನ  ಸಚಿನ್ ಸಿವಾಚ್ ನಡುವಿನ 57 ಕೆ.ಜಿ ವಿಭಾಗದ ಫೈನಲ್ ಸಾಕಷ್ಟು ಕುತೂಹಲ ಕೆರಳಿಸಿತ್ತು. ಇಬ್ಬರ ನಡುವೆ ಭಾರಿ ಕಾದಾಟ ನಡೆದಿತ್ತು. 5 ಅಡಿ 9 ಇಂಚು ಉದ್ದದ ಸಚಿನ್ ಆರಂಭದಲ್ಲಿ ಪಾರಮ್ಯ ಮೆರೆದರೂ ಹುಸಮುದ್ದೀನ್ ನಂತರದ ಸುತ್ತುಗಳಲ್ಲಿ ಉತ್ತಮ ಪ್ರದರ್ಶನ ತೋರಿ 3-1 ಅಂತರದಲ್ಲಿ ಫೈನಲ್ ಗೆದ್ದು ಚಾಂಪಿಯನ್ ಆದರು. 63 ಕೆ.ಜಿ ವಿಭಾಗದ ಫೈನಲ್ನಲ್ಲಿ ಅಸ್ಸಾಂ ಶಿವ ಥಾಪ ಅವರು ಸರ್ವಿಸ್ನ ಆಕಾಶ್ ಅವರ ವಿರುದ್ಧ 4-1 ಅಂತರದಲ್ಲಿ ಗೆದ್ದು ಚಿನ್ನದ ಪದಕ ತನ್ನದಾಗಿಸಿಕೊಂಡರು. ಸರ್ವಿಸ್ನ ಪಿ.ಎಲ್ ಪ್ರಸಾದ್ ಅವರು 52 ಕೆ.ಜಿ ವಿಭಾಗದ ಫೈನಲ್ ಹಣಾಹಣಿಯಲ್ಲಿ ರೈಲ್ವೇಸ್ ಆಶಿಷ್ ಈಶಾ ಅವರ ವಿರುದ್ಧ 3-2 ಅಂತರದಲ್ಲಿ ಗೆದ್ದು ರಾಷ್ಟ್ರೀಯ ಚಾಂಪಿಯನ್ ಪಟ್ಟವನ್ನು ತನ್ನಲ್ಲೆ ಉಳಿಸಿಕೊಂಡರು. 75 ಹಾಗೂ 91 ಕೆ.ಜಿ ವಿಭಾಗದ ಫೈನಲ್ ಹಣಾಹಣಿಗಳಲ್ಲಿ ರೈಲ್ವೇಸ್ನ ಬಾಕ್ಸರ್ಗಳಾದ ರೋಹಿತ್ ತೋಕಾಸ್ ಹಾಗೂ ನಮಾನ್ ತನ್ವಾರ್ ಅವರು ಗಾಯದಿಂದ ವಿಥ್ ಡ್ರಾ ಮಾಡಿಕೊಂಡರು. ಇದರ ಫಲವಾಗಿ ಹರಿಯಾಣದ ಅಂಕಿತ್ ಖಟನಾ ಹಾಗೂ ಸುಮಿತ್ ಸಂಗ್ವನ್ ಅವರಿಗೆ ಚಿನ್ನದ ಪದಕಗಳು ಒಲಿದವು. ಸರ್ವಿಸ್ ನ ಯುವ ಬಾಕ್ಸರ್ ವಿನೋದ್ ತನ್ವಾರ್ 52 ಕೆ.ಜಿ ವಿಭಾಗದ ಫೈನಲ್ನಲ್ಲಿ ಮಹಾರಾಷ್ಟ್ರದ ಅಜಯ್ ಪೆಂಡಾರ್ ವಿರುದ್ಧ 4-1 ಅಂತರದಲ್ಲಿ ಗೆದ್ದು ಕನಸಿನ ಚಿನ್ನದ ಪದಕ ತನ್ನದಾಗಿಸಿಕೊಂಡರು. ಏಳು ದಿನಗಳ ಕಾಲ ನಡೆದಿದ್ದ ಬಾಕ್ಸಿಂಗ್ ಚಾಂಪಿಯನ್ಶಿಪ್ ನಲ್ಲಿ 308 ಬಾಕ್ಸರ್ ಗಳು ಭಾಗವಹಿಸಿದ್ದರು.