ಮಂಜುನಾಥಸ್ವಾಮಿ ದೇವಾಲಯದ ನಂದಾ ದೀಪ ಆರಿದೆ ಎಂಬುದು ಸುಳ್ಳು : ವೀರೇಂದ್ರ ಹೆಗ್ಗಡೆ ಸ್ಪಷನೆ

ಮಂಗಳೂರು, ಮಾ 27, ಧಾರ್ಮಿಕ ಶ್ರದ್ಧಾಕೇಂದ್ರ ಧರ್ಮಸ್ಥಳ ಮಂಜುನಾಥಸ್ವಾಮಿ ದೇವಾಲಯದ ನಂದಾ ದೀಪ ಆರಿದೆ ಎಂಬುದು ಕೇವಲ ವದಂತಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಸುಳ್ಳು ಸುದ್ದಿ ಹಬ್ಬಿದೆ. ಇದಕ್ಕೆ ಯಾರೂ ಕಿವಿಗೊಡಬಾರದು, ಇವೆಲ್ಲಾ ಅಪಪ್ರಚಾರದ ಮಾತುಗಳು ಎಂದು ಹೇಳಿದ್ದಾರೆ.ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯದ ನಂದ ದೀಪಾ ನಂದಿ ಹೋಗಿದೆ. ಹೀಗಾಗಿ, ಎಲ್ಲರೂ ತಮ್ಮ ಮನೆಯ ಮುಂದೆ ದೀಪ ಹಚ್ಚಿ ಇಡಬೇಕು ಎನ್ನುವ ಸುದ್ದಿ ರಾತ್ರೋರಾತ್ರಿ ಹರಿದಾಡಿ, ಭಕ್ತರು ತಬ್ಬಿಬ್ಬಾಗಿದ್ದರು.ಸಾಮಾಜಿಕ ತಾಣ ಮತ್ತು ಟಿವಿ ಮಾಧ್ಯಮಗಳಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ದೇವರ ನಂದಾದೀಪ ನಂದಿ ಹೋಗಿದೆ ಎಂಬ ಅಪಪ್ರಚಾರದ ಸುದ್ದಿಗಳು ಹರಿದಾಡುತ್ತಿವೆ. ಇಂತಹ ವದಂತಿಗೆ ಯಾರೂ ಕಿವಿಗೊಡಬೇಡಿ ಎಂದು ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.
ಈ ವದಂತಿಯಿಂದ ಎಲ್ಲರೂ ದೂರವಿದ್ದು ಲೋಕಕ್ಕೆ ಬಂದಿರುವ ಕೊರೊನಾ ಎಂಬ ಮಹಾಮಾರಿಯನ್ನು ಮನುಜ ಕುಲದಿಂದ ದೂರಮಾಡಲು ಅವರವರ ಮನೆಯ ಒಳಗಡೆಯೇ ಇದ್ದು, ಶ್ಮಂಜುನಾಥಸ್ವಾಮಿಯನ್ನು ಪ್ರಾರ್ಥಿಸಿಕೊಳ್ಳಿ  ಎಂದು ತಿಳಿಸಿದ್ದಾರೆ.ಶ್ರೀಕ್ಷೇತ್ರ ಧರ್ಮಸ್ಥಳದ ದೇವಾಲಯದಲ್ಲಿ ಶ್ರೀಮಂಜುನಾಥನ ನಂದಾ ದೀಪ ಇದ್ದಕ್ಕಿದ್ದಂತೆ ನಂದಿ ಹೋಗಿದೆ. ದೇವಾಲಯದ ದೀಪ ಈ ಹಿಂದೆ ಎಂದೂ ನಂದಿರಲಿಲ್ಲ. ಹೀಗಾಗಿ, ಇದು ಅಶುಭ ಸೂಚನೆಯಾಗಿದೆ. ಎಲ್ಲಾ ಭಕ್ತರು ತಮ್ಮ ಮನೆ ಮುಂದೆ ದೀಪ ಹಚ್ಚಿ ಇಡಬೇಕು ಎನ್ನುವ ಸುದ್ದಿ ಫೋನ್ ಕರೆಗಳ ಮೂಲಕ, ಸಾಮಾಜಿಕ ಜಾಲತಾಣದಲ್ಲಿ ಹಬ್ಬಿತು. ಹೀಗಾಗಿ ಈ ಮಾತನ್ನು ನಿಜವೆಂದು ತಿಳಿದು ಇಡೀ ರಾತ್ರಿ ಭಕ್ತರೆಲ್ಲರೂ ಜಾಗರಣೆ ಮಾಡಿದ್ದರು.