ಬೆಂಗಳೂರು, ಆ 20 ಬಿಜೆಪಿ ಕಾರ್ಯಸೂಚಿಗಳಿಗೆ ಸಮೀಪವಿರುವ ವಿಚಾರಗಳಿಗೆ ಮಾತ್ರ ಪ್ರಧಾನಿ ನರೇಂದ್ರ ಮೋದಿ ಬಹಳ ಬೇಗ ಸ್ಪಂದಿಸಿ ಪ್ರತಿಕ್ರಿಯಿಸುತ್ತಾರೆಯೇ ಹೊರತು ಜನಸಾಮಾನ್ಯರ ವಿಚಾರಗಳ ಬಗ್ಗೆ ಚಕಾರ ಎತ್ತುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಬರೀ ಹಿಂದೂತ್ವ ಅಜೆಂಡಾ ಹೊಂದಿರುವ ಮೋದಿ, ಹೃದಯವಿಲ್ಲದ ಪ್ರಧಾನಿ ಎಂದು ಟೀಕಿಸಿದ್ದಾರೆ.
ಕೆಪಿಸಿಸಿಯಿಂದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 75 ನೇ ಜನ್ಮದಿನಾಚರಣೆ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ನೆರೆ ತಲೆದೋರಿದೆ. ಸಣ್ಣಪುಟ್ಟ ವಿಚಾರಗಳಿಗೂ ಟ್ವೀಟ್ ಮಾಡುವ ಮೋದಿ ಇನ್ನೂ ಏಕೆ ಕರ್ನಾಟಕದ ಪ್ರವಾಹದ ಬಗ್ಗೆ ತುಟಿಕ್ ಪಿಟಿಕ್ ಎಂದಿಲ್ಲ. ಮೋದಿ ಅವರನ್ನು ಪ್ರಶ್ನಿಸುವವರೇ ಇಲ್ಲ. ಪಕ್ಷದವರಾಗಲೀ ಮಾಧ್ಯಮಗಳಾಗಲೀ ರಾಜ್ಯಕ್ಕೆ ಮೋದಿ ಏಕೆ ಇನ್ನೂ ಭೇಟಿ ಕೊಟ್ಟಿಲ್ಲ ಎಂದು ಕೇಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯಾಗದೇ ಬದುಕಿದ್ದಿದ್ದರೆ ದೇಶಕ್ಕೆ ಅವರು ಇನ್ನೂ ಪ್ರಸ್ತುತವಾಗಿರುತ್ತಿದ್ದರು. ನವಭಾರತ ನಿಮರ್ಾಣ ಹಾಗೂ ಒಳ್ಳೆಯ ರಾಜಕಾರಣದ ಕನಸು ಕಂಡಿದ್ದ ನೆಹರು ಅವರು ಹಾಕಿಕೊಟ್ಟ ಬುನಾದಿಯೇ ಇಂದಿನವರೆಗೂ ದೇಶವನ್ನು ಸುಭದ್ರವಾಗಿ ಇಟ್ಟಿದೆ. ಆಡಳಿತದಲ್ಲಿರುವ ಪಕ್ಷ ಮತ್ತು ಸಕರ್ಾರ ನೆಹರು ಕುಟುಂಬದ ಬಗ್ಗೆ ಸತ್ಯವನ್ನು ತಿರುಚಿ ಅಪಪ್ರಚಾರ ಮಾಡುತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟೀಷರ ವಿರುದ್ಧ ಹೋರಾಡಲು ನೆಹರು ಅವರು ತಮ್ಮ ಆದಾಯ ಆಸ್ತಿಯನ್ನೆಲ್ಲಾ ತ್ಯಜಿಸಿ, ಕಾರಾಗೃಹ ವಾಸ ಅನುಭವಿಸಿದ್ದರು ಎಂದರು.
ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಜನ್ಮದಿನಾಚರಣೆಯನ್ನು ಕೆಪಿಸಿಸಿ ಈ ಬಾರಿ ವಿಶೇಷವಾಗಿ ಆಚರಿಸಿದೆ. ರಾಜೀವ್ ಗಾಂಧಿ ಅವರ ಬದುಕು ಮತ್ತು ಅವರ ಕುಟುಂಬದ ತ್ಯಾಗ ಬಲಿದಾನವನ್ನು ಎಲ್ಲರೂ ಅರಿಯಬೇಕಿದೆ ಎಂದರು.
ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ನೆಹರು ಅವರ ಸಾಧನೆ ಕೊಡುಗೆಗಳನ್ನು ತಿರುಚುತ್ತಿರುವುದು ವಿಷಾದನೀಯ. ದೇಶದ ಇಬ್ಬಾಗ, ಗಣತಂತ್ರ ವ್ಯವಸ್ಥೆ ಸೇರಿದಂತೆ ಸ್ವಾತಂತ್ರ್ಯಾನಂತರ ದೇಶದಲ್ಲಿ ತಲೆದೋರಿದ ನೂರಾರು ಸಮಸ್ಯೆಗಳನ್ನು ಸರಿಪಡಿಸಿ ಅಖಂಡ ಭಾರತ ನಿರ್ಮಾಣ ಮಾಡಿದ್ದಾರೆ. 72 ವರ್ಷಗಳ ಬಳಿಕವೂ ದೇಶ ಒಂದಾಗಿರಲು ಹಿಂದೂ ಮಹಾಸಭಾ, ಬಿಜೆಪಿ, ಸಂಘಪರಿವಾರ ಕಾರಣವಲ್ಲ. ದೇಶ ಇಂದಿಗೂ ನಿಂತಿರುವುದು ನೆಹರು ಅವರು ತೆಗೆದುಕೊಂಡಿರುವ ಸೂಕ್ತ ತೀರ್ಮಾನಗಳ ಮೇಲೆ ಎಂದರು.
ಸುಳ್ಳಿನ ಮೂಲಕ ಜನರ ಮನಸು ಕಡೆಸುವ ಕೆಲಸ ನಡೆಯುತ್ತಿದೆ. ಮೋದಿ ಹಾಗೂ ಬಿಜೆಪಿ ಟೀಕಿಸಿದವರನ್ನು ದೇಶದ್ರೋಹಿಗಳು, ಪಾಕಿಸ್ತಾನದ ಏಜೆಂಟ್ ಎಂದು ಬಿಂಬಿಸಲಾಗುತ್ತಿದೆ. ಅಲ್ಪಸಂಖ್ಯಾತರು, ದಲಿತರ ಮೇಲೆ ಬಹಿರಂಗವಾಗಿ ಅತ್ಯಾಚಾರ, ಕೊಲೆ ಆಗುತ್ತಿದ್ದು, ದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕೋಮುವಾದ ಸಿದ್ಧಾಂತ ಪ್ರಚೋದನೆ, ಭಯೋತ್ಪಾದನೆಯೇ ಬಿಜೆಪಿಯ ಅಜೆಂಡಾವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಧಿಕಾರ, ಸ್ಥಾನಮಾನ, ಗೌರವಕ್ಕಾಗಿ ಪಕ್ಷದ ಮುಖಂಡರು ಕಾರ್ಯಕರ್ತರು ಹೋರಾಟ ಮಾಡಬಾರದು. ಸಂಘಟನೆಯೇ ಮುಖ್ಯ ಗುರಿಯಾಗಬೇಕು. ರಾಜ್ಯದಲ್ಲಿ ಈಗಿರುವ ಪರಿಸ್ಥಿತಿಯನ್ನು ಒಗ್ಗಟ್ಟಿನಿಂದ ಎದುರಿಸಿ ಸಾಧನೆ ಮಾಡಬಹುದಾಗಿದೆ. ಪ್ರಾಮಾಣಿಕವಾಗಿ ಪಕ್ಷಕ್ಕಾಗಿ ಎಲ್ಲರೂ ದುಡಿಯಬೇಕು ಎಂದು ದಿನೇಶ್ ಗುಂಡೂರಾವ್ ಕರೆ ನೀಡಿದರು.
ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಅಧಿಕಾರದಲ್ಲಿರುವ ವ್ಯಕ್ತಿ ಪಕ್ಷದ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಪಕ್ಷದಲ್ಲಿ ಒಗ್ಗಟ್ಟು ಮುಖ್ಯ. ಆಂತರಿಕ ಶತೃತ್ವವಿದ್ದರೆ ಪಕ್ಷ ಬೆಳೆಯಲು ಸಾಧ್ಯವಿಲ್ಲ ಎಂದರು.
ಪಕ್ಷ ತೊರೆದರೆ ಎಂತಹ ದೊಡ್ಡ ವ್ಯಕ್ತಿಗೂ ಪೆಟ್ಟು ಬೀಳುತ್ತದೆ ಎನ್ನುವುದಕ್ಕೆ ದೇವರಾಜ ಅರಸು ಅವರೇ ಸಾಕ್ಷಿ. ಈ ಬಾರಿ ಸಂಸತ್ ಚುನಾವಣೆಯಲ್ಲಿ ಕಾರ್ಯಕರ್ತರು, ಪಕ್ಷದ ಮುಖಂಡರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರೂ ಚುನಾವಣೆಯಲ್ಲಿ ಸೋಲಾದರೆ ಅದನ್ನು ಒಪ್ಪಿಕೊಳ್ಳಬಹುದು. ಆದರೆ ನಮ್ಮವರೇ ನಮಗೆ ವಿರೋಧಿಯಾಗಿ ಕೆಲಸ ಮಾಡುವುದು ಸರಿಯಲ್ಲ ಎಂದು ವಿಷಾದಿಸಿದರು.
ನಮ್ಮ ಪಕ್ಷದಲ್ಲಿ ಎರಡು ಬಾರಿ ಮುಖ್ಯಮಂತ್ರಿ ಆದವರು ಪಕ್ಷದ ಅಧ್ಯಕ್ಷರಾಗಿದ್ದವರು ಪಕ್ಷ ಬಿಟ್ಟು ಹೋಗಿದ್ದಾರೆ. ಕಾಂಗ್ರೆಸ್ ಬಿಟ್ಟ ಮೇಲೆ ಅವರಿಗೆ ಏನು ಗೌರವ ಸಿಕ್ಕಿದೆ. ಯಾವ ಗೌರವ ಇದೆ ಎನ್ನುವುದು ಈಗ ಸ್ಪಷ್ಟವಾಗುತ್ತಿದೆ ಎಂದು ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ರಾಜೀವ್ ಗಾಂಧಿ ಚರಿಷ್ಮಾವುಳ್ಳ ವ್ಯಕ್ತಿ. ಜನರನ್ನು ಆಕರ್ಷಿಸುತ್ತಿದ್ದ ವ್ಯಕ್ತಿತ್ವ ಅವರದಾಗಿತ್ತು. ಮಹಿಳೆಯರಿಗೆ ರಾಜಕೀಯ ಸ್ಥಾನ ಮಾನ, ಹಿಂದುಳಿದ ದಲಿತ ಅಲ್ಪಸಂಖ್ಯಾತರಿಗೆ ಅವಕಾಶ ಮಾಡಿಕೊಟ್ಟವರು ರಾಜೀವ್ ಗಾಂಧಿ. ಆರ್ಯಭಟ, ಚಂದ್ರಯಾನ ಎಲ್ಲಾ ರಾಕೆಟ್ ಗಳನ್ನು ಮೋದಿ ಇಂದು ಬಿಡುತ್ತಿರುವುದಕ್ಕೆ ಕಾರಣ ರಾಜೀವ್ ಗಾಂಧಿ. ಪೋಕ್ರಾನ್ ಅಣುಬಾಂಬ್ ಸ್ಫೋಟ ಮಾಡಿದ ಮೊದಲ ವ್ಯಕ್ತಿ ಇಂದಿರಾಗಾಂಧಿ. ಕಾಂಗ್ರೆಸ್ ನ ಎಲ್ಲಾ ಕಾರ್ಯಕ್ರಮಗಳಿಗೆ ಮೋದಿ ದೀಪ ಹಚ್ಚಿ ತಮ್ಮದೇ ಕಾರ್ಯಕ್ರಮಗಳು ಎಂದು ಬಿಂಬಿಸಿ ಜನರನ್ನು ಮೋಡಿ ಮಾಡುತ್ತಿದ್ದಾರೆ ಎಂದರು.
ನಮ್ಮ ಕಾರ್ಯಕ್ರಮಗಳನ್ನು ನಮ್ಮ ಜನ ಎಲ್ಲಿಯೂ ಧೈರ್ಯವಾಗಿ ಹೇಳುತ್ತಿಲ್ಲ. ನಮ್ಮ ಪಕ್ಷ ಸುಳ್ಳು ಹೇಳಿಲ್ಲ. ಕೆಲಸ ಮಾಡಿದೆ. ಸುಳ್ಳು ಹೇಳುತ್ತಿರುವುದು ಮೋದಿ ಮತ್ತು ಅಮಿತ್ ಷಾ. ಗಾಂಧೀಜಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು. ಹೀಗಾಗಿ ಬಿಜೆಪಿಯಾಗಲೀ ಸಂಘಪರಿವಾರವಾಗಲೀ ಗಾಂಧೀಜಿ ಬಗ್ಗೆ ಮಾತನಾಡುವುದಿಲ್ಲ. ಮೋದಿ ಯಾವಾಗಾದರೂ ಒಮ್ಮೆ ಮಾತನಾಡುತ್ತಾರಷ್ಟೆ. ಆದರೆ ಆರ್.ಎಸ್.ಎಸ್ ನ ಮೋಹನ್ ಭಾಗವತ್ ಗಾಂಧಿ ಬಗ್ಗೆ ಮಾತನಾಡುವುದೇ ಇಲ್ಲ ಎಂದರು.
ಯುವಕರಿಂದ ಹಿಡಿದು ವಯೋವೃದ್ಧರಿಗೆ ಪಕ್ಷದ ಬಗ್ಗೆ ಹೇಳಬೇಕು. ದೇಶದಲ್ಲಿ ಕಾಂಗ್ರೆಸ್ ಗೆ 12 ಕೋಟಿ ಮತದಾರರಿದ್ದಾರೆ, ಇರುವ ಮತಗಳೆಲವನ್ನೂ ಉಳಿಸಿ ಬೇರೆ ಮತಗಳನ್ನೂ ಪಕ್ಷಕ್ಕೆ ಬರುವಂತೆ ಮಾಡಿದಾಗ ಮಾತ್ರ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯ. ಬಾಯಿಂದ ಬಾಯಿಗೆ ಪ್ರಚಾರ ಮಾಡಬೇಕು. ಬರೀ ಜಿಂದಾಬಾದ್ ಜಿಂದಾಬಾದ್ ಎಂದರೆ ಸಾಲದು. ಕಷ್ಟ ಕಾಲದಲ್ಲಿ ಬಹಳಜನ ಬರುವುದಿಲ್ಲ. ಹಿಂದೆ ನಾವು ಸೋತುಗೆದ್ದ ಇತಿಹಾಸವಿದೆ. ಮನಸು ಬಿಚ್ಚಿ ಕೆಲಸಮಾಡಿ ಪಕ್ಷ ಸಂಘಟನೆ ಮಾಡದೇ ಹೋದರೆ ಮುಂದಿನ ಪೀಳಿಗೆಗೆ ಅನ್ಯಾಯ ಮಾಡಿದಂತೆ. ದೇಶದಲ್ಲಿ ಇರುವುದೇ ಎರಡೂ ಪಕ್ಷ. ಬಿಜೆಪಿಗೆ ದಲಿತರು, ರೈತರು, ಅಲ್ಪಸಂಖ್ಯಾತರ ಬಗ್ಗೆ ಕಾಳಜಿಯಿಲ್ಲ. ಪಕ್ಷವನ್ನು ಎಲ್ಲರೂ ಸಂಘಟಿಸಲೇಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಹುರುಪು ತುಂಬಿದರು.
ಮೋದಿ ಜನರಿಗಾಗಿ ಏನೂ ಮಾಡಿಲ್ಲ. ಮಾಡಿರುವುದು ಕೇವಲ ಅಧಿಕಾರಕ್ಕಾಗಿ ಮಾತ್ರ. ನಾವು ಸಾಮಾಜಿಕ ನ್ಯಾಯಕ್ಕಾಗಿ ಕೆಲಸ ಮಾಡುವವರು. ಇದನ್ನೆಲ್ಲ ಜನರಿಗೆ ಹೇಳಿ. ಕರ್ನಾಟಕ್ಕಾಗಿ ದೇಶಕ್ಕಾಗಿ ನೀಡಿದ ಬಜೆಟ್ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಿ. ಇಂದಿರಾ ಗಾಂಧಿ ರಾಜೀವ್ ಗಾಂಧಿ ದೇಶಕ್ಕಾಗಿ ಪ್ರಾಣಕೊಟ್ಟವರು. ಅವರು ಸಾರಿದ ದೇಶದ ಐಕ್ಯತೆಯ ಕರೆಯನ್ನು ಪಾಲಿಸಬೇಕು. ದೇಶದ ಒಗ್ಗಟ್ಟಿಗಾಗಿ ಪಕ್ಷ ಸಂಘಟಿಸಬೇಕು ಎಂದರು.
ನೆಹರು ಅವರು 14 ವರ್ಷ 9 ತಿಂಗಳು ಕಾರಾಗೃಹವಾಸ ಮಾಡಿದ್ದಾರೆ. ಬಿಜೆಪಿ ಆರ್ ಎಸ್ ಎಸ್ ನಿಂದ ಯಾರಾದರೂ ದೇಶಕ್ಕಾಗಿ ಜೈಲುವಾಸ ಮಾಡಿದ ನಿದರ್ಶನವಿದೆಯೇ ಎಂದು ಪ್ರಶ್ನಿಸಿದರು.
ರೈತರಿಗೆ ಸಹಾಯ ಮಾಡಿ, ಅಲ್ಪಸಂಖ್ಯಾತರು ದಲಿತರನ್ನು ಕೊಲ್ಲಬೇಡಿ ಎಂದು ಹೇಳುವವರನ್ನು ಬಿಜೆಪಿ ದೇಶದ್ರೋಹಿ ಎಂದು ಟೀಕಿಸುತ್ತದೆ. ದಲಿತ ಅಲ್ಪಸಂಖ್ಯಾತರಿಗೆ ನೀಡಿದ ಮೀಸಲಾತಿ ಬಗ್ಗೆ ಪುನರ್ ಪರಿಶೀಲಿಸುವ ಬಗ್ಗೆ ಮೋಹನ್ ಭಾಗವತ್ ಹೇಳಿರುವುದನ್ನು ಖಂಡಿಸುವುದಾಗಿ ಅವರು ಹೇಳಿದರು.
200 ಜನ ಆರ್ ಎಸ್ ಎಸ್ ನವರು ನನ್ನ ಸೋಲಿಗೆ ಕಾರಣ. ಒಂದು ವರ್ಷದ ಹಿಂದೆಯೇ ಸಂಬಳ ಕೊಟ್ಟು ಜನರನ್ನು ನನ್ನ ಕ್ಷೇತ್ರದಲ್ಲಿ ಕೆಲಸಕ್ಕೆ ಇಡಲಾಗಿತ್ತು. ಬಿಜೆಪಿ ಹಾಗೂ ಸಂಘಪರಿವಾರದ ಸಿದ್ಧಾಂತ ಸೋಲಿಸದ ಹೊರತು ಪರಿಶುದ್ಧ ಸಮಾಜ, ಜಾತ್ಯಾತೀತ ವ್ಯವಸ್ಥೆ ತರಲು ಸಾಧ್ಯವಿಲ್ಲ. ಕಾಂಗ್ರೆಸ್ ಉಳಿವಿಗೆ ಬಿಜೆಪಿ ಆರ್ ಎಸ್ ಎಸ್ ನ ಐಡಿಯಾಲಜಿ ತೊಲಗಬೇಕು ಎಂದು ಒತ್ತಿ ಹೇಳಿದರು.
ದೇವರಾಜ್ ಅರಸು ಸಂಪುಟದಲ್ಲಿ ಕೆಲಸ ಮಾಡುವ ಅವಕಾಶ ನನಗೆ ಲಭಿಸಿತ್ತು. ಪ್ರಧಾನಿ ಇಂದಿರಾಗಾಂಧಿ ಅವರು ನೀಡಿದ ಹತ್ತು ಅಂಶಗಳ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಜಾರಿಗೊಳಿಸಲಾಯಿತು. ಇಂದಿರಾಗಾಂಧಿ ಅವರ ಕಾರ್ಯಕ್ರಮವನ್ನು ಒಂದು ಗುಂಪು ವಿರೋಧಿಸಿ ಕಾಂಗ್ರೆಸ್ ಓ ಪಕ್ಷ ಸ್ಥಾಪಿಸಿ ಬೇರೆಯಾದರು. ಆಗ ಯುವಕರನ್ನೆಲ್ಲಾ ಒಗ್ಗೂಡಿಸಿ ಇಂದಿರಾಗಾಂಧಿ ಕಾಂಗ್ರೆಸ್ ಐ ಪಕ್ಷ ಕಟ್ಟಿದರು ಎಂದರು.
ಅರಸು ಅವರು ಜನಪರ ಕೆಲಸಗಳನ್ನು ನೀಡುವ ಮೂಲಕ ಪಕ್ಷ ಕಟ್ಟಿದರು. ಮುಖ್ಯಮಂತ್ರಿಯಾಗಿ ಭೂಸುಧಾರಣೆ ಕಾರ್ಯಕ್ರಮ ಜಾರಿಗೊಳಿಸಿದರು. 20 ಅಂಶಗಳ ಕಾರ್ಯಕ್ರಮಗಳನ್ನು ಅರಸು ಮಂತ್ರಿಮಂಡಲ ಬಹಳ ನಿಷ್ಠೆಯಿಂದ ಜಾರಿಗೊಳಿಸಿದ ಪರಿಣಾಮ ಪಕ್ಷ ಬಲವಾಗಲು ಕಾರಣವಾಯಿತು ಎಂದು ಖರ್ಗೆ ಅಭಿಪ್ರಾಯಪಟ್ಟರು.
ಕಾರ್ಯಕ್ರದಲ್ಲಿ ರಾಜೀವ್ ಗಾಂಧಿ ಕುರಿತ ಹತ್ತು ನಿಮಿಷಗಳ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.
ವೇದಿಕೆಯಲ್ಲಿ ಕೆಪಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್, ಮಾಜಿ ಸಂಸದರಾದ ವೀರಪ್ಪ ಮೊಯ್ಲಿ, ಕೆ.ಹೆಚ್.ಮುನಿಯಪ್ಪ, ಮಾಜಿ ಸಚಿವರಾದ ಪ್ರಿಯಾಂಕ್ ಖರ್ಗೆ, ಡಾ.ಜಿ.ಪರಮೇಶ್ವರ್, ಕೆ.ಜೆ.ಜಾರ್ಜ, ಕೃಷ್ಣಬೈರೇಗೌಡ, ಡಿ.ಕೆ.ಶಿವಕುಮಾರ್, ಹೆಚ್.ಕೆ.ಪಾಟೀಲ್, ರಾಮಲಿಂಗಾರೆಡ್ಡಿ, ಆಂಜನೇಯ, ವಿವಿಧ ಘಟಕಗಳ ಪದಾಧಿಕಾರಿಗಳು, ಶಾಸಕರು, ಮೇಲ್ಮನೆ ಸದಸ್ಯರು ಉಪಸ್ಥಿತರಿದ್ದರು.