ನವದೆಹಲಿ, ಮೇ 13,ನ್ಯೂಜಿಲೆಂಡ್ ತಂಡದ ಹಾಲಿ ನಾಯಕ ಕೇನ್ ವಿಲಿಯಮ್ಸನ್ ಅವರನ್ನು ಟೆಸ್ಟ್ ಕ್ರಿಕೆಟ್ ನಲ್ಲಿ ತಮ್ಮ ಅತ್ಯುತ್ತಮ ನಾಯಕ ಎಂದು ಇಂಗ್ಲೆಂಡ್‌ನ ದಿಗ್ಗಜ ನಾಸಿರ್ ಹುಸೇನ್ ಹೇಳಿದ್ದಾರೆ.ಇದೇ ವೇಳೆ ಕಳೆದ 3 ವರ್ಷಗಳ ಕಾಲ ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಭಾರತವನ್ನು ನಂ.1 ಸ್ಥಾನದಲ್ಲಿ ಉಳಿಯುವಂತೆ ಮಾಡಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಸಾಧನೆಯನ್ನು ಇಂಗ್ಲೆಂಡ್‌ನ ಮಾಜಿ ನಾಯಕ ಗುಣಗಾನ ಮಾಡಿದ್ದಾರೆ. ಅಷ್ಟೇ ಅಲ್ಲದೆ ಭಾರತ ತಂಡವನ್ನು ರನ್ ಚೇಸಿಂಗ್‌ನಲ್ಲಿ ಬಲಿಷ್ಠ ತಂಡವನ್ನಾಗಿಸಿರುವುದನ್ನು ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ.ಕೊರೊನಾ ವೈರಸ್ ಕಾರಣ ಇಡೀ ವಿಶ್ವವೇ ಸ್ತಬ್ಧವಾಗುವ ಮೊದಲು ನ್ಯೂಜಿಲೆಂಡ್ ತಂಡ ಕೇನ್ ವಿಲಿಯಮ್ಸನ್ ಸಾರಥ್ಯದಲ್ಲಿ ಆಗ ವಿಶ್ವದ ನಂ.1 ತಂಡವಾದ ಭಾರತ ವಿರುದ್ಧ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ವೈಟ್‌ವಾಷ್ ಮಾಡಿ ಅಬ್ಬರಿಸಿತ್ತು.
"ಟೆಸ್ಟ್ ಕ್ರಿಕೆಟ್‌ನಲ್ಲಿ ನೀವು ಹಲವು ಸಂಗತಿಗಳಲ್ಲಿ ಸೈ ಎನಿಸಿಕೊಳ್ಳಬೇಕು. ಕೊಹ್ಲಿ ಭಾರತ ತಂಡದ ಸಂಸ್ಕೃತಿಯನ್ನೇ ಬದಲಾಯಿಸಿದ್ದಾರೆ. ತಂಡದ ಫಿಟ್ನೆಸ್ ಮಟ್ಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. ಇದರಿಂದ ಟೀಮ್ ಇಂಡಿಯಾದ ಆತ್ಮವಿಶ್ವಾಸ ಕೂಡ ಹೆಚ್ಚಿದೆ. ಇವೆಲ್ಲದಕ್ಕೂ ಕಾರಣರಾಗಿರುವ ಕೊಹ್ಲಿಯನ್ನು ಮೆಚ್ಚಿಕೊಳ್ಳಲೇ ಬೇಕು," ಎಂದು ಹುಸೇನ್ ಕ್ರಿಕ್‌ಬಜ್ ಗೆ ನೀಡಿರುವ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
"ಆದರೆ, ನನ್ನನ್ನು ವೈಯಕ್ತಿಕವಾಗಿ ಟೆಸ್ಟ್ ಕ್ರಿಕೆಟ್‌ನ ರಾಯಭಾರಿ ಯಾರೆಂದು ಕೇಳಿದರೆ ನಾನು ಕೇನ್ ವಿಲಿಯಮ್ಸನ್ ಎಂದು ಹೇಳುತ್ತೇನೆ. ಏಕೆಂದರೆ ತಾಯ್ನಾಡಿನಲ್ಲಿ ನ್ಯೂಜಿಲೆಂಡ್ ತಂಡ ಅದ್ಭುತ ದಾಖಲೆ ಹೊಂದಿದೆ. ಇತ್ತೀಚೆಗೆ ಟೀಮ್ ಇಂಡಿಯಾ ಇದರ ಅನುಭವ ಪಡೆದುಕೊಂಡಿದೆ. ಇಂಗ್ಲೆಂಡ್ ತಂಡಕ್ಕೂ ಕೂಡ ಇದರ ಅರಿವಾಗಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ವಿಲಿಯಮ್ಸನ್ ಸಾರಥ್ಯದಲ್ಲಿ ಕಿವೀಸ್ ಆಟ ಅದ್ಭುತವಾಗಿದೆ," ಎಂದಿದ್ದಾರೆ.